ADVERTISEMENT

ತಂಬಾಕು ಕಟಾವಿಗೆ ಥೇನ್ಆತಂಕ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:50 IST
Last Updated 2 ಜನವರಿ 2012, 8:50 IST
ತಂಬಾಕು ಕಟಾವಿಗೆ ಥೇನ್ಆತಂಕ
ತಂಬಾಕು ಕಟಾವಿಗೆ ಥೇನ್ಆತಂಕ   

ಚಿಕ್ಕೋಡಿ: ಉತ್ಕೃಷ್ಟ ದರ್ಜೆಯ ತಂಬಾಕು ಉತ್ಪಾದನೆಗೆ ಹೆಸರುವಾಸಿಯಾಗಿರುವ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಬೆಳೆದ ತಂಬಾಕು ಕಟಾವು ಆರಂಭಗೊಂಡಿದ್ದು, ದಕ್ಷಿಣ ಕರ್ನಾಟಕದತ್ತ ಲಗ್ಗೆ ಹಾಕಿರುವ ಥೇನ್ ಚಂಡಮಾರುತ ಇಲ್ಲೂ ಬರುವುದೇ ಎಂಬ ಆತಂಕದ ಅಲೆಗಳು ಬೆಳೆಗಾರರನ್ನು ಆವರಿಸಿವೆ.

ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 11 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶ ಕಡಿಮೆಯಾಗಿದೆ. ಕಳೆದ 2-3 ವರ್ಷಗಳಿಂದ ತಂಬಾಕಿಗೆ ದೊರಕದ ನ್ಯಾಯಯುತ ಬೆಲೆ ಹಾಗೂ ಕಬ್ಬು ಬೆಳೆಗೆ ಸಿಗುತ್ತಿರುವ ನಿರೀಕ್ಷಿತ ದರಗಳೇ ಈ ಪ್ರಮಾಣದಲ್ಲಿ ತಂಬಾಕು ಬೆಳೆ ಪ್ರಮಾಣ ಇಳಿಕೆಗೆ ಕಾರಣವಾಗಿದೆ.

ತಾಲ್ಲೂಕಿನ ನಿಪ್ಪಾಣಿ ಪರಿಸರ ತಂಬಾಕು ಬೆಳೆಗೆ ಪ್ರಸಿದ್ದ. ಇಲ್ಲಿನ ಅಕ್ಕೋಳ, ಗಳತಗಾ, ಪಟ್ಟಣಕುಡಿ, ಖಡಕಲಾಟ, ಕೊಗನೊಳ್ಳಿ ಮುಂತಾದ ಪ್ರದೇಶಗಳಲ್ಲಿ ಬೆಳೆಯುವ ತಂಬಾಕಿಗೆ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ. ಆದರೆ, ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ತಂಬಾಕು ಬೆಳೆ ಪ್ರಮಾಣ ಕಡಿಮೆ ಆಗಿದೆ. ಅಲ್ಲದೇ ಪ್ರತಿಕೂಲ ವಾತಾವರಣದಿಂದಾಗಿ ಇಳುವರಿಯೂ ಕುಂಠಿತಗೊಳ್ಳುವ ಸಾಧ್ಯತೆ ಇದೆ.

ಕಳೆದೆರೆಡು ವರ್ಷಗಳಿಂದ ಕೆಲವು ನಿರ್ದಿಷ್ಟ ಪ್ರದೇಶದ ತಂಬಾಕು ಹೊರತುಪಡಿಸಿದರೆ ಉಳಿದ ಭಾಗಗಳ ತಂಬಾಕಿಗೆ ಬೇಡಿಕೆ ಬಂದಿಲ್ಲ. ಬಂದರೂ ವರ್ತಕರು ಕೇಳಿದ ದರಕ್ಕೆ ತಂಬಾಕು ಮಾರಾಟ ಮಾಡಬೇಕಾದ ಅನಿವಾರ್ಯತೆ ರೈತರದ್ದಾಗಿದೆ. ಪ್ರತಿ ಕಿ.ಗ್ರಾಂಗೆ 20ರಿಂದ 50 ರೂಪಾಯಿಗೆ ತಂಬಾಕು ಮಾರಾಟವಾಗಿದೆ. ಕೆಲವು ರೈತರು ತಂಬಾಕು ಬೆಳೆಯನ್ನು ಮನೆಯಲ್ಲಿಯೇ ಇಟ್ಟುಕೊಂಡಿರುವ ಉದಾಹರಣೆಗಳೂ ಇವೆ.

