ADVERTISEMENT

ನೆರವಿನ ನಿರೀಕ್ಷೆಯಲ್ಲಿ ವಡ್ಡರ ಕುಟುಂಬ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 6:01 IST
Last Updated 24 ಜೂನ್ 2013, 6:01 IST

ಬೆಳಗಾವಿ: ಕಲ್ಲು ಕುಟಿಗರ (ವಡ್ಡರ) ಚಾಣ- ಸುತ್ತಿಗೆಯಿಂದ ನಿರಂತರವಾಗಿ ಹೊರಡುತ್ತಿದ್ದ ಶಬ್ದ, ವಾಹನಗಳ ಸದ್ದಿನ ನಡುವೆ ನಿಧಾನವಾಗಿ ಸ್ತಬ್ಧವಾಗುತ್ತಿದೆ. ಯಾಂತ್ರೀಕರಣದ ಅಬ್ಬರ ದಲ್ಲಿ ವಡ್ಡರ ಕುಲ ಕಸುಬು ಕಾಲಗರ್ಭ ದಲ್ಲಿ ಲೀನವಾಗುತ್ತಿದೆ...!

ನಗರದ ಅಶೋಕ ವೃತ್ತದಿಂದ ಗೋಕಾಕ ರಸ್ತೆಯಲ್ಲಿ ಹೊರಟರೆ ಕೋಟೆ ಕೆರೆಯ ಸಮೀಪದಲ್ಲಿ ಶಿಲೆ ಕಲ್ಲಿಗೆ ಚಾಣ- ಸುತ್ತಿಗೆಯಿಂದ ಏಟು ನೀಡುತ್ತಿರುವ ಸುಮಾರು 20 ಕುಟುಂಬಗಳು ಕಂಡು ಬರುತ್ತವೆ. ಬಿಸಿಲು- ಮಳೆ ಲೆಕ್ಕಿಸದೇ ಜೀವನೋ ಪಾಯಕ್ಕಾಗಿ ಕಾಯಕ ಯೋಗಿಗಳಂತೆ ಒಂದೇ ಸಮನೆ ಕೆಲಸದಲ್ಲಿ ನಿರತರಾಗಿರುತ್ತಾರೆ.

ಬೀಸು ಕಲ್ಲು, ಒಳಕಲ್ಲು, ರುಬ್ಬು ಕಲ್ಲು, ಮಸಾಲೆ ಅರೆಯುವ ಕಲ್ಲು ಹೀಗೆ ಅಡುಗೆಗೆ ಅಗತ್ಯ ಇರುವ ಸಾಮಗ್ರಿಗಳನ್ನು ಸಿದ್ಧಗೊಳಿಸಲು ವಡ್ಡರ ಕುಟುಂಬದಲ್ಲಿ ಮನೆಯ ಮಂದಿಯೆಲ್ಲ ತೊಡಗಿಕೊಳ್ಳುತ್ತಾರೆ. ಮಕ್ಕಳು- ಮಹಿಳೆಯರು, ವೃದ್ಧರು ಸಹ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಕುಟುಂಬ ನಿರ್ವಹಣೆಗಾಗಿ ಕೈಜೋಡಿಸುತ್ತಾರೆ.

ವೈವಿಧ್ಯಮಯ ಮಿಕ್ಸರ್, ಗ್ರ್ಯಾಂಡರ್‌ಗಳ ಭರಾಟೆಯ ನಡುವೆ ಬೀಸು ಕಲ್ಲು, ಒಳಕಲ್ಲುಗಳು ಮೂಲೆಗುಂಪಾಗುತ್ತಿದೆ. ಇದರಿಂದಾಗಿ ಈ ಕೆಲಸವನ್ನೇ ನೆಚ್ಚಿಕೊಂಡಿರುವ ವಡ್ಡರ ಕುಟುಂಬಗಳು ಎರಡು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಮೂಲತಃ ನಿಪ್ಪಾಣಿಯಿಂದ ವಲಸೆ ಬಂದಿರುವ ವಡ್ಡರ ಕುಟುಂಬಗಳು ಕಳೆದ 40 ವರ್ಷಗಳಿಂದ ಬೆಳಗಾವಿಯನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿವೆ. ಚಿಕ್ಕೋಡಿಯ ಬೋರಗಲ್ ಗುಡ್ಡದಿಂದ ಶಿಲೆ ಕಲ್ಲುಗಳನ್ನು ತರಿಸಿಕೊಂಡು, ತಮ್ಮ ಕೈಚಳಕದಿಂದ ಅವುಗಳಿಗೆ ಜೀವ ತುಂಬುತ್ತಿದ್ದಾರೆ.

