ADVERTISEMENT

ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ

ಮಲಪ್ರಭಾ ನೂಲಿನ ಗಿರಣಿಯಲ್ಲಿ ಆರಂಭವಾಗಿದ್ದ ಕಡಲೆ ಖರೀದಿ ಕೇಂದ್ರ ದಿಢೀರ್‌ ಬಂದ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 6:13 IST
Last Updated 24 ಏಪ್ರಿಲ್ 2018, 6:13 IST

ಸವದತ್ತಿ: ‘ಇಲ್ಲಿನ ಮಲಪ್ರಭಾ ನೂಲಿನ ಗಿರಣಿಯಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರವನ್ನು ಸೋಮವಾರ ಇದ್ದಕ್ಕಿದ್ದಂತೆ ಮುಚ್ಚಲಾಗಿದೆ. ಕಡಲೆ ಖರೀದಿ ಮಾಡುವುದಿಲ್ಲ ಎಂದು ಮರಳಿ ಕಳಿಸುತ್ತಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ, ಮಿನಿ ವಿಧಾನಸೌಧ ತಲುಪಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

‘ಮೊನ್ನೆ ತಾನೆ ಮನವಿ ಸಲ್ಲಿಸಿ, ಕಳಕಳಿಯಿಂದ ಬೇಡಿಕೊಂಡರೂ ಯಾವುದೇ ಕ್ರಮಕೈಗೊಳ್ಳದೇ ರೈತರ ಮೇಲೆ ಅನ್ಯಾಯ ಮಾಡುತ್ತಿದ್ದಿರಿ’ ಎಂದು ಅಧಿಕಾರಿಗಳನ್ನು ರೈತರು ತರಾಟೆಗೆ ತಗೆದುಕೊಂಡರು. ಸಿ.ಪಿ.ಐ ಅರುಣಕುಮಾರ ಜಿ.ವಿ ಅವರು ಮಧ್ಯ ಪ್ರವೇಶಿಸಿ ಸಮಾಧಾನಗೊಳಿಸಲು ಯತ್ನಿಸಿದರು. ಅಷ್ಟರಲ್ಲಿ ತಹಶೀಲ್ದಾರ್‌ ಗಿರೀಶ ಸ್ವಾದಿ ಅಲ್ಲಿಗೆ ಬಂದು ‘ನಿಮ್ಮಗಳಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುವುದು, ಬನ್ನಿ’ ಎಂದು ಸಮಾಧಾನಪಡಿಸಿದರು.

ಹೂಲಿ ಗ್ರಾಮದ ಹಿರಿಯ ರೈತರಾದ ಸಿದ್ಧಪ್ಪ ದಿಡಗನ್ನವರ ಮಾತನಾಡಿ, ‘ಅಲ್ಲಿ ಯಾವುದೂ ವ್ಯವಸ್ಥೆ ಇಲ್ಲ. ನೀರಿಲ್ಲ, ನೆರಳಿಲ್ಲ, ಬೆಳಕಿಲ್ಲ. ಅಲ್ಲದೆ ನಮ್ಮನ್ನು ಕಳೆದ 8 ದಿನದಿಂದ ಅಲ್ಲಿಯೇ ಇರುವಂತೆ ಮಾಡಿದ್ದಲ್ಲದೆ, ಇವತ್ತು ಖರೀದಿ ಬಂದ್‌ ಮಾಡಿದೆ ಎಂದು ಖರೀದಿ ಕೇಂದ್ರವನ್ನು ಮುಚ್ಚಿ ಹೋಗಿದ್ದಾರೆ. ಅಲ್ಲಿ ತೂಕದಲ್ಲಿ ಮೋಸ ಮಾಡುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದರು.

