ADVERTISEMENT

ಮಿರಜ್-ಬೆಳಗಾವಿ ನಡುವೆ ರೈಲು ಸಂಚಾರ ಆರಂಭ

ವಿನಾಯಕ ಭಟ್ಟ‌
Published 3 ಅಕ್ಟೋಬರ್ 2012, 5:55 IST
Last Updated 3 ಅಕ್ಟೋಬರ್ 2012, 5:55 IST
ಮಿರಜ್-ಬೆಳಗಾವಿ ನಡುವೆ ರೈಲು ಸಂಚಾರ ಆರಂಭ
ಮಿರಜ್-ಬೆಳಗಾವಿ ನಡುವೆ ರೈಲು ಸಂಚಾರ ಆರಂಭ   

ಬೆಳಗಾವಿ: ತಾಲ್ಲೂಕಿನ ಕರಿಕಟ್ಟಿ ಕ್ರಾಸ್ ಬಳಿ ಮಳೆ ನೀರು ನುಗ್ಗಿದ್ದರಿಂದ ಹಳಿ ಕಿತ್ತು ಹುಬ್ಬಳ್ಳಿ- ಮಿರಜ್ ಪ್ಯಾಸೆಂಜರ್ ರೈಲಿನ ಬೋಗಿಗಳು ಉರುಳಿದ್ದ ಸ್ಥಳದಲ್ಲಿ ರೈಲ್ವೆ ಕಾರ್ಮಿಕರು ಸತತ 18 ಗಂಟೆಗಳ ಕಾಲ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಿದ್ದರಿಂದ ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದ ಮಿರಜ್- ಬೆಳಗಾವಿ ನಡುವೆ ರೈಲು ಸಂಚಾರ ಪುನರಾರಂಭಗೊಂಡಿತು.

ಸೋಮವಾರ ಸಂಜೆ 5.30ರ ಸಮೀಪ ಬೆಳಗಾವಿ ತಾಲ್ಲೂಕಿನ ಸೂಳೆಭಾವಿ ರೈಲು ನಿಲ್ದಾಣ ದಾಟಿ ಕರಿಕಟ್ಟಿ ಕ್ರಾಸ್ ಬಳಿ ಶಿಥಿಲಗೊಂಡಿದ್ದ ಹಳಿಯ ಮೇಲೆ ಹುಬ್ಬಳ್ಳಿ-ಮಿರಜ್ ಪ್ಯಾಸೆಂಜರ್ ರೈಲು ಹೊರಟಿದ್ದಾಗ ಹಳಿ ಕಿತ್ತು ಎಂಜಿನ್ ಪಲ್ಟಿಯಾಗಿ ನಾಲ್ಕು ಬೋಗಿಗಳು ಪಕ್ಕಕ್ಕೆ ಸರಿದು ನಿಂತಿದ್ದವು.

ಇದರಿಂದಾಗಿ ಸುಮಾರು 200 ಮೀಟರ್‌ನಷ್ಟು ಉದ್ದದ ಪ್ರದೇಶದಲ್ಲಿ ರೈಲಿನ ಹಳಿಗಳು ಕಿತ್ತು ಹೋಗಿದ್ದವು. ಜಲ್ಲಿ ಕಲ್ಲುಗಳೆಲ್ಲ ಚೆಲ್ಲಾಪಿಲ್ಲಿಯಾಗಿ, ಹೊಂಡ ಬಿದ್ದಿದ್ದವು. ಇದರಿಂದಾಗಿ ಮಿರಜ್- ಬೆಳಗಾವಿ ನಡುವಿನ ಸಂಚಾರ ಕಡಿತಗೊಂಡು, ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದ್ದವು.

ಸುದ್ದಿ ತಿಳಿದ ತಕ್ಷಣವೇ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಘಟನೆಯಲ್ಲಿ ಗಾಯಗೊಂಡಿದ್ದ ಸುಮಾರು 40 ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ರೈಲಿನಡಿ ಸುಮಾರು 4 ಗಂಟೆಗಳ ಕಾಲ ಸಿಲುಕಿಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗ್ಯಾಂಗ್‌ಮನ್ ರಾಮಪ್ಪ ಹಾದಿಮನಿಯನ್ನು ಕೊನೆಗೂ ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾದರು.

