ADVERTISEMENT

ನವೀಕರಣಕ್ಕೆ ಕಾದಿರುವ ಅಂಬೇಡ್ಕರ್‌ ಕೆರೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 7:23 IST
Last Updated 7 ಮೇ 2018, 7:23 IST
ಅನಗೋಳದಲ್ಲಿ ಒಣಗಿದ ಕೆರೆ ಮಧ್ಯದಲ್ಲಿ ಇರುವ ಅಂಬೇಡ್ಕರ್‌ ಪುತ್ಥಳಿ
ಅನಗೋಳದಲ್ಲಿ ಒಣಗಿದ ಕೆರೆ ಮಧ್ಯದಲ್ಲಿ ಇರುವ ಅಂಬೇಡ್ಕರ್‌ ಪುತ್ಥಳಿ   

ಬೆಳಗಾವಿ: ಅನಗೋಳ ಹೃದಯ ಭಾಗದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ 11 ಎಕರೆ ವ್ಯಾಪ್ತಿಯ ಐತಿಹಾಸಿಕ ಕೆರೆ ಮತ್ತು ಅದರ ಮಧ್ಯದಲ್ಲಿ ಅನಾಥವಾಗಿ ನಿಂತಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗಳು ಪ್ರದೇಶದ ದುಸ್ಥಿತಿಯನ್ನು ತೋರಿಸುತ್ತಿವೆ.

ಅನಗೋಳ ಪರಿಸರದಲ್ಲಿ ಹಸಿರು ಹಾಗೂ ತಂಪು ವಾತಾವರಣ ಮೂಡಿಸಿ ಅಂದು ಗಮನ ಸೆಳೆದಿದ್ದ ಅಂಬೇಡ್ಕರ ಕೆರೆಯಲ್ಲಿ ಈಗ ನೀರಿಲ್ಲ, ಸ್ವಚ್ಛತೆ ಇಲ್ಲ, ಸುತ್ತಲಿನ ಗೋಡೆ ಸೇರಿದಂತೆ ಎಲ್ಲ ಕಡೆ ಎಲೆಗಳ್ಳಿ ಚಾಚಿಕೊಂಡಿದೆ. ಗೋಡೆ ಕುಸಿತದ ಹಂತದಲ್ಲಿದೆ.

‘ಕೆರೆ ಮಧ್ಯದ ಅಂಬೇಡ್ಕರ ಪುತ್ಥಳಿ ದೂರದಿಂದ ಕಂಬದ ಆಕಾರದಲ್ಲಿ ಗೋಚರಿಸುತ್ತದೆ. ಅದಕ್ಕೆ ನೆರಳು, ಅಲ್ಲಿ ಹೋಗಲು ದಾರಿ, ಬೆಳಕು ನೀಡುವ ದೀಪಗಳೂ ಇಲ್ಲ. ಈ ಭಾಗದ ನಾಯಕರ ನಿರಾಸಕ್ತಿಯಿಂದ ಈ ಸ್ಥಿತಿ ಉಂಟಾಗಿದೆ’ ಎಂದು ಇಲ್ಲಿಯ ನಿವಾಸಿ ಶಿವಾಜಿ ಭಜಂತ್ರಿ ಹೇಳಿದರು.

ADVERTISEMENT

‘ಅಂಬೇಡ್ಕರ್‌ ಜಯಂತಿ ಬಂದಾಗ ಎಲ್ಲ ಭರವಸೆಗಳೂ ಬರುತ್ತವೆ. ತೋರಿಕೆಗಾಗಿ ಒಂದಿಷ್ಟು ಸ್ವಚ್ಛತೆ ನಡೆಯುತ್ತದೆ. ಅನಂತರ ಎಲ್ಲ ಮರೆತು ಹೋಗುತ್ತವೆ. ಈ ಭಾಗದ ಜೀವಜಲವಾಗಿದ್ದ ಕೆರೆ ಈಗ ಮಳೆಗಾಲದಲ್ಲಿ ಮಾತ್ರ ತುಂಬುತ್ತದೆ. ಬೇಸಿಗೆಯ ಅರ್ಧ ವರ್ಷ ಒಣಗಿರುತ್ತದೆ’ ಎಂದು ಅವರು ಹೇಳಿದರು.

ಕೆರೆ ಸುತ್ತಲಿನ ಪ್ರದೇಶದಲ್ಲಿ ಸಾಮಾನ್ಯವಾಗಿ ಬಡ, ಹಿಂದುಳಿದ ಜನರೇ ವಾಸಿಸಿದ್ದಾರೆ. ಕೊರವರು, ಪರಿಶಿಷ್ಟರು, ಭಜಂತ್ರಿಗಳು, ಕೊನವಾಳರು, ಕುರುಬರು, ವಡ್ಡರೇ ಹೆಚ್ಚಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಉದ್ಯಮಭಾಗದಲ್ಲಿ ನಿತ್ಯ ಕೂಲಿ, ಇಲ್ಲವೇ 4ನೇ ದರ್ಜೆ ಉದ್ಯೋಗಿಗಳು. ಇಂಥ ಜನರ ಮಾತನ್ನು ಯಾವ ನಾಯಕರೂ ಕೇಳುವುದಿಲ್ಲ. ಅದಕ್ಕೆ ಇದು ಅಭಿವೃದ್ದಿ ಆಗಿಲ್ಲ ಎಂದು ಮತ್ತೊಬ್ಬ ನಿವಾಸಿ ಶಂಕರ ಕೋಲಕಾರ ಹೇಳಿದರು.

