ರಾಮದುರ್ಗ: ಸುರೇಬಾನದಿಂದ ಅವರಾದಿ ಗ್ರಾಮಕ್ಕೆ ಕಳ್ಳತನದಿಂದ ಸಾಗಿಸಿದ್ದ ಕಾಮಣ್ಣನ ಮೂರ್ತಿಯನ್ನು ಉಭಯ ಗ್ರಾಮಗಳ ಮುಖ್ಯಸ್ಥರು ಒಂದೆಡೆ ಸೇರಿ ಚರ್ಚಿಸಿ ಮರಳಿ ಮೂರ್ತಿಯನ್ನು ಸುರೇಬಾನ ಗ್ರಾಮಕ್ಕೆ ತರುವ ಸಮಯಕ್ಕೆ ಯುವಕರ ತಂಡ ವೊಂದು ಪೊಲೀಸರ ಮೇಲೆ ಕಲ್ಲು ತೂರಿದ ಘಟನೆ ಅವರಾದಿ ಗ್ರಾಮದಲ್ಲಿ ಸೋಮವಾರ ಜರುಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ಸಹ ಯುವಕರ ತಂಡದ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು ಎನ್ನಲಾಗಿದೆ. ಉಭಯ ಗ್ರಾಮದ ಮುಖಂಡರು ಹೊಂದಾಣಿಕೆ ಮಾಡಿಕೊಂಡು ಮುಂದಾಗುವ ಅನಾಹುತವನ್ನು ಜಾಗರೂಕತೆಯಿಂದ ತಪ್ಪಿಸಿದರು ಎಂದು ಇಲ್ಲಿಗೆ ಬಂದಿರುವ ವರದಿ ತಿಳಿಸಿದೆ.
ಸೋಮವಾರ ಬೆಳಿಗ್ಗೆ ಸುರೇಬಾನದ ಹೊಸಪೇಟ ಓಣಿಯಲ್ಲಿನ ಕಾಮಣ್ಣನ ಮೂರ್ತಿಯನ್ನು ಸಮೀಪದ ಅವರಾದಿ ಗ್ರಾಮದ ಕೆಲವರು ಕಳುವು ಮಾಡಿ ಸಾಗಿಸಿದ್ದರು. ಈ ಸುದ್ದಿ ಸುರೇಬಾನದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಮಯಕ್ಕೆ ಸರಿಯಾಗಿ ಉಭಯ ಗ್ರಾಮಗಳ ಮುಖ್ಯಸ್ಥರು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.
ಈ ವೇಳೆ ಪೊಲೀಸರು ಮತ್ತು ಅವರಾದಿ ಗ್ರಾಮದ ಯುವಕರ ಮಧ್ಯೆ ವಾಗ್ವಾದ ನಡೆಯಿತು. ಕಲ್ಲು ತೂರಾಟ ಜರುಗಿತು ಎಂದು ಮೂಲಗಳು ಸ್ಪಷ್ಟಪಡಿಸಿವೆ. ಘಟನೆಯು ವಿಕೋಪಕ್ಕೆ ತಿರುಗುವ ಮುನ್ನ ಅವರಾದಿ ಗ್ರಾಮಕ್ಕೆ ಸಾಗಿಸಿದ್ದ ಕಾಮಣ್ಣನ ಮೂರ್ತಿಯನ್ನು ಉಭಯ ಗ್ರಾಮಗಳ ಮುಖಂಡರು ಸುರೇಬಾನ ಗ್ರಾಮಕ್ಕೆ ಮರಳಿ ತಂದರು.
ಪಿಎಸ್‌ಐ. ಬಸಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ನಿಂಗಪ್ಪ ಮೆಳ್ಳಿಕೇರಿ, ಎಪಿಎಂಸಿ ಸದಸ್ಯ ಅಶೋಕ ಗಾಣಿಗೇರ, ಸುರೇಬಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಶೈಲ ಮೆಳ್ಳಿಕೇರಿ, ಮಾಜಿ ಅಧ್ಯಕ್ಷ ವಾಸಪ್ಪ ಹುಲ್ಲಿಕೇರಿ, ಮನಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಾದರ, ಸುರೇಬಾನ ಹೊಸಪೇಟ ಓಣಿಯ ಹಿರಿಯರಾದ ಸೋಮನಾಥ ಗೋಕಾವಿ, ಹಂಪಿಹೊಳಿ ಗ್ರಾಮದ ದಳಪತಿ ಭೀಮಪ್ಪ ಬಾಡಗಾರ ಹಾಗೂ ಸುರೇಬಾನ ಗ್ರಾಮಸ್ಥರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.