ಹಗಲುರಾತ್ರಿ ಎನ್ನದೇ ಶ್ರಮವಹಿಸಿ ಬೆಳೆಸಿದ ತಂಬಾಕು ಬೆಳೆಗೆ ನಿರೀಕ್ಷಿತ ಬೆಲೆ ಬಾರದ ಹಿನ್ನೆಲೆಯಲ್ಲಿ ತರಕಾರಿ ಮತ್ತು ಕಬ್ಬು ಬೆಳೆಯತ್ತ ಆಸಕ್ತಿ ತೋರಿದ್ದಾನೆ. ತಂಬಾಕು ನಾಟಿಯಿಂದ ಕಟಾವು ಮಾಡಿ ಮನೆ ಸೇರಿಸುವವರೆಗೂ ಅತ್ಯಂತ ಸೂಕ್ಷ್ಮವಾಗಿ ನೋಡಿಕೊಳ್ಳಬೇಕಾಗುತ್ತದೆ. ಅತಿವೃಷ್ಟಿಯಿಂದ ತಂಬಾಕು ನಾಟಿ ಮಾಡಿದ ಭೂಮಿಯ ಒಂದೊಪ್ಪತ್ತು ನೀರು ಸಂಗ್ರಹವಾದರೂ ಬೇರುಗಳು ಕೊಳೆತು ಬೆಳೆ ಹಾಳಾಗುತ್ತದೆ.

ಕಟಾವು ಮಾಡಿದ ತಂಬಾಕನ್ನು ನೆಲದ ಮೇಲೆ ಹರಡಿ ಸುಮಾರು 10ರಿಂದ 15 ದಿನ ಬಿಸಿಲಿನಲ್ಲಿ ಒಣಗಿಸಿ ನಂತರ `ಚಾಕಿ~ ಮಾಡಿ ಸಂಗ್ರಹಿಸಿ ಇಡಲಾಗುತ್ತದೆ. ಈ ಸಂದರ್ಭದಲ್ಲಿ ಹರಡಿದ ತಂಬಾಕು ಎಲೆಗಳ ಮೇಲೆ ನಾಲ್ಕಾರು ಮಳೆ ಹನಿಗಳೂ ಬಿದ್ದರೂ ಬೆಳೆ ಕಪ್ಪು ವರ್ಣಕ್ಕೆ ತಿರುಗಿ ಬೆಲೆ ಕಳೆದುಕೊಳ್ಳುತ್ತದೆ.
 
ಸದ್ಯ ತಾಲ್ಲೂಕಿನಲ್ಲಿ ತಂಬಾಕು ಕಟಾವು ಕಾರ್ಯ ಆರಂಭಗೊಂಡಿದ್ದು, ಥೇನ್ ಚಂಡಮಾರುತ ಕೃಷಿಕ ವಲಯದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಕಳೆದ 2-3 ವರ್ಷಗಳಿಂದ ಪ್ರತಿಕೂಲ ಹವಾಮಾನ ಮತ್ತು ಬೆಲೆ ಕುಸಿತದಿಂದ ಆರ್ಥಿಕ ನಷ್ಟ ಅನುಭವಿಸಿರುವ ತಂಬಾಕು ಬೆಳೆಗಾರ ಈ ವರ್ಷವಾದರೂ ನ್ಯಾಯಯುತ ಬೆಲೆ ದೊರಕುವುದೇ ಎಂಬ ನಿರೀಕ್ಷೆಯಲ್ಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.