ADVERTISEMENT

ಕಾಂಗ್ರೆಸ್‌ನಿಂದ ವೋಟ್‌ ಪಾಲಿಟಿಕ್ಸ್‌

ಬೇಡಕಿಹಾಳದಲ್ಲಿ ನಿತಿನ ಗಡ್ಕರಿ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2018, 6:18 IST
Last Updated 4 ಮೇ 2018, 6:18 IST

ಚಿಕ್ಕೋಡಿ: ‘ರಾಜ್ಯದಲ್ಲಿ ಚುನಾವಣೆ ದೃಷ್ಟಿಯಿಂದ ವೋಟ್‌ ಪಾಲಿಟಿಕ್ಸ್‌ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ ಜಾತಿ, ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಜಾತೀಯತೆಯ ವಿಷ ಬೀಜ ಬಿತ್ತುತ್ತಿದೆ’ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಆರೋಪಿಸಿದರು.

ನಿಪ್ಪಾಣಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೇಡಕಿಹಾಳ ಗ್ರಾಮದಲ್ಲಿ ಗುರುವಾರ ನಿಪ್ಪಾಣಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ–ಸದಲಗಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ  ಮಾತನಾಡಿದರು.

‘ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿ ಕಾಂಗ್ರೆಸ್‌ ಭಯ ಹುಟ್ಟಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮಗೆ ಹಿಂಸೆ ನೀಡಲಿದೆ ಎಂಬ ಭ್ರಮೆ ಹಬ್ಬಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಯಾವುದೇ ಜಾತಿ, ಮತ ಎಂಬ ಭೇದವಿಲ್ಲದೇ ಯೋಜನೆ ಅನುಷ್ಠಾನಗೊಳಿಸಿದೆ. ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ’ ಎಂದರು.

ADVERTISEMENT

‘ಸ್ವತಂತ್ರ ಭಾರತದಲ್ಲಿ 65 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಮಾಡುತ್ತ ಬಂದಿದೆ. ಜವಾಹರಲಾಲ್‌ ನೆಹರು ಮೊದಲ್ಗೊಂಡು ಈಗಿನ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿವರೆಗೆ ‘ಗರೀಬಿ ಹಠಾವೋ’ ಮಂತ್ರ ಜಪಿಸುತ್ತಲೇ ಬಂದಿದ್ದಾರೆ’ ಎಂದು ಟೀಕಿಸಿದರು.

‘ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ವಿರುದ್ಧ ಹರಿಹಾಯುತ್ತಿದೆ. ಆದರೆ, ಡಾ.ಅಂಬೇಡ್ಕರ್‌ ಅವರ ಸಮತಾ–ಸಮರಸ ಆಶಯದಂತೆ ಬಿಜೆಪಿ ಯಾವುದೇ ಜಾತಿ ಮತ ಭೇದ ಎಸಗದೇ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅಂಬೇಡ್ಕರ್ ಅವರ ಮುಂಬೈನ ಇಂದು ಮಿಲ್, ನಾಗಪುರದ ದೀಕ್ಷಾ ಭೂಮಿ ಮತ್ತು ಲಂಡನ್‌ನಲ್ಲಿರುವ ಅಂಬೇಡ್ಕರ್ ಅವರ ಮನೆಯನ್ನು ಬಿಜೆಪಿ ಅಭಿವೃದ್ಧಿಪಡಿಸಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕರು ಲಕ್ಷ್ಮಿಭಕ್ತರು: ‘ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಕರ್ನಾಟಕಕ್ಕೆ ₹ 2 ಲಕ್ಷ ಕೋಟಿ ಅನುದಾನ ಒದಗಿಸಲಾಗಿದೆ. ಆ ಪೈಕಿ ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಸಿಆರ್‌ಎಫ್‌ ₹60 ಕೋಟಿ ಅನುದಾನ ನೀಡಲಾಗಿದೆ. ಆದರೆ, ಕರ್ನಾಟಕದ ಕಾಂಗ್ರೆಸ್‌ ನಾಯಕರು ‘ಲಕ್ಷ್ಮಿ ಭಕ್ತರು’ ಎಂದು ಸೂಚ್ಯವಾಗಿ ಹೇಳಿದರು.

‘ದೇಶದಲ್ಲಿ ನಾನು 10 ಲಕ್ಷ ಕೋಟಿ ಅನುದಾನ ನೀಡಿದರೂ ಯಾವೊಬ್ಬ ಗುತ್ತಿಗೆದಾರ ಅಥವಾ ಎಂಜಿನಿಯರ್ ನನ್ನ
ಮನೆ ಬಳಿ ಬರುವುದಿಲ್ಲ. ಇದು ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ’ ಎಂದು ನಿತಿನ ಗಡ್ಕರಿ ಹೇಳಿದರು.
ರಾಜ್ಯಕ್ಕೆ ನೀರು:
ಕೇಂದ್ರ ಸರ್ಕಾರ ತಮಿಳುನಾಡು ಮತ್ತು ಕರ್ನಾಟಕ ಮಧ್ಯೆದ ಜಲ ವಿವಾದ ಬಗೆಹರಿಸಲಿದೆ. ಗೋದಾವರಿ ನದಿಯಿಂದ 3 ಸಾವಿರ ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಆಂಧ್ರದ ಪೋಲಾವರ್‌ಂ ಬಳಿ ಅಣೆಕಟ್ಟು ನಿರ್ಮಿಸಿ, ಅಲ್ಲಿಂದ ಕರ್ನಾಟಕಕ್ಕೆ 350 ಟಿಎಂಸಿ ನೀರು ಪೈಪ್‌ಲೈನ್‌ ಮೂಲಕ ಒದಗಿಸಲಾಗುವುದು’ ಎಂದು ತಿಳಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ, ಇಚಲಕರಂಜಿ ಶಾಸಕ ಸುರೇಶ ಹಳವಣಕರ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಚಿಕ್ಕೋಡಿ–ಸದಲಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿದರು.

ಜೈ ಮಹಾರಾಷ್ಟ್ರ

ಬೇಡಕಿಹಾಳ ಗ್ರಾಮದಲ್ಲಿ ಸಂಜೆ 4ಕ್ಕೆ ನಿತಿನ ಗಡ್ಕರಿ ಪ್ರಚಾರ ಸಭೆ ನಿಗದಿಯಾಗಿತ್ತು. ಜನ ಮಧ್ಯಾಹ್ನ ಮೂರು ಗಂಟೆಯಿಂದಲೇ ಜಮಾಯಿಸಿ ತೊಡಗಿದ್ದರು. ಆದರೆ, ಎರಡುವರೆ ಗಂಟೆ ವಿಳಂಬವಾಗಿ ಬೇಡಕಿಹಾಳಕ್ಕೆ ಬಂದ ಸಚಿವ ನಿತಿನ ಗಡ್ಕರಿ ನೇರವಾಗಿ ಭಾಷಣಕ್ಕೆ ನಿಂತರು. ಪ್ರಾರಂಭದಲ್ಲಿ ಎಲ್ಲರಿಗೂ ನಮಸ್ಕರಿಸಿದ ಸಚಿವ ಗಡ್ಕರಿ, ‘ ಜೈ ಮಹಾರಾಷ್ಟ್ರ’ ಎಂದು ಮಾತು ಆರಂಭಿಸಿದರು. ಮರಾಠಿಯಲ್ಲಿಯೇ ಸುಮಾರು ಅರ್ಧ ಗಂಟೆ ಕಾಲ ಮಾತನಾಡಿ, ಭಾಷಣ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.