ADVERTISEMENT

ನೈಸರ್ಗಿಕ ಸಂಪನ್ಮೂ ಲದ ಮಹತ್ವ ಅರಿಯಿರಿ

ಹವಾಮಾನ ಬದಲಾವಣೆ ಕುರಿತು ವಿಚಾರ ಸಂಕಿರಣ; ಪ್ರೊ.ಬಿ.ಕೆ.ಚಂದ್ರಶೇಖರ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2016, 6:10 IST
Last Updated 1 ಮಾರ್ಚ್ 2016, 6:10 IST

ಬೆಳಗಾವಿ: ‘ನೈಸರ್ಗಿಕ ಸಂಪನ್ಮೂಲಗಳಿಗೆ ಗಂಡಾಂತರ ಬಂದಿದೆ. ಪೆಟ್ರೋಲ್‌, ಡೀಸೆಲ್‌, ಖನಿಜಗಳ ನಿಕ್ಷೇಪಗಳು ಬರಿದಾಗುತ್ತಿವೆ. ಹೀಗಿದ್ದರೂ ನೀತಿ ನಿರೂಪಕರಿಗೆ ಇದರ ಮಹತ್ವ ಇನ್ನೂ ಅರ್ಥವಾಗಿಲ್ಲ’ ಎಂದು ಬೆಂಗಳೂರಿನ ಕ್ಲೈಮೇಟ್‌ ಚೇಂಚ್‌ ಇನಿಷಿಯೇಟಿವ್‌ ಸಂಸ್ಥೆಯ ಅಧ್ಯಕ್ಷ ಪ್ರೊ. ಬಿ.ಕೆ. ಚಂದ್ರಶೇಖರ ವಿಷಾದಿಸಿದರು.

ನಗರದ ಲಿಂಗರಾಜ ಕಾಲೇಜು ‘ಹವಾಮಾನ ಬದಲಾವಣೆ: ಸವಾಲುಗಳು ಮತ್ತು ಉಪಕ್ರಮಗಳು’ ಕುರಿತು ಸೋಮವಾರ ಹಮ್ಮಿಕೊಂಡಿದ್ದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಶಕಗಳ ಹಿಂದೆ ಕೇವಲ ಪರಿಸರ ಸಂರಕ್ಷಣೆ ಬಗ್ಗೆ ಮಾತ್ರ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಹವಾಮಾನ ಬದಲಾವಣೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಕೆ ಮಾಡಲಾಗುತ್ತಿದೆ. ಹೀಗಿದ್ದರೂ ಈ ಬಗ್ಗೆ ನೀತಿ ನಿರೂಪಕರು ವಿಚಾರ ಮಾಡುತ್ತಿಲ್ಲ. ಪಶ್ಚಿಮಘಟ್ಟವನ್ನು ಬರಿದು ಮಾಡಿಕೊಂಡರೆ, ಮತ್ತೊಮ್ಮೆ ಇದನ್ನು ಲೋಕೋಪಯೋಗಿ ಇಲಾಖೆಯಿಂದ ಕಟ್ಟಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಕೃಷಿಗೆ ಶೇ 37ರಷ್ಟು ಅಂತರ್ಜಲವನ್ನು ಬಳಸಿಕೊಳ್ಳಲಾಗುತ್ತಿದೆ. ಬರಡು ಭೂಮಿ ಹೊಂದಿರುವುದರಲ್ಲಿ ರಾಜಸ್ತಾನದ ಬಳಿಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೃಷಿ ಕ್ಷೇತ್ರಕ್ಕೆ ಹೊಸ ಗಂಡಾಂತರ ಬಂದಿದೆ. 2030ರ ವೇಳೆಗೆ ಏಕಕಾಲಕ್ಕೆ ಬರಗಾಲ, ಚಳಿ, ಮಳೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ದೇಶದಲ್ಲಿ ಮೂರನೇ ವರ್ಷ ಬರಗಾಲ ಬಂದಿದೆ’ ಎಂದು ಅವರು ಹೇಳಿದರು.

‘ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿದೆ. ಜಾತಿಯಿಂದ ಗುರುತಿಸಿಕೊಳ್ಳುವ ರಾಜಕೀಯ ವ್ಯವಸ್ಥೆಯಿಂದ ಹೊರಗೆ ಬರುತ್ತಿಲ್ಲ. ನವ ಪೀಳಿಗೆ ಜಾತಿ ವ್ಯವಸ್ಥೆಯಿಂದ ದೂರ ಉಳಿಯಬೇಕಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿಯ ಕನಸು ಬಿತ್ತಿದ ಪ್ರಧಾನಿ ನರೇಂದ್ರ ಮೋದಿಯನ್ನು ಯುವ ಜನತೆ ಬೆಂಬಲಿಸಿತು ಎಂದರು.

