ADVERTISEMENT

ಮಹಾ ಪರ ಸಂಘಟನೆಗಳಿಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 10:15 IST
Last Updated 9 ಅಕ್ಟೋಬರ್ 2012, 10:15 IST

ಬೆಳಗಾವಿ: ಬೆಳಗಾವಿಯಲ್ಲಿ ಇದೇ ತಾ. 11ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ `ಸುವರ್ಣ ಸೌಧ~ ಉದ್ಘಾಟನೆಗೊಳ್ಳುತ್ತಿರುವುದು ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ `ಜ್ಞಾನಪೀಠ~ ಪ್ರಶಸ್ತಿ  ಪ್ರದಾನ ಮಾಡುವ ಮೂಲಕ ಗಡಿ ವಿಷಯದಲ್ಲಿ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ರಾಜ್ಯ ವಿರೋಧಿ ಸಂಘಟನೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದೆ.

`ಸುವರ್ಣ ಸೌಧ~ ಉದ್ಘಾಟಿಸಲಿರುವ ರಾಷ್ಟ್ರಪತಿಗಳು, ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುತ್ತಿರುವ ಬೆಳಗಾವಿಗೆ `ಸುವರ್ಣ ಕಿರೀಟ~ ತೊಡಿಸುವ ಮೂಲಕ `ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ~ ಎಂಬುದಕ್ಕೆ ಮುದ್ರೆ ಒತ್ತಲಿರುವುದರಿಂದ ನಾಡ ವಿರೋಧಿಗಳ ಬಾಯಿಗೆ ಬೀಗ ಹಾಕುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನು ಇಡಲಾಗುತ್ತಿದೆ.

ಮರಾಠಿ ಮಾತನಾಡುವ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖ್ಯಂಡರು ಹಾಗೂ ಕಾರ್ಯಕರ್ತರು ಪದೇ ಪದೇ ವಿವಾದ ಹುಟ್ಟುಹಾಕುತ್ತಿದ್ದರು. ಇದೀಗ ರಾಷ್ಟ್ರಪತಿಗಳು ಸುವರ್ಣ ಸೌಧವನ್ನು ಉದ್ಘಾಟಿಸುತ್ತಿರುವುದಕ್ಕೆ ಪುನಃ ತಗಾದೆ ತೆಗೆಯುತ್ತಿದ್ದಾರೆ. ಉದ್ಘಾಟನೆಗೆ ರಾಷ್ಟ್ರಪತಿಗಳು ಬರಬಾರದು ಎಂದು ಮಹಾರಾಷ್ಟ್ರದ ರಾಜಕೀಯ ಮುಖಂಡರ ಮೂಲಕ ಒತ್ತಡ ಹೇರಲು ಯತ್ನಿಸಿದ್ದರೂ, ಇದಕ್ಕೆ ಸೊಪ್ಪು ಹಾಕದ ಪ್ರಣವ್ ಮುಖರ್ಜಿ ಬೆಳಗಾವಿಗೆ ಬರಲು ಸಜ್ಜಾಗಿದ್ದಾರೆ.

ರಾಜ್ಯ ವಿಂಗಡಣೆಯಾದ ದಿನದಿಂದಲೂ ಮರಾಠಿ ಭಾಷಿಕ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಎಂಇಎಸ್ `ಗಲಾಟೆ~ ನಡೆಸುತ್ತಲಿದೆ. ಮಹಾರಾಷ್ಟ್ರ ಪರ ನಡೆಯುತ್ತಿದ್ದ ಹೋರಾಟವು ಜನಬೆಂಬಲ ಕಳೆದುಕೊಂಡಿದ್ದು, ಇದೀಗ ರಾಜ್ಯದ ವಿಧಾನ ಸಭೆಯಲ್ಲಿ ಎಂಇಎಸ್‌ನವರು ಕನಿಷ್ಠ ಒಂದು ಸ್ಥಾನವನ್ನೂ ಪಡೆಯಲಿಲ್ಲ. ಒಂದು ದಶಕದ ಹಿಂದೆ ಗಡಿ ವಿಷಯದಲ್ಲಿ ಮಹಾರಾಷ್ಟ್ರ ಪರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದ ಶಿವ ಸೇನೆಯೂ ಇದೀಗ ಕ್ರಮೇಣ ಹಿಂದಕ್ಕೆ ಸರಿದಿದ್ದರಿಂದ ಎಂಇಎಸ್‌ನಲ್ಲಿ ನಿರ್ವಾತ ಸೃಷ್ಟಿಯಾಗಿದೆ.

