ಚಿಕ್ಕೋಡಿ: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮರಳು ಮಾಫಿಯಾ ನಿರಾಂತಕವಾಗಿದೆ. ಕೃಷ್ಣಾ ಮತ್ತು ಉಪನದಿಗಳ ಒಡಲಿನಿಂದ ನಿತ್ಯವೂ ಅಕ್ರಮವಾಗಿ ಮರಳು ಬರಿದು ಮಾಡಲಾಗುತ್ತಿದೆ ಪರಿಣಾಮವಾಗಿ ಒಡಲ ಮಕ್ಕಳ ಜೀವಸೆಲೆ ಕೃಷ್ಣೆ ಮಲಿನವಾಗುತ್ತಿದ್ದಾಳೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯಿಂದ ಮರಳು ಎತ್ತುವಳಿ ಮಾಡಲು ಸದ್ಯ ರಾಯಬಾಗ ತಾಲ್ಲೂಕಿನಲ್ಲಿ ಎರಡು, ಅಥಣಿ ತಾಲ್ಲೂಕಿನಲ್ಲಿ 11 ಮತ್ತು ಚಿಕ್ಕೋಡಿ ತಾಲ್ಲೂಕಿನಲ್ಲಿ ಒಂದು ಬ್ಲಾಕ್ ಮಾತ್ರ ಪರವಾನಗಿ ಹೊಂದಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೇಳುತ್ತದೆ. ಆದರೆ, ಕೃಷ್ಣಾ ಮತ್ತು ದೂಧಗಂಗಾ ನದಿಗುಂಟ ಸಾಗಿದರೆ ಅಲ್ಲಲ್ಲಿ ಮರಳು ಎತ್ತುವ ದೋಣಿಗಳ ಸಾಲೇ ಕಾಣಸಿಗುತ್ತದೆ. ಹಗಲು ರಾತ್ರಿ ಎನ್ನದೇ ಹಲವಾರು ಘಟಕಗಳು ನದಿಯಿಂದ ಅಕ್ರಮವಾಗಿ ಮರಳು ಎತ್ತುವಳಿ ಮಾಡುತ್ತಿವೆ.
ಕಳೆದ ವರ್ಷದ ಜನವರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಿ ಚಿಕ್ಕೋಡಿ ತಾಲ್ಲೂಕಿನಲ್ಲಿ ಒಟ್ಟು 148 ಎಕರೆ ಕ್ಷೇತ್ರದಲ್ಲಿ ನದಿಯಿಂದ ಮರಳು ಎತ್ತುವಳಿ ಮಾಡಲು ಎಂಟು ಬ್ಲಾಕ್‌ಗಳಿಗೆ ಒಟ್ಟು ರೂ. 84.80 ಲಕ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. ರಾಯಬಾಗ ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾ ನದಿಯಿಂದ 97 ಎಕರೆ ಕ್ಷೇತ್ರದಿಂದ ಮರಳು ಎತ್ತಲು 4 ಬ್ಲಾಕ್‌ಗಳಿಗೆ ಒಟ್ಟು ರೂ. 60.15 ಲಕ್ಷಗಳಿಗೆ ಹಾಗೂ ಅಥಣಿ ತಾಲ್ಲೂಕಿನಲ್ಲಿ ಒಟ್ಟು 496 ಎಕರೆ ಕ್ಷೇತ್ರದ ಕೃಷ್ಣಾ ನದಿಯಿಂದ ಮರಳು ಎತ್ತಲು 24 ಬ್ಲಾಕ್‌ಗಳಿಗೆ ಒಟ್ಟು 47730.000 ರೂ.ಗಳಿಗೆ ಗುತ್ತಿಗೆ ನೀಡಲಾಗಿತ್ತು. ಈ ಬ್ಲಾಕ್‌ಗಳ ಗುತ್ತಿಗೆದಾರರು ಗರಿಷ್ಠ ಒಂದು ವರ್ಷ ಅಥವಾ ಸರ್ಕಾರದಿಂದ ಹೊಸ ಮರಳು ನೀತಿ ಜಾರಿಯಾಗುವವರೆಗೆ ಮರಳು ಎತ್ತುವಂತೆ ನಿಬಂಧನೆಗಳನ್ನು ವಿಧಿಸಲಾಗಿತ್ತು. ಅದರಂತೆ ಗುತ್ತಿಗೆದಾರರ ಒಂದು ವರ್ಷದ ಅವಧಿ ಮುಕ್ತಾಯಗೊಂಡಿದೆ.
