ADVERTISEMENT

ಅಭಿವೃದ್ಧಿಗೆ ಹೆಚ್ಚಿನ ಅನುದಾನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 5:12 IST
Last Updated 30 ಅಕ್ಟೋಬರ್ 2017, 5:12 IST

ನಿಪ್ಪಾಣಿ: ‘ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ₹ 650 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ತಾಲ್ಲೂಕಿನ ಶೆಂಡೂರ ಗ್ರಾಮದಲ್ಲಿ ₹ 50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮದ ಮುಖ್ಯರಸ್ತೆಗಳ ದುರಸ್ತಿ, ವಸತಿ ರಹಿತರಿಗೆ ವಸತಿ ಸೌಲಭ್ಯ, ಪಿಂಚಣಿ ಸೇವೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ವಿತರಣೆ.. ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ’ ಎಂದರು.

ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜಯ ಶಿಂತ್ರೆ, ‘ಕೇವಲ ಸಮಾಜಕ್ಕಾಗಿ ಶ್ರಮಿಸುವ ಹಾಗೂ ಪಕ್ಷವನ್ನು ಬಲಿಷ್ಠಗೊಳಿಸುವ ಉತ್ಕೃಷ್ಠ ಗುಣಗಳುಳ್ಳ ಕಾರ್ಯಕರ್ತರೇ ಬಿಜೆಪಿಯ ಶಕ್ತಿಯಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದ್ದು, ಆಗ ಶಾಸಕಿ ಶಶಿಕಲಾ ಜೊಲ್ಲೆ ಅವರು ಸಚಿವೆಯಾಗಲಿದ್ದಾರೆ’ ಎಂದರು.

ADVERTISEMENT

‘ಅಭಿವೃದ್ಧಿ ಕಾಣದ ಈ ಭಾಗದಲ್ಲಿಯ ಶೇಂಡೂರನಂತಹ ಹಳ್ಳಿಗಳಿಗೆ ಶಶಿಕಲಾ ಅವರು ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿಸಿ ಅಭಿವೃದ್ಧಿ ಕೈಗೊಂಡಿದ್ದಾರೆ. ಅಲ್ಲದೆ, ಸರ್ಕಾರಿ ಸೌಲಭ್ಯಗಳು ಜನರಿಗೆ ತಲುಪವಂತೆ ಮಾಡಿದ್ದಾರೆ’ ಎಂದು ಹೊಗಳಿದರು.

ಗ್ರಾಮಸ್ಥ ಬಾಳಾಸಾಹೇಬ ಪಾಟೀಲ, ಕುಮಾರ ಪಾಟೀಲ ಮಾತನಾಡಿದರು. ಶೆಂಡೂರ ಗ್ರಾಮದಲ್ಲಿಯ ಮಹಾಕಾಳಿ ಮಹಾಸಂಸ್ಥಾನದ ಓಂ ಶಕ್ತಿ ದೇವಸ್ಥಾನದ ಯಾತ್ರಿ ನಿವಾಸದ ನಿರ್ಮಾಣ ಕಾಮಗಾರಿಗೆ ಮಂಜೂರಾದ ₹25 ಲಕ್ಷ ಅನುದಾನದ ಆದೇಶ ಪತ್ರವನ್ನು ದೇವಸ್ಥಾನದ ಸಮಿತಿ ಸದಸ್ಯರಿಗೆ ಹಸ್ತಾಂತರಿಸಲಾಯಿತು.ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ಶೆಂಡೂರ ಗ್ರಾಮದ ಅರ್ಹ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಿಸಲಾಯಿತು.

ಸಹಕಾರ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ಧು ನರಾಟೆ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧಾಬಾಯಿ ಧೋಂಡಫೋಡೆ, ನಗರ ಬಿಜೆಪಿ ಅಧ್ಯಕ್ಷ ಜಯವಂತ ಭಾಟಲೆ, ಬಾಳಾಸಾಹೇಬ ದೇಸಾಯಿ, ಅಮಿತ ಸಾಳವೆ, ಪಂಕಜ ದೇಸಾಯಿ, ಸಂಪದಾ ಗಿರಿ, ಸೀತಾಬಾಯಿ ನಾಯಿಕ, ಪ್ರವೀಣ ಗಿರಿ, ಪಾಂಡುರಂಗ ತೊಂದಲೆ, ತುಕಾರಾಮ ಧೋಂಡಫೋಡೆ, ಚಂದು ಮಾನೆ, ರವಿ ಲಾಡ, ಬಾಬು ಚೌಗುಲೆ, ಸಂತೋಷ ನಾಯಿಕ, ಕುಮಾರ ಪಾಟೀಲ, ರಾಮದಾಸ ವರುಟೆ, ಸಂತೋಷ ಚೌಗುಲೆ ಹಾಗೂ ಪ್ರವೀಣ ಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.