ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ದೊಡ್ಡ ವ್ಯಾಪಾರಸ್ಥರಾದ ತೋಟಪ್ಪ ಬೀಳಗಿಯವರು ಈಚೆಗೆ ಹುಬ್ಬಳ್ಳಿ ಹಳೆ ಬಸ್‌ನಿಲ್ದಾಣದಿಂದ ವಿಜಾಪುರಕ್ಕೆ ಬಸ್ಸಿನಲ್ಲಿ ಹೊರಟರು. ಬಸ್ ಹೊರಟ ಸ್ವಲ್ಪ ಹೊತ್ತಿನಲ್ಲೇ 69 ವಯಸ್ಸಿನ ತೋಟಪ್ಪ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಆಗ ಅದೇ ಬಸ್ಸಿನಲ್ಲಿದ್ದ ರಾಮದುರ್ಗ ತಾಲ್ಲೂಕಿನ ಹಲಗತ್ತಿ ಗ್ರಾಮದ ನಿವೃತ್ತ ಅಂಚೆ ಇಲಾಖೆ ನೌಕರ ಹಾಗೂ ರಾಮದುರ್ಗ ಶಾಖೆ ರಡ್ಡಿ ಬ್ಯಾಂಕಿನ ನಿರ್ದೇಶಕರಾದ ಬಸಪ್ಪ ಸೊಲಬಪ್ಪ ಮುಳ್ಳೂರ ಅವರು ಗುರುತಿಸಿ ಕೂಡಲೇ ಬಸ್ಸನ್ನು ಕಿಮ್ಸ್‌ಗೆ ಕರೆದೊಯ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ತೀರಿಕೊಂಡಿದ್ದರು. 68 ವಯಸ್ಸಿನ ಮುಳ್ಳೂರ ಅವರು ಧೈರ್ಯದಿಂದ ರಾಮದುರ್ಗದ ತೋಟಪ್ಪ ಅವರ ಮನೆಗೆ, ಅವರ ಬೀಗರಿಗೆ ಫೋನು ಮಾಡಿ ತಿಳಿಸಿದರು.
ಸ್ವಲ್ಪ ಹೊತ್ತಿನಲ್ಲೇ ತೋಟಪ್ಪ ಅವರ ಮನೆಯಿಂದ ಮುಳ್ಳೂರ ಅವರಿಗೆ ಫೋನು ಕರೆ ಬಂತು. ಅದರಲ್ಲಿ ತೋಟಪ್ಪ ಅವರ ಮಕ್ಕಳು ‘ನಮ್ಮ ತಂದೆಯವರು ಮರಣದ ನಂತರ ಎಂ.ಎಂ. ಜೋಶಿ ದವಾಖಾನೆಗೆ ಕಣ್ಣುಗಳನ್ನು ದಾನ ಕೊಡುತ್ತೇನೆಂದು ಹೇಳಿದ್ದರು. ಅವರ ಆಸೆ ಈಡೇರಿಸಬೇಕು’ ಎಂದು ಕೇಳಿಕೊಂಡರು. ಕೂಡಲೇ ಮುಳ್ಳೂರು ಅವರು, ಎಂ.ಎಂ. ಜೋಶಿ ದವಾಖಾನೆಗೆ ಫೋನು ಮಾಡಿ ವಿಷಯ ತಿಳಿಸಿದರು. ಅಲ್ಲಿಯ ಸಿಬ್ಬಂದಿ ಆಗಮಿಸಿ ಅವರ ಕಣ್ಣುಗಳನ್ನು ಪಡೆದರು. ಇದಾದ ಮೇಲೆ ತೋಟಪ್ಪನವರ ಕಿಸೆಯಲ್ಲಿದ್ದ 11 ಸಾವಿರ ರೂಪಾಯಿ ತೆಗೆದಿಟ್ಟುಕೊಂಡು ಅವರ ಮನೆಗೆ ಮುಟ್ಟಿಸಿ ಪ್ರಾಮಾಣಿಕತೆ ಮೆರೆದರು. ಇದೆಲ್ಲ ಆ ಸಂಜೆ ಆರು ಗಂಟೆಯವರೆಗೆ ನಡೆಯಿತು. ನಂತರ ರಾಮದುರ್ಗಕ್ಕೆ ಅವರ ಮನೆಗೆ ದೇಹವನ್ನು ಮುಟ್ಟಿಸಿದರು. ಇದನ್ನು ಅಲ್ಲಿದ್ದ ಎಲ್ಲರೂ ಮೆಚ್ಚಿದರು.
ನಂತರ ಅವರ ಪುಣ್ಯಸ್ಮರಣೆ ದಿನ ತೋಟಪ್ಪ ಬೀಳಗಿ ಕುಟುಂಬದವರು ಮುಳ್ಳೂರ ಅವರನ್ನು ಕರೆಸಿದರು. ನೀವಿರದಿದ್ದರೆ ನಮ್ಮ ತಂದೆಯವರ ದೇಹ ಸಿಗುತ್ತಿತ್ತೋ ಇಲ್ಲವೋ ಎಂದು ತೋಟಪ್ಪ ಅವರ ಮಕ್ಕಳು ಮೆಚ್ಚುಗೆಯಾಡಿ ಅವರಿಗೆ ಉಡುಗೊರೆ ಕೊಟ್ಟು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.