ADVERTISEMENT

`ಚುನಾವಣೆಗೆ ನೆರೆ ರಾಜ್ಯ ನೆರವು ಅಗತ್ಯ'

ಗಡಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:15 IST
Last Updated 6 ಏಪ್ರಿಲ್ 2013, 6:15 IST

ಬೆಳಗಾವಿ: ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಗಡಿ ಅಪರಾಧ ಸಭೆಯನ್ನು ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆಸಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸಲು ಈ ಎರಡು ರಾಜ್ಯಗಳ ಗಡಿಭಾಗದ ಪೊಲೀಸ್ ಅಧಿಕಾರಿಗಳ ಸಹಕಾರ ಅಗತ್ಯವಿದೆ ಎಂದರು.

ಗಡಿ ಭಾಗದಲ್ಲಿ ಈಗಾಗಲೇ ಅಕ್ರಮ ಮದ್ಯ ಸಾಗಾಟ ಹಾಗೂ ಅಪರಾಧಿಗಳ ಚಲನ ವಲನಗಳ ಮೇಲೆ ನಿಗಾ ವಹಿಸಲು 41 ಪೊಲೀಸ್ ಚೆಕ್‌ಪೋಸ್ಟಗಳನ್ನು ಸ್ಥಾಪಿಸಲಾಗಿದೆ. ಅಕ್ರಮ ಮದ್ಯ ಸಾಗಾಟ ಹಾಗೂ ಅಪರಾಧಿಗಳ ಚಲನ ವಲನಗಳ ಮೇಲೆ ನಿಗಾ ವಹಿಸಲು ಕೊಲ್ಲಾಪುರ, ಸಾಂಗ್ಲಿ ಜಿಲ್ಲೆಗಳ ಮತ್ತು ಗೋವಾ ರಾಜ್ಯದ ಪೊಲೀಸ್‌ರನ್ನು ನಿಯುಕ್ತಗೋಳಿಸಬೇಕು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದ 17 ಗ್ರಾಮಗಳನ್ನು ಅತಿ ಸೂಕ್ಷ್ಮ ಗ್ರಾಮಗಳೆಂದು ಗುರುತಿಸಲಾಗಿದೆ. ಇಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರಲ್ಲದೇ ಗಡಿಭಾಗದ ಬೇರೆ ಜಿಲ್ಲೆಗಳ ಪೊಲೀಸರು ಗಸ್ತು ಕರ್ತವ್ಯ ನಿರ್ವಹಿಸುವರು ಎಂದ ಅವರು, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಅಗತ್ಯವಿರುವ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಉತ್ತರ ವಲಯದ ಐಜಿಪಿ ಕೆ.ಎಸ್.ಆರ್. ಚರಣರೆಡ್ಡಿ ಮಾತನಾಡಿ, ಬೆಳಗಾವಿ, ವಿಜಾಪುರ ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳ ಗಡಿ ಭಾಗಗಳು ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿ ಕೊಂಡಿವೆ. ಎರಡು ರಾಜ್ಯಗಳ ಗಡಿಭಾಗಗಳ ಪೊಲೀಸ್ ಅಧಿಕಾರಿಗಳು ಸಹಕಾರದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಕಾನೂನು ಸುವ್ಯಸ್ಥೆಯನ್ನು ಕಾಪಾಡಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೊಲ್ಹ್‌ಪುರ ಐಜಿಪಿ ತುಕಾರಾಮ ಚವ್ಹಾಣ ಮಾತನಾಡಿ, ಬೆಳಗಾವಿ ಜಿಲ್ಲಾ ಪೊಲೀಸರಿಂದ ದರೋಡೆ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳ ಮಾಹಿತಿ, ನ್ಯಾಯಾಲಯದಿಂದ ಜಾರಿಯಾದ ಸಮನ್ಸ್ ಮತ್ತು ವಾರೆಂಟ್‌ಗಳ ಜಾರಿ ಸಂದರ್ಭದಲ್ಲಿ ಉತ್ತಮ ಸಹಕಾರ ದೊರೆಯುತ್ತಿದೆ. ನಾವು ಕೂಡಾ ಅದೇ ರೀತಿ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಈ ಚುನಾವಣೆ ಸಂದರ್ಭದಲ್ಲಿ ಬೇಕಾದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ ಹಿಲೋರಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣನ್,  ಕೊಲ್ಲಾಪುರ ವಿಜಯ ಸಿನ್ಹಾ ಜಾಧವ, ಸಾಂಗ್ಲಿ ಎಸ್‌ಪಿ ದಿಲೀಪ್ ಸಾವಂತ, ಸೊಲ್ಲಾಪುರ ಎಸ್‌ಪಿ  ರಾಜೇಶ್ ಪ್ರಧಾನ್, ಗೋವಾ ರಾಜ್ಯದಿಂದ ಇಬ್ಬರು ಡಿಎಸ್‌ಪಿ, ಕೊಲ್ಲಾಪುರ ಜಿಲ್ಲೆಯಿಂದ ಒಬ್ಬರು ಡಿಎಸ್‌ಪಿ, ಇಬ್ಬರು ಪಿಐ, ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಯಿಂದ ತಲಾ ಇಬ್ಬರು ಪಿಐ, ಸಿಂಧುದುರ್ಗ ಜಿಲ್ಲೆಯಿಂದ ಒಬ್ಬರು ಪಿಐ ಭಾಗವಹಿಸಿದ್ದರು.

ಸಭೆಯಲ್ಲಿ ಚುನಾವಣೆಗೆ ಸಂಬಂಧಪಟ್ಟ ವಿಷಯವಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳು ಹಾಗೂ ಇನ್ನೂ ಆರೋಪಿಗಳು ಪತ್ತೆಯಾಗದ ಕೊಲೆ ಪ್ರಕರಣಗಳ ಕುರಿತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೇಕಾದ 50 ಜನ ಕುಖ್ಯಾತ ಅಪರಾಧಿಗಳ ಪಟ್ಟಿಯನ್ನು ಕೂಡ ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸ್ ಅಧಿಕಾರಿಗಳಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.