ಬೆಳಗಾವಿ: ನಗರದ ರೈಲುನಿಲ್ದಾಣದಲ್ಲೆಗ `ರೆಡ್ ರಿಬ್ಬನ್~ನದ್ದೇ ಸದ್ದು. ಎಲ್ಲೆಡೆ `ಎಚ್‌ಐವಿ- ಏಡ್ಸ್~ ಬಗ್ಗೆಯೇ ಸುದ್ದಿ. ಈ ಮಹಾ ರೋಗದ ಬಗೆಗಿನ ಮಾಹಿತಿ ಕಣಜವನ್ನು ಹೊತ್ತು ತಂದಿರುವ `ರೆಡ್ ರಿಬ್ಬನ್ ಎಕ್ಸ್‌ಪ್ರೆಸ್~ ಏರಲು ಜನಸಾಗರವೇ ರೈಲುನಿಲ್ದಾಣಕ್ಕೆ ಧಾವಿಸುತ್ತಿದೆ.
`ಎಚ್‌ಐವಿ- ಏಡ್ಸ್~ ಬಗ್ಗೆ ಜಾಗೃತಿ ಮೂಡಿಸಲು ದೇಶದಾದ್ಯಂತ ಸಂಚರಿ ಸುತ್ತಿರುವ `ರೆಡ್ ರಿಬ್ಬನ್ ಎಕ್ಸ್‌ಪ್ರೆಸ್~ ರೈಲು ಬೆಳಗಾವಿಗೆ ಸೋಮವಾರ ಆಗಮಿಸುವ ಮೂಲಕ ರಾಜ್ಯವನ್ನು ಪ್ರವೇಶಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು `ರೆಡ್ ರಿಬ್ಬನ್ ಎಕ್ಸ್‌ಪ್ರೆಸ್~ ಏರುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಎಂಟು ಬೋಗಿಗಳನ್ನು ಒಳಗೊಂಡಿರುವ `ರೆಡ್ ರಿಬ್ಬನ್~ ರೈಲು ಏಡ್ಸ್ ರೋಗದ ವಿಶ್ವರೂಪದ ದರ್ಶನವನ್ನು ಮಾಡಿಸಿ, ಈ ರೋಗದಿಂದ ದೂರ ಉಳಿಯುವಂತೆ ಜನರ ಕಣ್ತೆರೆಸುತ್ತಿದೆ. ಮೂರು ಮತ್ತು ನಾಲ್ಕನೇ ಬೋಗಿಯಲ್ಲಿ ಎಚ್‌ಐವಿ- ಏಡ್ಸ್‌ಗೆ ಸಂಬಂಧಿಸಿದ ವಿಷಯಗಳು, ಆರೋಗ್ಯ, ನೈರ್ಮಲ್ಯ, ಎಚ್1ಎನ್1, ಟಿಬಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗುತ್ತಿದೆ. ಏಡ್ಸ್ ಬಗ್ಗೆ ಮಾಹಿತಿ ನೀಡುವ ಸಹಾಯವಾಣಿ; ಏಡ್ಸ್ ನಿರ್ಮೂಲನಾ ಅಭಿಯಾನದಲ್ಲಿ ಕೈಜೋಡಿಸುತ್ತೇನೆ ಎಂದು ಯುವಕರು ಹಸ್ತವನ್ನು ಇಟ್ಟು ಪ್ರತಿಜ್ಞೆ ಮಾಡಿಸುವ ಉಪಕರಣ, ಹೀಗೆ ಹಲವು ಮಾದರಿಗಳು ಗಮನ ಸೆಳೆಯುತ್ತಿವೆ.
ಐದನೇ ಬೋಗಿಯಲ್ಲಿ ವಿವಿಧ ಸಂಘ- ಸಂಸ್ಥೆಗಳ ಸದಸ್ಯರಿಗೆ, ಆರೋಗ್ಯ, ಶಿಕ್ಷಣ, ಪೊಲೀಸ್ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ಎಚ್‌ಐವಿ ಕುರಿತು ತರಬೇತಿ ನೀಡಲಾಗುತ್ತಿದೆ. ಒಂದೇ ಬಾರಿ 60 ಜನರಂತೆ ದಿನಕ್ಕೆ ನಾಲ್ಕು ಬಾರಿ ಇಲ್ಲಿ ತರಬೇತಿ ನೀಡಲಾಗುತ್ತದೆ.
ಆರನೇ ಬೋಗಿಯಲ್ಲಿ ಎಚ್‌ಐವಿ ಪರೀಕ್ಷೆ, ಆಪ್ತ ಸಲಹೆ ಹಾಗೂ ವೈದ್ಯಕೀಯ ಸೇವೆಗಳನ್ನು ನೀಡಲಾ ಗುತ್ತಿದೆ. ಇಲ್ಲಿ ನಾಲ್ವರು ಆಪ್ತ ಸಮಾಲೋಚಕರು, ನಾಲ್ವರು ತಾಂತ್ರಿಕ ಸಿಬ್ಬಂದಿ ಹಾಗೂ ಇಬ್ಬರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.
