ADVERTISEMENT

ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:40 IST
Last Updated 18 ಫೆಬ್ರುವರಿ 2011, 9:40 IST

ಬೈಲಹೊಂಗಲ: ಎಲ್ಲ ಕಾರ್ಮಿಕರಿಗೆ ವೇತನ ನಿಗದಿ, ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ, ಕಾರ್ಮಿಕರಿಗೆ ಮೂಲ ಸೌಲಭ್ಯ ನೀಡುವಂತೆ ಆಗ್ರಹಿಸಿ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಅನರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹವನ್ನು ಗುರುವಾರ ಪ್ರಾರಂಭಿಸಿದ್ದಾರೆ.

ಸಂಸ್ಥಾಪಕ ದಿ.ರಮೇಶ ಬಾಳೇಕುಂದರಗಿ ಪುತ್ಥಳಿಗೆ ಪೂಜೆ ಸಲ್ಲಿಸಿ ಕಾರ್ಮಿಕರು ಸತ್ಯಾಗ್ರಹ ಆರಂಭಿಸಿದರು. ಕಾರ್ಮಿಕರ ಸಂಘದ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಕಳೆದ ಆರು ವರ್ಷಗಳಿಂದ ಕಾರ್ಮಿಕರಿಗೆ ವೇತನ ನಿಗದಿ ಮಾಡದೇ ರೂ. 3900-ರೂ. 4000 ಸಂಬಳ ನೀಡಿ, ಇದರಲ್ಲಿ ಎಲ್‌ಐಸಿ, ಪಿ.ಎಫ್., ಊಟ, ಸಾರಿಗೆ ವೆಚ್ಚಗಳನ್ನು ಕಡಿತಗೊಳಿಸಿ ಪ್ರತಿ ತಿಂಗಳು ರೂ.1200 ರಿಂದ ರೂ.1300 ವರೆಗೆ ಸಂಬಳ ಕೈಗೆ ಸಿಗುತ್ತದೆ.

ಇದರಲ್ಲಿ ಒಂದು ಕುಟಂಬದ ನಿರ್ವಹಣೆ ಅಸಾಧ್ಯವಾಗುತ್ತಿದೆ. ವರ್ಷದಲ್ಲಿ 3-4 ತಿಂಗಳು ಮಾತ್ರ ಕಾರ್ಖಾನೆಯ ಹಂಗಾಮ ನಡೆಯುತ್ತಿದ್ದು, ಉಳಿದ ತಿಂಗಳುಗಳಲ್ಲಿ ಕಾರ್ಮಿಕರು ವೇತನವಿಲ್ಲದೇ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಕಾರ್ಮಿಕರ ಸಮಸ್ಯೆಗಳ ಕುರಿತು ಮುಂಚಿತವಾಗಿ ಆಡಳಿತ ಮಂಡಳಿಗೆ ಹಾಗೂ ಎಂ.ಡಿ. ಅವರಿಗೆ ಮನವಿ ಸಲ್ಲಿಸಿದರೂ ಕಾರ್ಮಿಕರ ಕುರಿತು ನಿರ್ಲಕ್ಷ್ಯ ತಾಳಿದ್ದು ಇದನ್ನು ಖಂಡಿಸಿದ ಪ್ರತಿಭಟನಾ ನಿರತ ಕಾರ್ಮಿಕರು ವ್ಯವಸ್ಥಾಪಕ ನಿರ್ದೇಶಕರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮುಂಜಾನೆಯಿಂದಲೇ ಧರಣಿ ಸತ್ಯಾಗ್ರಹ ಸಂಜೆಯವರೆಗೂ ಮುಂದುವರಿದಿತ್ತು. ಧರಣಿ ಸ್ಥಳಕ್ಕೆ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಭೇಟಿ ನೀಡದೇ ಇರುವುದು ಕಾರ್ಮಿಕರಿಗೆ ಬೇಸರವನ್ನುಂಟು ಮಾಡಿತು.

ಜಿ.ಪಂ. ಮಾಜಿ ಸದಸ್ಯ ಶಂಕರ ಮಾಡಲಗಿ, ರಾಚಪ್ಪ ಕರೀಕಟ್ಟಿ, ನಾಗನಗೌಡ ಮಲ್ಲೂರ, ಎಲ್.ಬಿ. ಪಾಟೀಲ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಸಂಘ, ಸೋಮೇಶ್ವರ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮಾಯಪ್ಪನವರ, ಸಹಕಾರ್ಯದರ್ಶಿ ಜಗದೀಶ ಹಂಚಿನಮನಿ, ಖಜಾಂಚಿ ಶಂಕರಯ್ಯ ಹಿರೇಮಠ ಹಾಗೂ ಕಾರ್ಖಾನೆಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.