ADVERTISEMENT

ಎಳೆಯರು ಮೆಲುಕು ಹಾಕಿದ ಮಕ್ಕಳ ರಾಜ್ಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 9:10 IST
Last Updated 18 ಏಪ್ರಿಲ್ 2011, 9:10 IST

ಚನ್ನಮ್ಮನ ಕಿತ್ತೂರು: ‘ಗಿಡದಿಂದ ಹುಣಸಿ ಹಣ್ಣು ತಂದು ಕಾರ, ಉಪ್ಪ, ಬೆಲ್ಲ ಹಾಕಿ ಚಿಗಳಿ ಮಾಡಿ ತಿನ್ನುತ್ತ ಕಾಲ ಕಳೆಯುವ ಪ್ರತಿಯೊಂದು ಕ್ಷಣ ನಮ್ಮದೇ, ಅದುವೇ ಮಕ್ಕಳ ರಾಜ್ಯ...’
ಹೀಗೆಂದು ಅನಿಸಿಕೆ ವ್ಯಕ್ತಪಡಿಸಿದ್ದು ಸ್ಥಳೀಯ ಬಾಲಕಿ ಶ್ವೇತಾ ಬಬ್ಲಿ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ನಡೆದ ‘ಮಕ್ಕಳೊಂದಿಗೆ’ ಕಾರ್ಯಕ್ರಮದ ಈ ‘ಮಕ್ಕಳ ರಾಜ್ಯ’ದಲ್ಲಿ ಅವರೇ ಕೇಂದ್ರ ಬಿಂದುವಾಗಿದ್ದರು.
 

‘ಆಟ ಆಡುತ್ತ, ಶಾಲೆಯಲ್ಲಿ ಹಾಡು ಹಾಡುತ್ತ, ಕುಣಿದು ಕಲಿಯುತ್ತ, ಎಲ್ಲರೂ ಒಂದೇ ಎನ್ನುತ್ತ, ಎಲ್ಲರೊಂದಿಗೆ ಬೆರೆತು ಬಾಳುವ ಬಾಲ್ಯದ ಜೀವನ ಸುವರ್ಣಮಯವಾಗಿದೆ’ ಎಂದು ಎಂದು ಆಕೆ ಸ್ಮರಿಸಿದಳು.ಚುರುಕು, ಕೆಲಬಾರಿ ಅಷ್ಟೇ ಗಂಭೀರ ಪ್ರಶ್ನೆ ಎತ್ತುವ ಮೂಲಕ ದೊಡ್ಡವರ ಗಮನ ಸೆಳೆದರು. ಮೊಬೈಲ್ ಮಾಲಿನ್ಯ, ಮಕ್ಕಳ ಶೋಷಣೆ, ಪರಿಸರ ಸಂರಕ್ಷಣೆ, ಕನ್ನಡಾಭಿಮಾನ ಎಂದರೇನು? ಕಡಿಮೆಯಾಗುತ್ತಿರುವ ಮಕ್ಕಳ ಕನ್ನಡಾಭಿಮಾನ ಬೆಳೆಸಲು ಏನು ಕ್ರಮ ಕೈಗೊಳ್ಳಬೇಕು... ಈ ರೀತಿಯಾಗಿ ಅವರ ಕುತೂಹಲದ ಮತ್ತು ಅಷ್ಟೇ ಕಾಳಜಿ ಪೂರ್ವಕವಾದ ಪಶ್ನೆಗಳು ಇಮ್ಮಡಿಯಾಗುತ್ತಲೇ ಹೋದವು.
 

‘ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಏನು ಮಾಡಬೇಕು?’ ಎಂಬ ಶ್ವೇತಾಳ ಪ್ರಶ್ನೆಗೆ ಉತ್ತರಿಸಿದ ಗೌರಾದೇವಿ ತಾಳಿಕೋಟಿಮಠ ಅವರು, ‘ಪಾಲಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನೆಗೆ ಮುಂದಾಗಬೇಕು. ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಸಲಹೆ ಇತ್ತರು.
‘ಕನ್ನಡ ಅಭಿಮಾನ ಎಂದರೇನು?’ ಎಂಬ ಕಾದರವಳ್ಳಿಯ ಬಾಲಕ ರುದ್ರಪ್ಪ ಹತ್ತಿ ಪ್ರಶ್ನೆಗೆ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸನದಿ ಅವರೇ ಉತ್ತರಿಸಲು ಎದ್ದು ನಿಂತರು. ‘ಅಡುಗೆ ಮನೆಯಿಂದ ಕಾನೂನು ರಚನೆ ಮಾಡುವ ಅಡುಗೆ ಮನೆ (ಪಾರ್ಲಿಮೆಂಟ್)ವರೆಗಿನ ಪ್ರತಿಹಂತದಲ್ಲಿ ಕನ್ನಡ ಭಾಷೆಯನ್ನು ಮಾತನಾಡುವುದೇ ಕನ್ನಡಾಭಿಮಾನ ಎಂದು ಅವರು ವ್ಯಾಖ್ಯಾನಿಸಿದರು.