ಬೆಳಗಾವಿಯ ಮರಾಠಿ ಭಾಷಿಕರೂ ಎಂಇಎಸ್ ತಿರಸ್ಕರಿಸುತ್ತಿದ್ದು, ನಗರದ ಅಭಿವೃದ್ಧಿಯತ್ತ ದೃಷ್ಟಿ ಹರಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯನ್ನು ಸಹಿಸದ ಮಹಾರಾಷ್ಟ್ರ ಸರ್ಕಾರವು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೂಲಕ `ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ~ವನ್ನು ಜೀವಂತವಾಗಿಡಲು ಯತ್ನಿಸಿತ್ತು.

ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 2006, ಸೆಪ್ಟೆಂಬರ್ 25ರಿಂದ 5 ದಿನಗಳ ಕಾಲ ಬೆಳಗಾವಿಯಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ನಡೆಸುವ ಮೂಲಕ ಹೊಸ ಭಾಷ್ಯ ಬರೆದಿದ್ದರು. ಇದೇ ಸಂದರ್ಭದಲ್ಲಿ ಸುವರ್ಣ ಸೌಧವನ್ನು ನಿರ್ಮಿಸಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸುವ ಬಗ್ಗೆ ಕೈಗೊಂಡಿರುವ ಸಚಿವ ಸಂಪುಟದಲ್ಲಿ ನಿರ್ಧಾರವನ್ನೂ ಘೋಷಿಸಲಾಯಿತು. ಟಿಳಕವಾಡಿಯ ವ್ಯಾಕ್ಸಿನ್ ಡಿಪೊದಲ್ಲಿ ಕುಮಾರಸ್ವಾಮಿ ಸುವರ್ಣ ಸೌಧಕ್ಕೆ ಅಡಿಗಲ್ಲನ್ನು ಹಾಕಿದ್ದರು.

ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,  ಹಲಗಾ- ಬಸ್ತವಾಡದ ಗುಡ್ಡದ ಮೇಲೆ ಜನವರಿ 22, 2009ರಲ್ಲಿ `ಸುವರ್ಣ ಸೌಧ~ಕ್ಕೆ ಪುನಃ ಅಡಿಗಲ್ಲು ಹಾಕಿದ್ದರು. ಇದೀಗ ಉದ್ಘಾಟನೆಗೆ ಸಿದ್ಧವಾಗಿ ನಿಂತಿರುವ `ಸುವರ್ಣ ಸೌಧ~ವು `ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ~ ಎಂದು ಸಾರಿ ಹೇಳುತ್ತಿದೆ.
ಕನ್ನಡ ಪರ ಧ್ವನಿ ಎತ್ತಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯ ಡಾ. ಚಂದ್ರಶೇಖರ ಕಂಬಾರರಿಗೆ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ `ಜ್ಞಾನಪೀಠ~ವನ್ನು ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ಪ್ರದಾನ ಮಾಡುತ್ತಿರುವುದು ಮಹಾರಾಷ್ಟ್ರ ಪರ ಸಂಘಟನೆಗಳಿಗೆ ತಿರುಗೇಟು ನೀಡಿದಂತಾಗಿದೆ.

ಬೆಳಗಾವಿಯಲ್ಲಿ `ಸುವರ್ಣ ಸೌಧ~ ಉದ್ಘಾಟನೆ ಹಾಗೂ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಒಂದೇ ದಿನ ಹಮ್ಮಿಕೊಂಡು ಎಂಇಎಸ್‌ಗೆ ಪ್ರತ್ಯುತ್ತರ ನೀಡುತ್ತಿರುವುದಕ್ಕೆ ಕನ್ನಡಪರ ಹೋರಾಟಗಾರರು ಸಂಭ್ರಮಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.