ವಿಜಯಪುರ(ದೇವನಹಳ್ಳಿ): ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳು ವಾಣಿಜ್ಯ ಪರವಾನಗಿ ಪಡೆಯಬೇಕೆಂಬ ಪುರಸಭೆ ನೀಡಿರುವ ನೋಟಿಸ್‌ಗೆ ಪಟ್ಟಣದ ನೇಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಿಯೂ ಮಗ್ಗ ನಡೆಸುವವರು ಪರವಾನಗಿ ಪಡೆದುಕೊಳ್ಳಬೇಕೆಂಬ ನಿಯಮ ಇಲ್ಲ. ಮಗ್ಗ ವಾಣಿಜ್ಯ ವ್ಯಾಪ್ತಿಗೆ ಬರುವುದಿಲ್ಲ. ಗುಡಿ ಕೈಗಾರಿಕೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ವಾಣಿಜ್ಯ ಪರವನಾಗಿಗೆ ಒತ್ತಾಯಿಸಬಾರದು ಎಂದು ಪಟ್ಟಣ ನೇಕಾರರು ಸೋಮವಾರ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಗ್ಗ ನಡೆಸಿಕೊಂಡು ಜೀವನ ಸಾಗಿಸುವುದೇ ಕಷ್ಟವಾಗಿದೆ. ಇದರ ನಡುವೆ ಪುರಸಭೆಯವರು ವಾಣಿಜ್ಯ ಪರವಾನಗಿ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿರುವುದು ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ಮಗ್ಗಕ್ಕೆ ₹1 ಸಾವಿರದಂತೆ ಶುಲ್ಕಕಟ್ಟುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಎಂದು ನೇಕಾರ ಅನಿಲ್ ಕುಮಾರ್ ಹೇಳಿದರು.
ನಾವು ತಯಾರಿಸಿದ ಸೀರೆಗಳನ್ನು ರಾಜ್ಯ ಸರ್ಕಾರ ಖರೀಸುವುದಿಲ್ಲ. ಸೀರೆಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಳ್ಳಬೇಕು. ಅಲ್ಲಿ ಮಾರಾಟ ಆಗದಿದ್ದರೆ ಸೀರೆಗಳು ಮನೆಯಲ್ಲಿಯೇ ಉಳಿಯುತ್ತವೆ. ಮಗ್ಗದಿಂದ ನಿರೀಕ್ಷಿತ ಹಾಗೂ ಲಾಭ ತರುವ ಆದಾಯ ಬರುತ್ತಿಲ್ಲ. ಇದರ ನಡುವೆ ಶುಲ್ಕ ಪಾವತಿಸಿ ಪರವಾನಗಿ ಪಡೆದುಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.
ಸರ್ಕಾರದಿಂದ ಈ ವರ್ಷ ಗುರಿ ನಿಗದಿಪಡಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ವಾಣಿಜ್ಯ ಪರವಾನಗಿ ಕಡ್ಡಾಯವಾಗಿ ಪಡೆಯಬೇಕು ಎನ್ನುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಪಟ್ಟಣದಲ್ಲಿ ಒಟ್ಟು 600 ಮಗ್ಗಗಳಿವೆ. 600ಕ್ಕೂ ಹೆಚ್ಚು ಕುಟುಂಬಗಳವರು ಇದೇ ಕಸುಬಿನಲ್ಲೆ ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರದಿಂದ ಪರವಾನಗಿ ಮಾಡಿಸಬೇಕು ಎಂಬ ನಿರ್ದೇಶನವಿದ್ದರೆ ನಮಗೆ ಆದೇಶ ಕೊಡಿ ಎಂದು ಅಧಿಕಾರಿಗಳನ್ನು ಕೇಳಿದ್ದೇವೆ ಎಂದು ನೇಕಾರ ಮಂಜುನಾಥ್ ತಿಳಿಸಿದರು.
ನೇಕಾರರಾದ ನಾರಾಯಣಸ್ವಾಮಿ, ಮೂರ್ತಿ, ಮಹೇಶ್, ಮಂಜುನಾಥ್, ಕೇಶವಮೂರ್ತಿ ಇದ್ದರು.
Quote - ಪುರಸಭೆಯಿಂದ ಪರವಾನಗಿ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಸರ್ಕಾರದ ನಿಯಮ ಅನ್ವಯ ನಾವು ತಿಳಿಸಿದ್ದೇವೆ. ಸರ್ಕಾರದ ನಿರ್ದೇಶನ ಮೀರಿ ಏನೂ ಮಾಡಲಿಕ್ಕೆ ಸಾಧ್ಯವಿಲ್ಲ. ಪರವಾನಗಿ ಪಡೆಯುವುದರಿಂದ ನೇಕಾರರಿಗೆ ಅನುಕೂಲ ಜಿ.ಆರ್.ಸಂತೋಷ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.