‘ಮೊಬೈಲ್ ಮಾಲಿನ್ಯದಿಂದ ಪಕ್ಷಿಜೀವ ಸಂಕುಲ ಅಪಾಯದ ಅಂಚಿನಲ್ಲಿದೆ’ ಎಂದು ಇತ್ತೀಚಿನ ದಶಕದ ಅವಿಷ್ಕಾರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಬಾಲಕ ರುದ್ರಪ್ಪ ಹತ್ತಿ.  ಆತನ ಪ್ರಶ್ನೆಗೆ ಉತ್ತರಿಸಿದ ಪ್ರೊ. ಸಂಗಮೇಶ ಗುಜಗೊಂಡ ಅವರು, ವಿಕಿರಣ ರಹಿತ ಗೋಪುರಗಳನ್ನು ಜೀವಜಲದ ಪ್ರದೇಶದಿಂದ ದೂರ ಸ್ಥಾಪಿಸಬೇಕು. ಅಂದಾಗ ಮಾತ್ರ ವಿಕಿರಣ ಮಾಲಿನ್ಯ ತಪ್ಪಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
 

ADVERTISEMENT

ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರವೇನು ಎಂದು ಶ್ವೇತಾ ಕೇಳಿದ ಪ್ರಶ್ನೆಗೆ ಅನಾವಶ್ಯಕವಾಗಿ ವಾಹನ ಚಾಲನೆ ಮಾಡುವುದರ ನಿಯಂತ್ರಣ ಕುರಿತು ಪಾಲಕರಿಗೆ ವಿನಂತಿ ಮಾಡುವುದು. ಮಕ್ಕಳು ಹುಟ್ಟಿದ ಹಬ್ಬ ಆಚರಿಸಿಕೊಳ್ಳುವ ಪ್ರತಿವರ್ಷ ಒಂದೊಂದು ಗಿಡ ಬೆಳೆಸುವ ನಿರ್ಧಾರ ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಗಂಗಾಧರ ಕೋಟಗಿ ಉತ್ತರಿಸಿದರು.
 

ಬಾಲ್ಯದಲ್ಲಿಯೇ ಮಕ್ಕಳಲ್ಲಿ ಓದುವ ಅಭಿರುಚಿ ಕುದುರಿಸಬೇಕು. ಮಕ್ಕಳು ರಚಿಸಿದ ಸಾಹಿತ್ಯ ಹಾಗೂ ಮಕ್ಕಳಿಗಾಗಿ ಬರೆದ ಸಾಹಿತ್ಯ ಕುರಿತು ಗಂಭೀರ ಚಿಂತನೆ ಮಾಡಬೇಕು ಎಂದು ಗುಜಗೊಂಡ ಪ್ರತಿಪಾದಿಸಿದರು.‘ಬೇರೆಬೇರೆ ಭಾಷೆಗಳಲ್ಲಿನ ಮಕ್ಕಳ ಸಾಹಿತ್ಯದ ಅನುವಾದ ಮಾಡುವ ಕೆಲಸವಾಗಬೇಕು. ಬೇರೆ ರಾಜ್ಯದಲ್ಲಿ ಮಕ್ಕಳ ಸಾಹಿತ್ಯ ಯಾವ ರೀತಿಯಿದೆ ಎಂಬ ಕಲ್ಪನೆ ಇಲ್ಲಿನವರಿಗೂ ಬರುತ್ತದೆ’ ಎಂದರು.
 

ಮಕ್ಕಳ ಸಾಹಿತ್ಯ ರಚನೆ ಕೆಲಸ ತುಂಬ ನಾಜೂಕಾದುದು. ಎಲ್ಲರೂ ಈ ಕ್ಷೇತ್ರವನ್ನು ತುಂಬ ಗಂಭೀರವಾಗಿ ಪರಿಗಣಿಸಬೇಕು. ಅಂದರೆ ಮಕ್ಕಳ ಸಾಹಿತ್ಯ ಸಮೃದ್ಧಿ ವೃದ್ಧಿಸುತ್ತದೆ’ ಎಂದು ತಿಳಿಸಿದರು.ಬಾಲಕಿಯರಾದ ಕಾದರವಳ್ಳಿಯ ಜಯಶ್ರೀ ಹಮ್ಮಣ್ಣವರ, ಮೂಡಲಗಿಯ ದೀಕ್ಷಾ ಶೆಟ್ಟಿ ಅವರೂ ಗೋಷ್ಟಿಯಲ್ಲಿ ಭಾಗವಹಿಸಿದ್ದರು.
 

ಗಂಗಾಧರ ಕೋಟಗಿ, ಬಿ.ಎಸ್.ಜಗಾಪೂರ, ಅನ್ನಪೂರ್ಣ ಹೊಸಪೇಟ, ಎಲ್.ಎಸ್. ಚೌರಿ, ಗೌರಾದೇವಿ ತಾಳಿಕೋಟಿಮಠ, ಅವಳೇಕುಮಾರ್ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಎಂ.ಆರ್. ಮುಲ್ಲಾ, ಅಕಬರ ಸನದಿ, ಎಂ.ಎಂ. ಸಂಗಣ್ಣವರ, ಅರುಣಕುಮಾರ ರಾಜಮಾನೆ, ಸುನಿತಾ ಮೊರಬ, ಬಿ.ವಿ. ನೇಸರಗಿ ವೇದಿಕೆಯಲ್ಲಿದ್ದರು.ವಿವೇಕ ಕುರಗುಂದ ಹಾಗೂ ಜಯಶ್ರೀ ಮಜ್ಜಗಿ ಗೋಷ್ಟಿ ನಿರ್ವಹಿಸಿದರು. ನಯನಾ ವಸ್ತ್ರದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.