ADVERTISEMENT

ಜಿಲ್ಲೆಯಲ್ಲಿ ರಂಗಪ್ರಯೋಗ ನಡೆಯಲಿ: ಚೌಗಲೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 5:55 IST
Last Updated 24 ಜೂನ್ 2013, 5:55 IST

ನಿಪ್ಪಾಣಿ: `ಮರಾಠಿ ರಂಗಭೂಮಿ ಹಾಗೂ ರಾಜ್ಯದ ಮೈಸೂರು, ಕೋ ಲಾರ, ಹಾಸನ, ಬೆಂಗಳೂರು ಗಳಲ್ಲಿನ ರಂಗ ಸಂಘಟನೆಗಳ ಮಾದರಿ ಯಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ರಂಗಭೂಮಿ ಯಲ್ಲಿ ಸಂಚಲನ ಉಂಟಾಗಿ ಹೊಸ ಹೊಸ ಪ್ರಯೋಗಗಳು ನಡೆಯ ಬೇಕಾಗಿದೆ' ಎಂದು ಸಾಹಿತಿ ಡಾ.ಡಿ.ಎಸ್.ಚೌಗಲೆ ಆಶಿಸಿದರು.

ನಿಪ್ಪಾಣಿಯಲ್ಲಿ ಹಮ್ಮಿಕೊಂಡಿರುವ ಬೆಳಗಾವಿ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ `ರಂಗಭೂಮಿ ಅಂದು-ಇಂದು' ವಿಷಯ ಕುರಿತಾದ ಗೋಷ್ಠಿಯಲ್ಲಿ ಅವರು ಆಶಯ ಭಾಷಣ ಮಾಡುತ್ತಿದ್ದರು.

ಮರಾಠಿ ರಂಗಭೂಮಿಯಲ್ಲಿ ರಾಜಕೀಯ, ಸಾಮಾಜಿಕ ವಿಷಯಾಧಾರಿತ ಅದ್ಬುತ ಪ್ರಯೋಗಗಳು ನಡೆಯುತ್ತಿವೆ. ಕನ್ನಡದಲ್ಲಿ ಮಾತ್ರ ಅಂತಹ ಪ್ರಯೋಗಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಯುವಕರು ರಂಗಾಸಕ್ತಿ ಯನ್ನು ಮೈಗೂಡಿಸಿಕೊಂಡು ಸೃಜನ ಶೀಲತೆಯ ಮೂಲಕ ರಂಗ ಪರಂಪರೆ ಯನ್ನು ಮುಂದುವರೆಸಿಕೊಂಡು ಹೋಗ ಬೇಕಾಗಿದೆ. ಬೆಂಗಳೂರಿನಲ್ಲಿ ಸುಮಾರು 30 ರಂಗ ತಂಡಗಳು ಒಕ್ಕೂಟವನ್ನು ರಚಿಸಿಕೊಂಡು ಹೊಸ ಪ್ರಯೋಗ ಮಾಡುತ್ತಿವೆ. ಹಾಸನ, ಕೋಲಾರ, ಧಾರವಾಡಗಳಲ್ಲಿ ರಂಗ ಚಟುವಟಿಕೆ ಗಳು ಸಕ್ರಿಯವಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಅಂತಹ ಕಾರ್ಯ ನಡೆಯುತ್ತಿಲ್ಲ. ಆಧುನಿಕ ಸಂದರ್ಭಕ್ಕೆ ತಕ್ಕಂತೆ ರಂಗಭೂಮಿ ಸತ್ವಯುತವಾಗಿ ಬೆಳೆಯಬೇಕಾದ ಅಗತ್ಯವಿದೆ' ಎಂದರು.

