ADVERTISEMENT

ಆಶ್ರಯ ಕಾಲೊನಿ ಜನರ ಬದುಕು ಅತಂತ್ರ!

ಮನೆಯೊಳಗೆ ನುಗ್ಗಿದ ನೀರು

ಪ್ರಜಾವಾಣಿ ವಿಶೇಷ
Published 25 ಜುಲೈ 2013, 7:54 IST
Last Updated 25 ಜುಲೈ 2013, 7:54 IST
ಬೆಳಗಾವಿ ರುಕ್ಮಿಣಿ ನಗರದ ಆಶ್ರಯ ಕಾಲೊನಿಯ ಮನೆಯೊಂದಕ್ಕೆ ನುಗ್ಗಿದ ನೀರನ್ನು ಮಹಿಳೆಯೊಬ್ಬರು ತಟ್ಟೆಯಲ್ಲಿ ತುಂಬಿಕೊಂಡು  ಹೊರಗೆ ಹಾಕುತ್ತಿರುವುದು.
ಬೆಳಗಾವಿ ರುಕ್ಮಿಣಿ ನಗರದ ಆಶ್ರಯ ಕಾಲೊನಿಯ ಮನೆಯೊಂದಕ್ಕೆ ನುಗ್ಗಿದ ನೀರನ್ನು ಮಹಿಳೆಯೊಬ್ಬರು ತಟ್ಟೆಯಲ್ಲಿ ತುಂಬಿಕೊಂಡು ಹೊರಗೆ ಹಾಕುತ್ತಿರುವುದು.   

ಬೆಳಗಾವಿ: `ಮಳಿ ಬಂತಂದ್ರ ಎದಿ ಢವ, ಢವ ಹೊಡ್ಕೋತೇತ್ರಿ. ಮಳಿ ಹೋಗುಮಟಾ ಹೊಟ್ಟಿಗೆ ಹಿಟ್ಟು ಇಲ್ಲ, ಕಣ್ಣಿಗೆ ನಿದ್ದೀನೂ ಇಲ್ಲ. ಇಂತಾದ್ರಾಗ್ ಸಣ್ಣ ಮಕ್ಳಾ ಮರೀನ್ ಹೇಂಗ ಸಾಕೂದ್ ನೋಡ್ರಿ. ಮೊಣಕಾಲ್ಮಟಾ ಮನ್ಯಾಗ್ ನೀರ ನಿಂತ್ರ ನಾವ್ ಬದುಕೋದ್ ಹೇಂಗ್ರಿ' ಎಂದು ಮನೆಗೆ ನುಗ್ಗಿದ ನೀರನ್ನು ಹೊರಹಾಕುತ್ತಿದ್ದ ಮಹಿಳೆ ಯಲ್ಲವ್ವ ಶಹಾಪುರ ಅಳಲನ್ನು ತೋಡಿಕೊಂಡರು.

ಇದು ಇಲ್ಲಿನ ರುಕ್ಮಿಣಿ ನಗರದ ಆಶ್ರಯ ಕಾಲೊನಿಯ ಪರಿಸ್ಥಿತಿ ಹೇಗಿದೆ ಎಂಬುದು ಯಲ್ಲವ್ವ ಅವರ ಮಾತಿನಿಂದಲೇ ಗೊತ್ತಾಗುತ್ತದೆ. ಬಡ ಜನರಿಗೆ `ಆಶ್ರಯ' ನೀಡಬೇಕಿದ್ದ ಆಶ್ರಯ ಕಾಲನಿ ಯಾವುದೇ ಸೌಕರ್ಯಗಳಿಲ್ಲದೇ ನರಳುತ್ತಿರುವುದಕ್ಕೆ ಈ ಮಾತು ಸಾಕ್ಷಿ.

ಕಳೆದ 10 ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ರುಕ್ಮಿಣ ನಗರದಲ್ಲಿನ ಮನೆಯೊಳಗೆ ನೀರು ನುಗ್ಗಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಆಶ್ರಯ ಕಾಲೊನಿಯಲ್ಲಂತೂ ಪರಿಸ್ಥಿತಿ ಹೇಳತೀರದು. ಆಶ್ರಯ ಕಾಲನಿಯಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆಗಳಲ್ಲಿ ಎಗ್ಗಿಲ್ಲದೇ ನೀರು ನುಗ್ಗುತ್ತಿದ್ದು, ಜನಜೀವನ ದುಸ್ತರವಾಗಿದೆ. ಮನೆಯ ತುಂಬ ನೀರು ನಿಲ್ಲುತ್ತಿದ್ದು, ಸ್ಥಳೀಯರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಆಶ್ರಯ ಕಾಲೊನಿಯ ಈ ಸಮಸ್ಯೆ ಇಂದು ನಿನ್ನೆಯದಲ್ಲ. ಕಾಲೊನಿ ನಿರ್ಮಾಣವಾಗುತ್ತಿದ್ದಂತೆ ಸಮಸ್ಯೆಗಳು ಸೃಷ್ಟಿಯಾದವು. ಬಡ ಜನರಿಗೆ ಮನೆಗಳೇನೋ ಸಿಕ್ಕವು, ಆದರೆ, ಯಾವುದೇ ಸೌಕರ್ಯ ಸಿಗಲಿಲ್ಲ.

