ADVERTISEMENT

ನಾಡಿಗೆ ಬಂದ ಚಿರತೆ ಮನೆಯಲ್ಲಿ ಬಂಧಿ

ಒಬ್ಬನಿಗೆ ಗಾಯ: ಆತಂಕದಲ್ಲಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 5:39 IST
Last Updated 8 ಜುಲೈ 2013, 5:39 IST

ಖಾನಾಪುರ: ತಾಲ್ಲೂಕಿನ ಭೀಮಗಡ ವನ್ಯಜೀವಿ ರಕ್ಷಿತ ಅಭಯಾರಣ್ಯದಿಂದ ಕಣಕುಂಬಿ ಬಳಿಯ ಚಿಕಲೆ ಗ್ರಾಮಕ್ಕೆ ಶನಿವಾರ ತಡರಾತ್ರಿ ಆಹಾರವನ್ನು ಹುಡುಕಿಕೊಂಡು ಬಂದ ಚಿರತೆಯೊಂದು ಗ್ರಾಮದ ಮನೆಯೊಂದಕ್ಕೆ ನುಗ್ಗಿ ಮಾಲೀಕನ ಮೇಲೆ ದಾಳಿ ನಡೆಸಿದ್ದರರಿಂದ ಗಾಯಗೊಂಡಿದ್ದರೂ ಚಿರತೆ ಮನೆಯಲ್ಲೇ ಸೆರೆಯಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಚಿಕಲೆ ಗ್ರಾಮದ ವಾಸುದೇವ ಪವಾರ ಎಂಬ ರೈತನ ಮನೆಯಲ್ಲಿ ಭಾನುವಾರ ದಿನವಿಡಿ ಚಿರತೆ ಕದಲದೇ ಅಡಗಿ ಕುಳಿತಿದ್ದರಿಂದ ಸುತ್ತಮುತ್ತಲಿನ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಘಟನೆಯಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ವಾಸುದೇವ ಪವಾರ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಘಟನೆಯ ವಿವರ
ಶನಿವಾರ ರಾತ್ರಿ ಬೇಟೆಯಾಡುವ ಉದ್ದೇಶದಿಂದ ಚಿಕಲೆ ಗ್ರಾಮದ ವಾಸುದೇವ ಪವಾರ ಎಂಬುವರ ಮನೆಯ ಬಳಿ ಹೊಂಚುಹಾಕಿ ಕಾಯುತ್ತಿದ್ದ ಚಿರತೆಯನ್ನು ಕಂಡ ನಾಯಿಗಳ ಗುಂಪು ಬೊಗಳಲು ಪ್ರಾರಂಭಿಸಿವೆ. ನಾಯಿಗಳು ಬೊಗಳುವ ಶಬ್ದವನ್ನು ಕೇಳಿದ ವಾಸುದೇವ ಮನೆಯಿಂದ ಹೊರಬಂದಾಗ ಆತನ ಸಾಕುನಾಯಿ ಮನೆಯೊಳಗೆ ಹೊಕ್ಕಿದೆ. ಇದೇ ವೇಳೆ ಚಿರತೆಯೂ ಸಹ ನಾಯಿಯನ್ನು ಬೆನ್ನಟ್ಟಿ ಆತನ ಮನೆಯನ್ನು ಪ್ರವೇಶಿಸಿದೆ.

ಮನೆಯ ಒಳಗೆ  ವಾಸುದೇವನ ಪತ್ನಿ ಹಾಗೂ ಮಕ್ಕಳು ಇದ್ದ ಕಾರಣ ವಾಸುದೇವ ಕೂಡಲೇ ಚಿರತೆಯ ಹಿಂದೆಯೇ ಮನೆಯ ಒಳಗೆ ಹೋಗಿ ಅವರೆಲ್ಲರನ್ನು ಎಬ್ಬಿಸಿ ಹೊರಕ್ಕೆ ಕರೆತಂದಿದ್ದಾನೆ. ಈ ಸಂದರ್ಭದಲ್ಲಿ ಆತನ ಮೇಲೆ ದಾಳಿ ಮಾಡಿದ ಚಿರತೆ ಆತನ ಕೈ ಹಾಗೂ ಹೊಟ್ಟೆಗಳಿಗೆ ಪರಚಿ ಗಾಯಗೊಳಿಸಿದೆ. ಆದರೂ ಎದೆಗುಂದದ ವಾಸುದೇವ ಚಿರತೆಯನ್ನು ಒಳತಳ್ಳಿ  ಹೊರಗೆ ಬಂದು ಮನೆಯನ್ನು ಹೊರಗಿನಿಂದ ಬಂದ್ ಮಾಡಿದ್ದಾನೆ.

ಪಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆದ ಆತ ಬೆಳಿಗ್ಗೆ ಚಿಕಿತ್ಸೆಗೆಂದು ಖಾನಾಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ಈ ವಿಷಯ ಹೊರಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಚಿರತೆ ಬಂಧನಕ್ಕೊಳಗಾದ ಸ್ಥಳಕ್ಕೆ ಅರಣ್ಯ ಇಲಾಖೆಯ ಎಸಿಎಫ್ ಪಿ.ಕೆ. ಪೈ ಹಾಗೂ ತಂಡ ಭೇಟಿ ನೀಡಿ ಚಿರತೆಯನ್ನು ಅಲ್ಲಿಂದ ಮರಳಿ ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದೆ.

ಆದರೆ ಜೀವಭಯದಿಂದ ಚಿರತೆ ಅವಿತುಕೊಂಡ ಮನೆಯಿಂದ ಹೊರಗೆ ಕದಲದೇ ಇದ್ದದ್ದರಿಂದ ಅಡಚಣೆಯುಂಟಾಗಿದೆ. ಸೋಮವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಬೋನು ತರೆಸಿ ಅದನ್ನು ಬೋನಿನಲ್ಲಿ ಬಂಧಿಸಿ ನಂತರ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಸಿಪಿಐ ಮಹಾಂತೇಶ್ವರ ಭೇಟಿ ನೀಡಿ ಹೆಚ್ಚಿನ ಬಂದೋಬಸ್ತ್ ಕಾರ್ಯ ಕೈಗೊಂಡಿದ್ದಾರೆ.
ಸದ್ಯ ಚಿರತೆ ಅವಿತಿರುವ ಚಿಕಲೆ ಗ್ರಾಮದ ವಾಸುದೇವ ಅವರ ಮನೆಯ ಸುತ್ತಮುತ್ತ ಬಿಗುವಿನ ವಾತಾವರಣವಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.