ಬಿಹಾರ ಚುನಾವಣೆಯಲ್ಲಿ ಬ್ರಾಹ್ಮಣರು ನಿತೀಶಕುಮಾರ್‌ ಅವರಿಗೆ ಮತ ಹಾಕಿದರು. ಜನರಿಗೆ ಉತ್ತಮ ಆಡಳಿತ ಹಾಗೂ ಶಾಂತಿ–ಸುವ್ಯವಸ್ಥೆ ನೆಲೆಸಿರುವುದನ್ನು ಬಯಸುತ್ತಾರೆ. ಪ್ರಾಥಮಿಕ ಆರೋಗ್ಯ, ಶುದ್ಧ ಕುಡಿಯುವ ನೀರು, ಶಿಕ್ಷಣವನ್ನು ಜನ ನಿರೀಕ್ಷಿಸುತ್ತಿದ್ದು, ಅದನ್ನು ನೀಡುವ ಜವಾಬ್ದಾರಿ ಪ್ರಭುತ್ವಕ್ಕಿದೆ’ ಎಂದು ಮಾಜಿ ಸಚಿವರೂ ಆಗಿರುವ ಚಂದ್ರಶೇಖರ್‌ ಹೇಳಿದರು.

‘ಇಂಗಾಲದ ಉಗುಳುವಿಕೆಯನ್ನು ಕಡಿಮೆಗೊಳಿಸಬೇಕು. ಹಸಿರು ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ. ಕ್ಷಮತೆ, ಸಂಪನ್ಮೂಲ ಬಳಕೆಗೆ ಮಹತ್ವ ನೀಡಬೇಕಾಗಿದೆ. ಆರ್ಥಿಕ, ಸಾಮಾಜಿ ಅಭಿವೃದ್ಧಿಯ ಅಗತ್ಯತೆ ಇಂದು ಪ್ರಶ್ನಿಸುವಂತಹ ಸ್ಥಿತಿಯಲ್ಲಿಲ್ಲ. ಅಭಿವೃದ್ಧಿಯ ಲಾಭವು ಎಲ್ಲರಿಗೂ ಸಿಗುವಂತಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ಕ್ರಿಯಾಶೀಲ ನಾಗರಿಕರ ವೇದಿಕೆಯನ್ನು ರೂಪಿಸಿಕೊಳ್ಳಬೇಕು. ನಿಮ್ಮ ಸುತ್ತಲಿನ ಪ್ರದೇಶಗಳಲ್ಲಿ ‘ಇಂಗಾಲದ ಹೆಜ್ಜೆ ಗುರುತು’ ಲೆಕ್ಕ ಹಾಕಬೇಕು. ಸ್ಥಳೀಯವಾಗಿ ಹವಾಮಾನ ಬದಲಾವಣೆಯಾಗಿರುವುದನ್ನು ದಾಖಲಿಸಬೇಕು. ಅರಣ್ಯ, ಜಲ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ವಿಜ್ಞಾನ, ತಂತ್ರಜ್ಞಾನ ಹಾಗೂ ನೀತಿ ಅಧ್ಯಯನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಂಶು ಭಾರಧ್ವಾಜ, ‘ಅಭಿವೃದ್ಧಿ ಚಟುವಟಿಕೆ ಕೈಗೊಂಡಾಗ ಇಂಗಾಲವನ್ನು ಹೆಚ್ಚು ಹೊರಸೂಸಬೇಕು ಎಂದಿಲ್ಲ. ಹಿಂದಿನ ಇತಿಹಾಸದಿಂದ ನಾವು ಹೊರಗೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಸುಸ್ಥಿರ ಅಭಿವೃದ್ಧಿಗೆ ನಾವು ಆದ್ಯತೆ ನೀಡಬೇಕಿದ್ದು,ನವೀಕರಣಗೊಳ್ಳುವ ಶಕ್ತಿಯ ಮೂಲಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನೀತಿ ರೂಪಿಸಬೇಕು’ ಎಂದು ಅವರು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ಡಾ. ಎಸ್‌.ಎಂ. ಜಾಮದಾರ ಮಾತನಾಡಿ, ‘ಇಂಧನ ಕ್ಷಮತೆಯನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ 2030ರ ವೇಳೆಗೆ ಭಾರತದಲ್ಲಿ ಶೇ 30ರಷ್ಟು ಇಂಗಾಲವನ್ನು ಕಡಿಮೆಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ ಸಮಾವೇಶದಲ್ಲಿ ಮಾತು ಕೊಟ್ಟಿದ್ದಾರೆ ಎಂದ ಅವರು, ಮುಂದಿನ 14 ವರ್ಷಗಳಲ್ಲಿ ಈ ಸಾಧನೆ ಮಾಡಬೇಕಾಗಿದೆ’ ಎಂದು ಅವರು ತಿಳಿಸಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಎನ್‌.ಎಚ್‌. ರವೀಂದ್ರನಾಥ ಉಪನ್ಯಾಸ ನೀಡಿದರು. ಪ್ರಾಚಾರ್ಯ ಎಸ್‌.ಎಸ್‌. ಮಸಳಿ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕ ಡಾ. ಎಸ್‌.ಬಿ. ಸೊಮಣ್ಣವರ ಇತರರು ಇದ್ದರು. ಡಾ. ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.