ಆದರೆ, ಮಾ. 31ರವರೆಗೆ ತಮಗೆ ಮರಳು ಎತ್ತಲು ಅವಕಾಶ ನೀಡುವಂತೆ ಕೋರಿ ಅಥಣಿ ತಾಲ್ಲೂಕಿನ ಇಂಗಳಗಾಂವ ಮತ್ತು ಸತ್ತಿ ಗ್ರಾಮಗಳಲ್ಲಿ ತಲಾ ಒಂದು ಮತ್ತು ಶೇಗುಣಸಿಯಲ್ಲಿ ಎರಡು ಬ್ಲಾಕ್‌ಗಳಿಗೆ, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದಲ್ಲಿ ಒಂದು ಬ್ಲಾಕ್‌ಗೆ ಗುತ್ತಿಗೆದಾರರು ಮರು ಪರವಾನಿಗೆ ಪಡೆದಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷಗಳಿಂದಲೂ ರಾಯಬಾಗ ತಾಲ್ಲೂಕಿನಲ್ಲಿ ಎರಡು ಮತ್ತು ಅಥಣಿ ತಾಲ್ಲೂಕಿನಲ್ಲಿ ಏಳು ಬ್ಲಾಕ್‌ಗಳು ಮಾತ್ರ ಮರಳು ಎತ್ತುವಳಿ ಮಾಡಲು ಅಧಿಕೃತ ಪರವಾನಿಗೆ ಹೊಂದಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಥಣಿ ಮತ್ತು ರಾಯಬಾಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಇಂದು ನಿನ್ನೆಯಿಂದಲ್ಲ. ಇದರ ಹಿಂದೆ ದೊಡ್ಡ ಲಾಬಿಯೇ ಇದೆ. ಪರಿಣಾಮವಾಗಿ ನದಿಗಳಿಂದ ನಿತ್ಯವೂ ಲಕ್ಷಾಂತರ ರೂ.ಗಳ ಮೌಲ್ಯದ ಮರಳು ಜಿಲ್ಲೆಯೂ ಸೇರಿದಂತೆ ನೆರೆಯ ಮಹಾರಾಷ್ಟ್ರದ ಪಾಲಾಗುತ್ತಿದೆ. ಅಲ್ಲದೇ ಮರಳು ಎತ್ತುವ ಯಾಂತ್ರಿಕ ದೋಣಿಗಳು ಹೊರಸೂಸುವ ತೈಲದಿಂದ ನದಿ ನೀರು ಕಲುಷಿತಗೊಂಡು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಸಂಭವವಿದೆ.
ಕಳೆದೊಂದು ವಾರದಲ್ಲಿ ಅಧಿಕಾರಿಗಳು ಅಲ್ಲಲ್ಲಿ ದಾಳಿ ನಡೆಸುತ್ತಿದ್ದಾರೆ. ಇದರಿಂದ ನಾಲ್ಕಾರು ಕಡೆಗಳಲ್ಲಿ ಅನಧಿಕೃತ ಮರಳು ಎತ್ತುವಳಿ ಸ್ಥಗಿತಗೊಂಡಿವೆ ಎನ್ನಲಾಗುತ್ತಿದೆ. ಬರುವ ಏಪ್ರಿಲ್‌ನಲ್ಲಿ ಸರಕಾರ ಹೊಸ ಮರಳು ನೀತಿ ರೂಪಿಸಲಿದೆ. ಆ ನಂತರವಷ್ಟೇ ಮರಳು ಎತ್ತುವಳಿ ಮಾಡಲು ಹೊಸ ಟೆಂಡರ್ ನಡೆಯಲಿದೆ ಎಂಬುದು ಅಧಿಕಾರಿಗಳ ಅಂಬೋಣ.
ಅಕ್ರಮವಾಗಿ ಮರಳು ಎತ್ತುವ ಘಟಕಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ದಾಳಿಯಲ್ಲಿ ಸಹಕರಿಸಲು ಜನರು ಮುಂದಾಗಬೇಕು. ಸರಕಾರ ಮತ್ತು ಸಮುದಾಯ ಸೇರಿ ಈ ಅಕ್ರಮ ದಂಧೆಯನ್ನು ತಡೆಗಟ್ಟದಿದ್ದಲ್ಲಿ ಕೃಷ್ಣೆಯ ಕಣ್ಣೀರಿಗೆ ಕೊನೆಯೇ ಇಲ್ಲವೆನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.