`ರೆಡ್ ರಿಬ್ಬನ್~ ರೈಲು ವೀಕ್ಷಿಸಲು ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಗಳ ಸದಸ್ಯೆಯರು, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ರೈಲುನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಏಪ್ರಿಲ್ 4ವರೆಗೆ ಈ ರೈಲು ಬೆಳಗಾವಿಯಲ್ಲಿ ತಂಗಲಿದ್ದು, ಬಳಿಕ ರಾಜ್ಯದ ವಿವಿಧ ರೈಲುನಿಲ್ದಾಣ ಗಳಿಗೆ ತೆರಳಲಿದೆ.
`ನಿರ್ಮೂಲನೆಗೆ ಸಹಕರಿಸಿ~
`ಎಚ್.ಐ.ವಿ- ಏಡ್ಸ್ ರೋಗವನ್ನು ಸೊನ್ನೆಗೆ ತರುವ ಮೂಲಕ ಅಭಿವದ್ಧಿಗೆ ಹೊಸ ಆಯಾಮವನ್ನು ನೀಡಲು ಯುವ ಜನತೆ ಮುಂದಾಳತ್ವ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಅಭಿಪ್ರಾಯಪಟ್ಟರು.
ಬೆಳಗಾವಿ ರೈಲು ನಿಲ್ದಾಣದಲ್ಲಿ `ರೆಡ್‌ರಿಬ್ಬನ್ ಎಕ್ಸ್‌ಪ್ರೆಸ್~ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಏಡ್ಸ್ ಕುರಿತು ತಿಳಿವಳಿಕೆ ಮೂಡಿಸುವುದರ ಜೊತೆಗೆ ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಏಡ್ಸ್ ರೋಗದ ವಿಚಾರದಲ್ಲಿ ದೇಶದಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದ್ದುದು ಈಗ 5ನೇ ಸ್ಥಾನಕ್ಕೆ ಬಂದಿದೆ. ಜನರಲ್ಲಿ ಜಾಗೃತಿ ಮೂಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಬಾಗಲಕೋಟೆ, ವಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಈ ರೋಗದ ಪ್ರಮಾಣ ಹೆಚ್ಚಾಗಿದೆ. ಈ ಮೂರು ಜಿಲ್ಲೆಗಳಲ್ಲೂ ಈ ರೋಗ ಸೊನ್ನೆಗೆ ತರುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ, ಜನರು ಏಆರ್‌ಟಿ ಕೇಂದ್ರಕ್ಕೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ರೋಗದ ಬಗ್ಗೆ ಗೋಪ್ಯತೆ ಕಾಪಾಡ ಲಾಗುತ್ತದೆ. ಹೀಗಾಗಿ ಮುಕ್ತವಾಗಿ ಆಪ್ತ ಸಮಾಲೋಚನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಂಜಯ ಪಾಟೀಲ ವಹಿಸಿದ್ದರು. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಜಯ ನಾಗಭೂಷಣ, ಕೆ.ಎಸ್. ಎ.ಪಿ.ಎಸ್. ಯೋಜನಾ ನಿರ್ದೇಶಕಿ ಸಲ್ಮಾ ಫಹೇಂ, ಜಿ.ಪಂ. ಸದಸ್ಯ ಗಣೇಶ ಹುಕ್ಕೇರಿ ಹಾಜರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ ಕುಮಾರ ಮುನ್ನೋಳಿ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ವಿ.ಬಿ. ಕುಲಕರ್ಣಿ ವಂದಿಸಿದರು. ಡಾ. ಲೀಲಾ ಸಂಪಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
`ರೆಡ್ ರಿಬ್ಬನ್ ಎಕ್ಸ್‌ಪ್ರೆಸ್~ನಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸುವ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ಇಲಾಖೆಗಳ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಎಚ್‌ಐವಿ ತಪಾಸಣೆ, ಆಪ್ತ ಸಮಾಲೋಚನೆ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಈ ವಿಶೇಷ ರೈಲ್‌ನ್ನು ವೀಕ್ಷಿಸಲು ಶಾಲಾ- ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ- ಸಂಸ್ಥೆಗಳ ಸದಸ್ಯರು, ವೈದ್ಯಕೀಯ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೇ 4ರ ವರೆಗೆ `ರೆಡ್ ರಿಬ್ಬನ್ ಎಕ್ಸ್‌ಪ್ರೆಸ್~ ಬೆಳಗಾವಿಯ ರೈಲುನಿಲ್ದಾಣದಲ್ಲಿ ತಂಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.