ADVERTISEMENT

ಕಿತ್ತೂರು: ಜೆಡಿಎಸ್‌ ಅಭ್ಯರ್ಥಿ ದಿಢೀರ್ ಬದಲು!

ಬಿಜೆಪಿ ಟಿಕೆಟ್‌ ವಂಚಿತನ ಕೈ ಹಿಡಿದ ಜೆಡಿಎಸ್‌!

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 6:58 IST
Last Updated 25 ಏಪ್ರಿಲ್ 2018, 6:58 IST
ಬಾಬಾಸಾಹೇಬ್‌ ಪಾಟೀಲರನ್ನು ಬೆಂಬಲಿಸಿ ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು
ಬಾಬಾಸಾಹೇಬ್‌ ಪಾಟೀಲರನ್ನು ಬೆಂಬಲಿಸಿ ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು   

ಚನ್ನಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದರಿಂದ ಜೆಡಿಎಸ್‌ ‘ಬಿ’ ಫಾರಂನೊಂದಿಗೆ ಬಂದು ಸೋಮವಾರ ಉಮೇದುವಾರಿಕೆ ಸಲ್ಲಿಸಿದ್ದ ಬಾಬಾಸಾಹೇಬ್‌ ಪಾಟೀಲ ಅವರನ್ನು ಒಂದೇ ದಿನದಲ್ಲಿ ಬದಲಾವಣೆ ಮಾಡಿ, ಇನ್ನೊಬ್ಬರಿಗೆ ಪಕ್ಷದ ‘ಬಿ’ ಫಾರಂ ನೀಡಿದ ಪ್ರಸಂಗ ಇಲ್ಲಿ ಮಂಗಳವಾರ ನಡೆಯಿತು.

ಇದೀಗ, ಬಿಜೆಪಿ ಟಿಕೆಟ್‌ ವಂಚಿತ ಸುರೇಶ ಮಾರಿಹಾಳ ಅವರನ್ನು ತನ್ನ ಅಧಿಕೃತ ಅಭ್ಯರ್ಥಿಯಾಗಿ ಜೆಡಿಎಸ್‌ ಕಣಕ್ಕಿಳಿಸಿದೆ. ವಿಷಯ ತಿಳಿದ ಬಾಬಾಸಾಹೇಬ್‌, ಪಕ್ಷೇತರ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಬಾಬಾಸಾಹೇಬ್‌ ಅವರು, ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಮಂಗಳವಾರವೂ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದರು. ಅದರಂತೆ, ಜೆಡಿಎಸ್ ಚಿಹ್ನೆಯ ಧ್ವಜ ಹಿಡಿದು, ಪಟ್ಟಿ ಹಾಗೂ ಟೋಪಿ ಧರಿಸಿದ್ದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದಿದ್ದರು. ಜೆಡಿಎಸ್‌ ಮುಖಂಡ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಕೂಡ ಜೊತೆಗಿದ್ದರು. ಚುನಾವಣಾಧಿಕಾರಿ ಕಚೇರಿಗೆ ಬಂದಾಗಲೇ, ಇನ್ನೊಬ್ಬರಿಗೂ ಜೆಡಿಎಸ್‌ ‘ಬಿ ಫಾರಂ’ ನೀಡಲಾಗಿದೆ ಎನ್ನುವ ವಿಷಯ ಅವರಿಗೆ ತಿಳಿಯಿತು.

ADVERTISEMENT

‘ಈ ಮೊದಲು ನೀಡಿದ್ದ ‘ಬಿ’ ಫಾರಂ ಹಿಂಪಡೆಯಲಾಗಿದೆ ಎಂದು ಪಕ್ಷದ ವರಿಷ್ಠರು ಲಿಖಿತವಾಗಿ ಕೊಟ್ಟಿದ್ದಾರೆ. ನೀವೂ ಲಗತ್ತಿಸಿ ಕೊಟ್ಟರೆ ನಾಮಪತ್ರ ರದ್ದುಗೊಳ್ಳುತ್ತದೆ’ ಎಂದು ಚುನಾವಣಾಧಿಕಾರಿ ದೊಡ್ಡ ಬಸವರಾಜ ತಿಳಿಸಿದರು. ಹೀಗಾಗಿ ಬಾಬಾಸಾಹೇಬ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಾಯಿತು. ಇವರು ಬರುವ ಮುನ್ನವೇ, ಸುರೇಶ ಮಾರಿಹಾಳ ನಾಮಪತ್ರ ಸಲ್ಲಿಸಿ ತೆರಳಿದ್ದರು.

‘ಕಿತ್ತೂರು ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ಪಕ್ಷ ಏನೇ ತೀರ್ಮಾನಿಸಲಿ. ನಾನು ಬಾಬಾಸಾಹೇಬ್‌ ಜೊತೆಗಿರು
ತ್ತೇನೆ. ಅವರನ್ನು ಮತದಾರರು ವಿಧಾನಸಭೆಗೆ ಕಳುಹಿಸಲಿದ್ದಾರೆ’ ಎಂದು ಬಾಬಾಗೌಡ ಪಾಟೀಲ ಪ್ರತಿಕ್ರಿಯಿಸಿದರು.

‘ಏನೇ ಆಗಲಿ ಈ ಬಾರಿಯ ಚುನಾವಣೆಯ ಬ್ಯಾಲೆಟ್ ಪೇಪರ್‌ನಲ್ಲಿ ನನ್ನ ಹೆಸರು ಬರುತ್ತದೆ ಎಂದು ಹೇಳಿಕೆ ನೀಡಿದ್ದೆ. ಅದಕ್ಕೆ ಬದ್ಧನಾಗಿದ್ದೇನೆ. ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ. ಮತದಾರರು ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಬಾಬಾಸಾಹೇಬ್ ತಿಳಿಸಿದರು.

ಜೆಡಿಎಸ್‌ ಪಕ್ಷದ ಅಧಿಕೃತ ಅಭ್ಯರ್ಥಿ ತಾವೇ ಎಂದು ಪ್ರಕಟಿಸಿದ ಸುರೇಶ ಮಾರಿಹಾಳ, ದಿಢೀರ್‌ ಬದಲಾವಣೆ ಬಗ್ಗೆ  ಪ್ರತಿಕ್ರಿಯಿಸಿ, ‘ಇದೊಂದು ರಾಜಕೀಯ ಚದುರಂಗದಾಟ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.