ಪರಿಶಿಷ್ಟರೇ ವಾಸಿಸಿರುವ ಅಂಬೇಡ್ಕರ ಗಲ್ಲಿ, ಕೊರವಿ ಗಲ್ಲಿ, ಭಜಂತ್ರಿ ಗಲ್ಲಿ, ಇಂದಿರಾನಗರ, ವಡ್ಡರ ಗಲ್ಲಿಗಳಲ್ಲಿ ವಿಶೇಷ ಅನುದಾನದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಆಗಿದ್ದರೂ ಸೂಕ್ತ ಚರಂಡಿ ಇಲ್ಲದ್ದರಿಂದ ಕೊಳಚೆ ನೀರು ನಿಂತು ದುರ್ವಾಸನೆ ಬೀರಿದೆ.

ಕನ್ನಡ ಶಾಲೆ ಇಲ್ಲ: ‘ಈ ಭಾಗದಲ್ಲಿ ಬಹುತೇಕ ಕನ್ನಡಿಗರೇ ಇದ್ದರೂ ಇವರ ಮಕ್ಕಳ ಶಿಕ್ಷಣಕ್ಕೆ ಇಲ್ಲಿ ಕನ್ನಡ ಶಾಲೆ ಇಲ್ಲ. ದೂರದ ಜಟಪಟ ಕಾಲೊನಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂಬರ್‌ 18ರಲ್ಲಿ ಇವರು ಕಲಿಯುತ್ತಾರೆ. ಡೋನೇಶನ್‌ ಕೊಡುವ ಶಕ್ತಿಯುಳ್ಳ ಕೆಲವರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಕಳಿಸುತ್ತಾರೆ. ಹಲವು ಬಾರಿ ಮನವಿ ಮಾಡಿದರೂ ಇಲ್ಲಿ ಕನ್ನಡ ಶಾಲೆ ತೆರೆದಿಲ್ಲ’ ಎಂದು ರಜನಿಕಾಂತ ಅನಗೋಳಕರ ಹೇಳಿದರು.

ಕಾಮಗಾರಿಗಳು ಪ್ರಗತಿಯಲ್ಲಿವೆ: ‘ಬಹಳ ದಿನಗಳ ಹಿಂದೆ ಹಾಕಿದ ಚರಂಡಿ ಪೈಪ್‌ಗಳು ಈಗ ಚಿಕ್ಕದಾಗಿ ನೀರು ಹರಿದು ಹೋಗುತ್ತಿಲ್ಲ. ಅಮೃತ ಸಿಟಿ ಯೋಜನೆಯಡಿ ಹೊಸ ಚರಂಡಿ ಪೈಪ್‌ ಅಳವಡಿಕೆ ಹಾಗೂ ರಸ್ತೆಗಳ ಕಾಮಗಾರಿ ಭರದಿಂದ ನಡೆದಿವೆ. ಕೊರವಿ ಗಲ್ಲಿ, ಭಜಂತ್ರಿ ಗಲ್ಲಿಗಳಲ್ಲಿ ಈಗಾಗಲೇ ಕಾಮಗಾರಿಗಳು ಮುಗಿದಿದೆ. ಬಾಳಿಕೆ ಬರಲಿ ಎಂದು ಬಹುತೇಕ ಕಡೆ ಕಾಂಕ್ರೀಟ್‌ ರಸ್ತೆಗಳನ್ನೇ ನಿರ್ಮಿಸಲಾಗಿದೆ‌. ಅಂಬೇಡ್ಕರ್‌ ಕೆರೆ ನವೀಕರಣ ಯೋಜನೆ ಸಿದ್ದವಾಗಿದೆ’ ಎಂದು ಮಹಾನಗರಸಭೆ ಸದಸ್ಯ ವಿನಾಯಕ ಗುಂಜಟಕರ ಹೇಳಿದರು.

ವಾರ್ಡ್‌ ವ್ಯಾಪ್ತಿ

‌ರಾಮ್‌ ರೆಸ್ಟೋರೆಂಟ್‌, ಸುಶಾಂತ ಆಸ್ಪತ್ರೆ, ಕೊರವಿ ಗಲ್ಲಿ, ಭಜಂತ್ರಿ ಗಲ್ಲಿ, ಅನಗೋಳ–ವಡಗಾವಿ ರಸ್ತೆ, ಆನಂದ ಪಾಟೀಲ ಲೇಔಟ್‌, ಸಂತಮೀರಾ ಶಾಲೆ ರಸ್ತೆ, ಅಂಬೇಡ್ಕರ್‌ ರಸ್ತೆ, ಹರಿಜನ ವಾಡಾ (ಕೊನವಾಳ ಗಲ್ಲಿ), ಜೇರಿ ಗಲ್ಲಿ, ರಾಜಹಂಸ ಗಲ್ಲಿಯ ಪೂರ್ವಭಾಗ, ಇಂದಿರಾನಗರ 4,5,6 ನೇ ಕ್ರಾಸ್‌.

**
ಐದು ವರ್ಷಗಳ ಹಿಂದೆ ಇಲ್ಲಿನ ಕೆರೆ ಮಧ್ಯದಲ್ಲಿ ಡಾ. ಅಂಬೇಡ್ಕರ್ ಪುತ್ಥಳಿ ನಿರ್ಮಿಸಲಾಗಿದೆ. ಆದರೆ ಸಂಪರ್ಕ ಸೇತುವೆ ಇಲ್ಲ. ಉದ್ಯಾನ ನಿರ್ಮಿಸಿಲ್ಲ, ಕೆರೆ ತುಂಬಿಸುವ ಕಾರ್ಯವೂ ಆಗಿಲ್ಲ
– ರಜನಿಕಾಂತ ಅನಗೋಳಕರ, ಅಂಬೇಡ್ಕರ್‌ ಗಲ್ಲಿ ನಿವಾಸಿ 

ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.