ಬೆಳಗಾವಿ: ಎರಡನೇ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಸಭೆ ನಡೆಸಿದ ಅವರು, ವಿವಿಧ ಇಲಾಖೆಯ ಪ್ರಗತಿ ಕುರಿತು ಮಾಹಿತಿ ಪಡೆದರು.
`ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು' ಎಂದು ಸೂಚಿಸಿದರು.
`ಹಿಡಕಲ್ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮೇಲ್ದರ್ಜೆಗೆ ಏರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಜಲಾಶಯದಿಂದ ಸದ್ಯ 12 ಎಂಜಿಡಿ ನೀರನ್ನು ನಿತ್ಯ ಎತ್ತಲಾಗುತ್ತಿದೆ. ಇದನ್ನು 18 ಎಂಜಿಡಿ ನೀರು ಎತ್ತುವ ಬಗ್ಗೆ ಯೋಜನೆ ರೂಪಿಸಲಾಗಿದ್ದು, ನಗರದ ಹೊರವಲಯದಲ್ಲಿ ಇನ್ನೊಂದು ಶುದ್ಧೀಕರಣ ಘಟಕವನ್ನು ನಿರ್ಮಿಸಬೇಕಾಗಿದೆ' ಎಂದು ಜಲಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದರು.
`ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಯಾರೂ ಪರಿಶೀಲನೆ ನಡೆಸುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆ ಹಾಗೂ ಮೂಲಸೌಲಭ್ಯ ಕೊರತೆ ಕುರಿತು ಸಮಗ್ರ ವರದಿಯನ್ನು ನೀಡಬೇಕು. ಮುಂದಿನ ವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು' ಎಂದು ತಿಳಿಸಿದರು.
`ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಯಾವುದೇ ರೀತಿಯ ಬೀಜ ಹಾಗೂ ಗೊಬ್ಬರದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ರೈತರು ಬಿತ್ತನೆಗೆ ತಮ್ಮ ಭೂಮಿಯನ್ನು ಹದ ಮಾಡಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನಕಲಿ ಬೀಜ ಹಾಗೂ ಗೊಬ್ಬರ ಮಾರಾಟ ಆಗದಂತೆ ಎಚ್ಚರಿಕೆ ವಹಿಸಬೇಕು. ಇದನ್ನು ತಡೆಯಲು ವಿಶೇಷ ತಂಡಗಳನ್ನು ರಚಿಸಬೇಕು' ಎಂದು ಸೂಚಿಸಿದರು.
`ಜಿಲ್ಲೆಯಲ್ಲಿ ಶೇ. 40ರಷ್ಟು ಬಿತ್ತನೆ ಕಾರ್ಯ ಪೂರ್ತಿಗೊಂಡಿದೆ. 44 ಸಾವಿರ ಕ್ವಿಂಟಲ್ ಬೀಜದ ಸಂಗ್ರಹವಿದ್ದು, ಇದರಲ್ಲಿ ಶೇ. 50ರಷ್ಟು ಈಗಾಗಲೇ ಮಾರಾಟವಾಗಿದೆ. 80 ಸಾವಿರ ಕ್ವಿಂಟಲ್ ಗೊಬ್ಬರದ ಸಂಗ್ರಹವಿದ್ದು, 10 ಸಾವಿರ ಕ್ಟಿಂಟಲ್ ಗೊಬ್ಬರ ಮಾರಾಟವಾಗಿದೆ. ರೈತರಿಗೆ ಬೀಜ ಹಾಗೂ ಗೊಬ್ಬರ ಸರಳವಾಗಿ ಸಿಗಲು ಅನುಕೂಲವಾಗುವಂತೆ 132 ಮಾರಾಟ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ' ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಮಳೆಗಾಲ ಪ್ರಾರಂಭವಾಗಿದ್ದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
`ಜಿಲ್ಲೆಯ ಗೋಕಾಕ, ಚಿಕ್ಕೋಡಿ, ಹುಕ್ಕೇರಿ, ರಾಮದುರ್ಗ, ಬೆಳಗಾವಿ ತಾಲ್ಲೂಕುಗಳಲ್ಲಿ ಡೆಂಗೆ ಪ್ರಕರಣಗಳು ವರದಿಗಳಾಗಿವೆ. ಒಟ್ಟು 212 ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ರಕ್ತ ತಪಾಸಣೆ ಮಾಡಿದಾಗ 37 ಪ್ರಕರಣಗಳಲ್ಲಿ ಡೆಂಗೆ ರೋಗ ಇರುವುದು ಪತ್ತೆಯಾಗಿದೆ.
ಡೆಂಗೆ ಹರಡದಂತೆ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಂದು ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ದಿಲೀಪಕುಮಾರ ಮುನ್ನೋಳಿ ಮಾಹಿತಿ ನೀಡಿದರು.
`ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರ್ಕಾರದಿಂದ ಪೂರೈಸಲಾಗುತ್ತಿರುವ ಔಷಧಿಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಬಂದಿದ್ದು, ವೈದ್ಯರು ಈ ಸಮಸ್ಯೆ ಬಗ್ಗೆ ಗಮನ ನೀಡಬೇಕು. ಮುಂದಿನ ವಾರ ಆಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿ ಈ ಕುರಿತು ಪರಿಶೀಲನೆ ನಡೆಸುತ್ತೇನೆ' ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಎನ್. ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದೀಪಾ ಚೋಳನ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೊಳನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.