ADVERTISEMENT

ಕ್ರಿಕೆಟ್‌ಗಷ್ಟೇ ಮಹತ್ವ: ಅರವಿಂದ ಕಳವಳ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:50 IST
Last Updated 18 ಫೆಬ್ರುವರಿ 2011, 9:50 IST

ಬೆಳಗಾವಿ: ಕ್ರಿಕೆಟ್‌ಗೆ ಅತಿಯಾದ ಮಹತ್ವ ನೀಡಲಾಗುತ್ತಿದೆ. ಕ್ರಿಕೆಟ್‌ಗೆ ಹೋಲಿಸಿದರೆ ಇನ್ನುಳಿದ ಕ್ರೀಡೆಗಳಿಗೆ ಮಹತ್ವವೇ ಸಿಗುತ್ತಿಲ್ಲ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಗೂ ಸ್ನೂಕರ್, ಬಿಲಿಯರ್ಡ್ ಮಾಜಿ ಚಾಂಪಿಯನ್ ಅರವಿಂದ ಸವೂರ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಅಂತರ ವಿವಿ ಟೇಬಲ್ ಟೆನಿಸ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಶಸ್ತಿ, ಪುರಸ್ಕಾರಗಳು ಎಲ್ಲ ಕ್ರೀಡೆಗಳಿಗೆ ಹಂಚಿಕೆಯಾಗಬೇಕು. ಕ್ರೀಡಾ ಮಹತ್ವದ ಕುರಿತು ಸಾಮಾಜಿಕ ಜಾಗೃತಿ ಅಗತ್ಯವಾಗಿ ನಡೆಯಬೇಕು ಎಂದು ಹೇಳಿದರು. ಟೇಬಲ್ ಟೆನಿಸ್ ಅಂತರ ರಾಷ್ಟ್ರೀಯ ಆಟಗಾರ್ತಿ ಅರ್ಚನಾ ವಿಶ್ವನಾಥ, ಕ್ರೀಡಾಪಟುಗಳು ಶೈಕ್ಷಣಿಕವಾಗಿಯೂ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಯನ್ನು ಸಮಾನವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಮಹೇಶಪ್ಪ, ಸೋಲು, ಗೆಲುವುಗಳು ಕ್ರೀಡೆಗಳಿಗಷ್ಟೇ ಸೀಮಿತವಲ್ಲ. ನಿತ್ಯ ಜೀವನದಲ್ಲೂ ಇರುತ್ತವೆ. ಕಾರಣ ಜಯ ಹಾಗೂ ಅಪಜಯವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ಮಾಡಿದರು. ಮುಂದಿನ ದಿನಗಳಲ್ಲಿ ಪ್ರತಿವರ್ಷ ಒಂದು ಅಥವಾ ಎರಡು ರಾಷ್ಟ್ರೀಯ ಪಂದ್ಯಾವಳಿಗಳನ್ನು ಬೆಳಗಾವಿ ಜ್ಞಾನ ಸಂಗಮ ಆವರಣದಲ್ಲಿ ಸಂಘಟಿಸಲಾಗುವುದು ಎಂದು ಪ್ರಕಟಿಸಿದರು.

ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ ಡಾ. ಎಸ್.ಎ.ಕೋರಿ, ಪರೀಕ್ಷಾ ವಿಭಾಗದ ಕುಲಸಚಿವ ಡಾ.ಜಿ.ಎನ್. ಕೃಷ್ಣಮೂರ್ತಿ, ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕ ರಂಗನಾಥ ಜಿ.ಎಚ್. ಮತ್ತಿತರರು ವೇದಿಕೆಯಲ್ಲಿದ್ದರು. ಪ್ರಾಧ್ಯಾಪಕ ಎಂ.ಆರ್.ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಫೆ. 23ರವರೆಗೆ ದಕ್ಷಿಣ ವಲಯ ಹಾಗೂ ರಾಷ್ಟ್ರೀಯ ಅಂತರ ವಿವಿ ಟೇಬಲ್ ಟೆನಿಸ್ ಟೂರ್ನಿ ನಡೆಯಲಿದೆ. ವಿಶ್ವೇಶ್ವರಯ್ಯ ವಿವಿ ತಾಂತ್ರಿಕ ಆವರಣದಲ್ಲಿ ಹಮ್ಮಿಕೊಂಡಿರುವ ರಾಷ್ಟಮಟ್ಟದ ಪ್ರಪ್ರಥಮ ಟೂರ್ನಿ ಇದಾಗಿದೆ. ಒಟ್ಟು 600 ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.