ಡಾ.ರಾಮಕೃಷ್ಣ ಮರಾಠೆ ಅವರು `ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ' ವಿಷಯದ ಕುರಿತು ಮಾತನಾಡುತ್ತಾ, ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ ನೆಲೆಗಟ್ಟಿನಲ್ಲಿ ಹುಟ್ಟಿ ಕೊಂಡ ರಂಗಭೂಮಿ ಆಗಿನ ಕಾಲದಲ್ಲಿ ಸತ್ವಯುತವಾಗಿತ್ತು. ಕರ್ನಾಟಕ ಏಕೀಕರಣದ ನಂತರ ರಂಗಭೂಮಿಯ ಸಾಮಾಜಿಕ ದಿಕ್ಕಿನತ್ತ ಹೊರಳಿದಾಗ ಗೊಂದಲಗಳು ಆರಂಭಗೊಂಡವು. ಆಗ ರಂಗಭೂಮಿ ತನ್ನ ಸತ್ವಶೀಲತೆ ಮತ್ತು ಪ್ರಯೋಗಶೀಲತೆಯಿಂದ ವಿಮುಖ ಗೊಂಡು ತನ್ನ ಸಾಮರ್ಥ್ಯವನ್ನೇ ಕಳೆದು ಕೊಂಡಿತು. ಅಶಿಕ್ಷಿತ ರಂಗಭೂಮಿ ಎಂಬ ಅಪವಾದಕ್ಕೂ ಈಡಾಯಿತು. ಇಂತಹ ಸಂದಿಗ್ದತೆಯಲ್ಲಿ ಯುವ ಪೀಳಿಗೆ ಕನ್ನಡ ರಂಗಭೂಮಿಯ ಇತಿಹಾಸವನ್ನು ಅರಿತುಕೊಂಡು ರಂಗ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ಸರ್ಕಾರ ಕಂಪೆನಿ ನಾಟಕಗಳಿಗೆ ಅನು ದಾನ ನೀಡುತ್ತಿದೆ. ಆ ಅನುದಾನವನ್ನು ಬಳಸಿಕೊಂಡು ಪ್ರತಿ ವರ್ಷ ಒಂದಾ ದರೂ ಹೊಸ ನಾಟಕ ಪ್ರಯೋಗದಲ್ಲಿ ತೊಡಗಿದರೆ ಪ್ರೇಕ್ಷಕರ ನಿರೀಕ್ಷೆಯನ್ನು ಈಡೇರಿಸಿದಂತಾಗುತ್ತದೆ. ಆದರೆ, ಇಂದು ರಂಗ ಚಟುವಟಿಕೆಗಳು ಕಳೆ ಗುಂದುತ್ತಿದ್ದು, ಪ್ರೇಕ್ಷಕರು ನಿರಾಶ ರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿರೀಷ ಜೋಶಿ ಅವರು `ರಂಗ ಸಂಗೀತ' ಕುರಿತು ಮಾತನಾಡುತ್ತಾ, ಕನ್ನಡ ರಂಗ ಸಂಗೀತದಲ್ಲಿ ಮರಾಠಿ ಪ್ರಭಾವ ದಟ್ಟವಾಗಿದೆ. 1960ರತನಕ ಕನ್ನಡದ ರಂಗಭೂಮಿಯಲ್ಲಿ ಸಂಗೀತದ ಸ್ವರ್ಣಯುಗವಿತ್ತು. ಬದಲಾದ ದಿನ ಗಳಲ್ಲಿ ಸಂಭಾವನೆಗಾಗಿ ರಂಗಭೂ ಮಿಯ ಸಂಗೀತ ಕಲಾವಿದರು  ರೇಡಿಯೋ ಕೇಂದ್ರಗಳು, ಸಿನೆಮಾ ಮಾಧ್ಯಮಗಳತ್ತ ವಾಲಿದರು. ಹೀಗಾಗಿ ರಂಗ ಸಂಗೀತ ಬಡವಾಯಿತು.

ಪರಿಣಾಮವಾಗಿ ಪ್ರೇಕ್ಷಕರನ್ನು ಆಕರ್ಷಿಸಲು ನಾಟಕಗಳಲ್ಲಿ ಸಿನೆಮಾ ಗೀತೆಗಳ ಅಳವಡಿಕೆ ಆರಂಭಗೊಂಡಿತು. ವಿನಾಶದ ಅಂಚಿನಲ್ಲಿರುವ ರಂಗಸಂಗೀತಕ್ಕೆ ನವಚೈತನ್ಯ ನೀಡುವ ಕಲಾವಿದರ ಅವಶ್ಯಕತೆ ಇದೆ' ಎಂದು ಹೇಳಿದರು.

ಬಿ.ಎಸ್.ಗವಿಮಠ ಅಧ್ಯಕ್ಷೀಯ ಮಾತುಗಳನ್ನಾಡಿದರು. ಅ.ಬ.ಕೊರಬು ಸ್ವಾಗತಿಸಿದರು. ವಿ.ವಿ.ಚೌಗಲಾ ನಿರೂ ಪಿಸಿದರು. ಅರುಣಕುಮಾರ ರಾಜಮಾನೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.