`ಮಳಿ ನೀರಿನ ಜೊತೆಗೆ ಹಾವು, ಚೇಳು ಮನೆಯೊಳಗೆ ಬರುತ್ತಿವೆ. ಪ್ರತಿ ವರ್ಷ ಇಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಯಾವ ಅಧಿಕಾರಿಗಳೂ ನಮ್ಮ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ' ಎನ್ನುತ್ತಾರೆ ಯಲ್ಲವ್ವ.

`ಸರ್ಕಾರದಾವ್ರ ಬರೀ ಮನಿ ಕಟ್ಟಿ ಕೋಟ್ರ ಸಾಲೂಲ್ರಿ, ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು. ಇಡೀ ರಾಜ್ಯದಾಗ ಮಳಿ ಯಾವಾಗ ಬರ‌್ತೇತಂತ ಜನಾ ಕಾಯಾಕತ್ರ, ನಾವ್ ಮಳಿ ಯಾವಾಗ ಹೋಗ್ತೇತಿ ಅಂತ ದಾರಿ ಕಾಯಬೇಕಾಗೇತ್ರಿ. ನಮ್ಮ ಕಷ್ಟ ನೋಡಿಯಾದ್ರು, ಮನಿಗಳಿಗೆ ನೀರು ಬರಲ್ದಂಗ ಏನಾದ್ರ ವ್ಯವಸ್ಥಾ ಮಾಡೀದ್ರ ಬಾಳ ಛೊಲೋ ಆಗ್ತೇತ್ರಿ' ಎಂದು ಆಶ್ರಯ ಕಾಲನಿಯ ನಿವಾಸಿ ಸುನಂದಾ ಕುಂಟೆ ಹೇಳುತ್ತಾರೆ.

ಆಶ್ರಯ ಕಾಲೊನಿಯಲ್ಲಿ 1500 ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು ನಾಲ್ಕು ಸಾವಿರ ಜನರು ವಾಸಿಸುತ್ತಿದ್ದಾರೆ. ಸರ್ಕಾರವು ವಿವಿಧ ಯೋಜನೆಗಳಡಿಯಲ್ಲಿ ಇಲ್ಲಿ ಮನೆಗಳನ್ನು ನಿರ್ಮಿಸಿದೆ. ಆದರೆ, ಯಾವುದೇ ಸೌಲಭ್ಯ ಒದಗಿಸಿಲ್ಲ.

ಅವ್ಯವಸ್ಥೆಯ ಆಗರ: ಆಶ್ರಯ ಕಾಲೊನಿ ಮೂಲ ಸೌಕರ್ಯಗಳ ಕೊರತೆಯ ತಾಣವಾಗಿದೆ. ಇಲ್ಲಿನ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರು ಪೂರೈಕೆ, ಆರೋಗ್ಯಕರ ಪರಿಸರ ಯಾವುದೂ ಇಲ್ಲ. ಸ್ವಚ್ಛತೆಯಂತೂ ಕನಸಿನ ಮಾತು. ಆಶ್ರಯ ಕಾಲೊನಿಯ ಯಾವುದೇ ದಿಕ್ಕಿಗೆ ಕಣ್ಣು ಹಾಯಿಸಿದರೂ ಕಸದ ರಾಶಿಯೇ ಗೋಚರಿಸುತ್ತದೆ. ಇಲ್ಲಿನ ರಸ್ತೆಯ ಬದಿಗಳಲ್ಲಿ ತ್ಯಾಜ್ಯ ನರ್ತನವಾಡುತ್ತಿದ್ದು, ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ.

ಈ ಪ್ರದೇಶಗಳಲ್ಲಿ ಹಂದಿಗಳ ಹಾವಳಿಯೂ ಹೆಚ್ಚಾಗಿದ್ದು, ಜನರು ಬೇಸತ್ತು ಹೋಗಿದ್ದಾರೆ. ಹಂದಿಗಳು ಸ್ಥಳೀಯರಿಗೆ ತೊಂದರೆ ನೀಡುವ ಜೊತೆಗೆ ಗಲೀಜನ್ನು ಸೃಷ್ಟಿಸುತ್ತಿವೆ. ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಈ ಕಾಲನಿಯಲ್ಲಿ 1 ರಿಂದ 5ನೇ ತರಗತಿಯವರೆಗೆ ಕನ್ನಡ ಶಾಲೆ, 1ರಿಂದ 7ನೇ ತರಗತಿಯವರೆಗೆ ಉರ್ದು ಶಾಲೆ ಹಾಗೂ 6 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಸಮಸ್ಯೆ ಇಲ್ಲ.

`ಆಶ್ರಯ ಕಾಲೊನಿಯಲ್ಲಿ ಈ ಹಿಂದೆ ಇರುವಷ್ಟರ ಮಟ್ಟಿಗೆ ಸಮಸ್ಯೆಗಳಿಲ್ಲ. ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ನಿವಾಸಿಗಳಿಗೆ ವೈಯಕ್ತಿಕವಾಗಿ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ. ಶೀಘ್ರವಾಗಿ ಒಳಚರಂಡಿ ವ್ಯವಸ್ಥೆ ಕೈಗೊಳ್ಳಲಾಗುವುದು. ಈ ವರ್ಷದಲ್ಲಿ ಮಳೆ ನೀರು ಆಶ್ರಯ ಕಾಲೊನಿಯ ಯಾವುದೇ ಮನೆಗೆ ನುಗ್ಗಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು' ಎಂದು ಪಾಲಿಕೆಯ ನಗರ ಎಂಜಿನಿಯರ್ ಆರ್.ಎಸ್.ನಾಯಕ `ಪ್ರಜಾವಾಣಿ' ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.