`ನನ್ನ ತಂದೆಯ ಕಾಲಕ್ಕೇ ನಿಪ್ಪಾಣಿಯಿಂದ ಬೆಳಗಾವಿಗೆ ನಾವೆಲ್ಲ ಬಂದಿದ್ದೇವೆ. ಒಬ್ಬ ಎರಡು ದಿನಗಳ ಕಾಲ ಶ್ರಮ ವಹಿಸಿ ಕೆಲಸ ಮಾಡಿದರೆ ಒಂದು ಬೀಸು ಕಲ್ಲು ಸಿದ್ಧವಾಗುತ್ತದೆ. ಇದನ್ನು 600ರಿಂದ 700 ರೂಪಾಯಿವರೆಗೆ ಮಾರುತ್ತಿದ್ದೇವೆ. ಒಂದು ದಿನಕ್ಕೆ ಎರಡು ಒಳಕಲ್ಲು ತಯಾರಿಸಲು ಸಾಧ್ಯವಿದೆ. ಇದನ್ನು ರೂ. 300ಕ್ಕೆ ಕೊಡುತ್ತಿದ್ದೇವೆ. ದೊಡ್ಡ ರುಬ್ಬು ಕಲ್ಲಿಗೆ 700 ರೂಪಾಯಿಗೆ ಮಾರುತ್ತೇವೆ' ಎಂದು ದಶರಥ ಆನಂದ ಪಾತ್ರೆ `ಪ್ರಜಾವಾಣಿ'ಗೆ ತಿಳಿಸಿದರು.

`ರುಬ್ಬು ಕಲ್ಲಿನ ಮಹತ್ವವನ್ನು ತಿಳಿದಿರುವ ಹಳ್ಳಿಯ ಜನರು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ. ಹುಬ್ಬಳ್ಳಿ- ಧಾರವಾಡ, ಬೈಲಹೊಂಗಲ, ಗೋವಾದ ಜನರು ಹೆಚ್ಚು ರುಬ್ಬು ಕಲ್ಲನ್ನು ಒಯ್ಯುತ್ತಿದ್ದಾರೆ. ಹಲವು ಯಂತ್ರಗಳು ಬಂದಿರುವುದರಿಂದ ಇತ್ತೀಚಿನ ದಿನಗಳಲ್ಲಿ ನಮ್ಮ ರುಬ್ಬು ಕಲ್ಲುಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಬೇರೆ ಯಾವುದೇ ಕೆಲಸ ಗೊತ್ತಿಲ್ಲದ ನಮಗೆ ಇದರಿಂದಾಗಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ' ಎನ್ನುತ್ತಾರೆ ದಶರಥ.

`ಸುಮಾರು 40 ವರ್ಷಗಳಿಂದ ಬೆಳಗಾವಿಯಲ್ಲಿ ಗುಡಿಸಲು ಹಾಕಿಕೊಂಡು ನೆಲೆಸಿರುವ ನಮಗೆ ಪಡಿತರ ಚೀಟಿಯನ್ನು ನೀಡಲಾಗಿತ್ತು. ಆದರೆ, ಈಗ ಅವುಗಳನ್ನು ರದ್ದುಗೊಳಿಸಲಾಗಿದೆ. ನಮ್ಮ ಬಳಿ ಈಗ ಯಾವುದೇ ಗುರುತಿನ ಚೀಟಿಯೇ ಇಲ್ಲದಂತಾಗಿದೆ. ಮೊದಲು ಕ್ಲಬ್ ರಸ್ತೆಯಲ್ಲಿ ಇರುತ್ತಿದ್ದೆವು. ಬಳಿಕ ಕೋಟೆ ಕೆರೆ ಬಳಿ ನೆಲೆಸತೊಡಗಿದೆವು. ಅಲ್ಲಿಂದ ಒಕ್ಕಲೆಬ್ಬಿಸಿರುವುದರಿಂದ ಇಲ್ಲಿಗೆ ಬಂದಿದ್ದೇವೆ.

ಇಲ್ಲಿಯೂ ನಮ್ಮ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಹೀಗಾಗಿ ರಾತ್ರಿ ಹೊತ್ತು ಗಾಂಧಿ ನಗರದಲ್ಲಿ ಬಾಡಿಗೆ ರೂಮ್‌ಗಳಲ್ಲಿ ನೆಲೆಸುತ್ತಿದ್ದೇವೆ' ಎಂದು ದಾದಾ ರಾಮ್ ವಡ್ಡರ ವಿಷಾದಿಸಿದರು.

`ಪಡಿತರ ಚೀಟಿಗಾಗಿ ಸರ್ಕಾರಿ ಕಚೇರಿಗೆ ಅಲೆದರೂ ಪ್ರಯೋಜನ ಆಗಿಲ್ಲ. ಎರಡು ದಿನ ಕೆಲಸ ಬಿಟ್ಟು ಅಧಿಕಾರಿಗಳ ಹಿಂದೆ ಹೋದರೆ, ಎರಡು ಹೊತ್ತು ಊಟ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ನಮ್ಮ ಮಕ್ಕಳನ್ನೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ನಮಗೆ ಕೆಲಸ ಮಾಡಲು ಪ್ರತ್ಯೇಕ ಸ್ಥಳವನ್ನು ನೀಡಬೇಕು. ಬಿಪಿಎಲ್ ಪಡಿ ತರ ಚೀಟಿ ಸೌಲಭ್ಯವನ್ನು ನೀಡಬೇಕು' ಎಂದು ವಡ್ಡರ ಸರ್ಕಾರವನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.