ADVERTISEMENT

‘ಇಲ್ಲಿ ರೈತರಿಗಿಂತ ದಲ್ಲಾಳಿಗಳು, ವ್ಯಾಪಾರಸ್ಥರ ಕಡಲೆ ಖರೀದಿ ಮಾಡಿದ್ದಾರೆ. ಸುಮಾರು 1500 ರೈತರಿಗೆ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ ಮುಂಚಿನಗಿಂತ ಹಿಂದಿನವರ ಕಡಲೆ ತೆಗೆದುಕೊಂಡಿದ್ದಾರೆ.ನಾವು ಎಂಟು ದಿನದಿಂದ ಇಲ್ಲಿದ್ದೇವೆ’ ಎಂದು 25, 27, 18 ನಂಬರುಗಳ ಚೀಟಿ ತೋರಿಸಿದರು.

ಚಿಕ್ಕಉಳ್ಳಿಗೇರಿ ಗ್ರಾಮದ ಸಿದ್ಧಪ್ಪ ತುರಾಯಿ ಮಾತನಾಡಿ, ‘ನಮ್ಮ ಕಡಲೆ ತೂಕ ಮಾಡಿ ತಮ್ಮ ಕಬ್ಜಾ ತೆಗದುಕೊಂಡ ಅಲ್ಲಿನವರು, ನನಗೆ ಕೊಡುವ ರಸೀದಿಯಲ್ಲಿ 5 ಕ್ವಿಂಟಾಲ್‌ ಕಡಿಮೆ ಹಚ್ಚಿಕೊಟ್ಟಿದ್ದಾರೆ. ಅದನ್ನು ಕೇಳಿದರೆ ನನಗೆ ಬಾಯಿಗೆ ಬಂದಂತೆ ಮಾತನಾಡಿ ಅವಮಾನ ಮಾಡಿದರು’ ಎಂದು ಮನನೊಂದು ನುಡಿದರು.

‘ಅಲ್ಲದೆ ಒಬ್ಬ ರೈತರಿಂದ ಕನಿಷ್ಠ 25 ಕೆಜಿಯಷ್ಟು ಕಡಲೆಯನ್ನು ತೂಕ ಮಾಡುವ ಹಮಾಲರು ತೆಗೆದುಕೊಳ್ಳುತ್ತಾರೆ. ಅದನ್ನು ಯಾಕೆ? ಎಂದು ಪ್ರಶ್ನಿಸಿದರೆ, ‘ಇಲ್ಲಿ ಹಮಾಲರು ಕಡಿಮೆ ಇದ್ದಾರೆ. ತೆಗೆದುಕೊಳ್ಳಲಿ ಬಿಡಿ’ ಎಂದು ಹಾರಿಕೆ ಉತ್ತರ ನೀಡುತ್ತಾರೆ’ ಎಂದರು ತುರಾಯಿ.

‘ತೂಕದಲ್ಲಿ ಮೋಸ ಮಾಡಿದ ಕಡಲೆಯನ್ನು ಚೀಲದಲ್ಲಿ ತುಂಬಿ ಬೇರೆಡೆಗೆ ಸಾಗಿಸುತ್ತಾರೆ. ನಾವು ತೆಪ್ಪಗೆ ಇದ್ದಾಗ್ಯೂ ಕೂಡ ನಮ್ಮನ್ನು ಇಡೀ ರಾತ್ರಿ ಕತ್ತಲ್ಲಲ್ಲಿ ಇರಿಸಿದರು’ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.

ತಹಶೀಲ್ದಾರ್‌ ಗಿರೀಶ ಸ್ವಾದಿ ಹಾಗೂ ಬಸನಗೌಡಾ ಕೂಟೂರ ಹಾಗೂ ಸಿ.ಪಿ.ಐ ಅರುಣಕುಮಾರ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದರು. ರೈತರೊಂದಿಗೆ ಸ್ಥಳಕ್ಕೆ ಹೋಗಿ ಅಲ್ಲಿ ನೀರು, ನೆರಳು, ಬೆಳಕಿನ ವ್ಯವಸ್ಥೆ ಮಾಡಬೇಕು. ತೂಕದಲ್ಲಿ ಪಾದರ್ಶಕತೆಗಾಗಿ ಇನ್ನಷ್ಟು ಹಮಾಲರನ್ನು ನಿಗದಿಪಡಿಸಲು ಸೂಚಿಸಿದರು.

ಸದಾಶಿವ ಮಿರಜಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.