ಅಷ್ಟರೊಳಗೆ ಮಿರಜ್ ಹಾಗೂ ಹುಬ್ಬಳಿಯಿಂದ ಸುಮಾರು 300ಕ್ಕೂ ಹೆಚ್ಚು ರೈಲ್ವೆ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದರು. ರಾತ್ರಿಯಿಂದಲೇ ಹಳಿ ಮರು ಜೋಡಣೆ ಕಾರ್ಯವನ್ನು ಸಮರೋಪಾದಿಯಲ್ಲಿ ಆರಂಭಿಸಿದರು. ಗೂಡ್ಸ್ ರೈಲಿನ ಮೂಲಕ ಜೆಲ್ಲಿ ಕಲ್ಲು, ಹಳಿಯ ಭಾಗವನ್ನು ಅಪಘಾತ ನಡೆದ ಸ್ಥಳಕ್ಕೆ ತರಲಾಯಿತು. ಸುಮಾರು 300ಕ್ಕೂ ಹೆಚ್ಚು ರೈಲ್ವೆ ಕಾರ್ಮಿಕರು ಅಹೋರಾತ್ರಿ ಹಳಿ ಮರು ಜೋಡಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

`ಅಪಘಾತದಲ್ಲಿ ಯಾರ ಸಾವೂ ಸಂಭವಿಸಿಲ್ಲ ಎಂದು ನಿಟ್ಟುಸಿರು ಬಿಡಲಾಗಿತ್ತು. ಆದರೆ, ಪರಿಹಾರ ಕಾರ್ಯವನ್ನು ಕೈಗೊಳ್ಳುತ್ತಿದ್ದ ಸಂದರ್ಭದಲ್ಲೇ ಮಂಗಳವಾರ ಬೆಳಗಿನ ಜಾವ 2.30ರ ಸಮೀಪ ಹಳಿಯ ಪಕ್ಕದ ಮೋರಿಯಲ್ಲಿ ಗ್ಯಾಂಗ್‌ಮನ್ ಹೇಮಂತ ಪರಶುರಾಮ ಕುಪ್ಪಣ್ಣವರ ಅವರ ಶವ ದೊರೆಯಿತು.

ಅಪಘಾತದ ಸಂದರ್ಭದಲ್ಲಿ ರೈಲಿನೊಳಗಿನಿಂದ ಹೊರಕ್ಕೆ ಚಿಮ್ಮಿ ಬಿದ್ದದ್ದ ಹೇಮಂತ ಗಾಯಗೊಂಡಿರಬೇಕು. ಪಕ್ಕದಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಮೋರಿಯೊಳಗೆ ಸಿಲುಕಿರಬೇಕು~ ಎಂದು ಹುಬ್ಬಳ್ಳಿ-ಮೀರಜ್ ರೈಲಿನ ಗಾರ್ಡ್ ಶೇಖ್ ಸಲೀಮ್ `ಪ್ರಜಾವಾಣಿ~ಗೆ ತಿಳಿಸಿದರು.

ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಶಾಸಕ ಫಿರೋಜ್ ಸೇಠ್, ಸಂಸದ ಸುರೇಶ ಅಂಗಡಿ, ನೈರುತ್ಯ ರೈಲ್ವೆ ಬಳಕೆದಾರರ ಸಂಘದ ಸದಸ್ಯ ಮಹೇಂದ್ರ ಸಿಂಘಿ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯವನ್ನು ವೀಕ್ಷಿಸಿದರು.

ಬೆಳಿಗ್ಗೆ 11.30ಕ್ಕೆ ಹಳಿಗಳ ಮರುಜೋಡಣೆ ಕಾರ್ಯವು ಪೂರ್ಣಗೊಂಡಿತು. ರೈಲ್ವೆ ಸೆಕ್ಷನ್ ಎಂಜಿನಿಯರ್ (ಪಿಡಬ್ಲ್ಯುಐ) ಬಗಾಡೆ ಅವರು ಪರೀಕ್ಷಿಸಿ ರೈಲು ಸಂಚಾರವನ್ನು ಆರಂಭಿಸಬಹುದು ಎಂದು ಪ್ರಮಾಣೀಕರಿಸಿದರು. ಬಳಿಕ ಹಳಿಯ ಮೇಲೆ ಎಂಜಿನ್ ಓಡಿಸಿ ಪರೀಕ್ಷಿಸಲಾಯಿತು. ಬೆಳಗಾವಿಯಿಂದ ಗೂಡ್ಸ್ ರೈಲಿನ ಮೂಲಕ ಪುನಃ ಜೆಲ್ಲಿ ಕಲ್ಲುಗಳನ್ನು ತಂದು ರೈಲಿನ ಹಳಿಯ ಪಕ್ಕದಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಯಿತು.

ಅಪಘಾತಗೊಂಡಿದ್ದ ಸ್ಥಳದಲ್ಲಿ ಹಳಿಯ ಮೇಲೆ ಮಧ್ಯಾಹ್ನ 2.30ರ ಬಳಿಕ ರೈಲು ಸಂಚಾರವನ್ನು ಆರಂಭಿಸಲು ರೈಲ್ವೆ ಅಧಿಕಾರಿಗಳು ಹಸಿರು ನಿಶಾನೆಯನ್ನು ತೋರಿಸಿದರು. ಪಾಶ್ಚಾಪುರದ ರೈಲು ನಿಲ್ದಾಣಕ್ಕೆ ಬಂದು ಕಾಯುತ್ತಿದ್ದ ಜೋಧಪುರ್ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 3 ಗಂಟೆಯ ಸಮೀಪ ಬೆಳಗಾವಿಯತ್ತ ಪ್ರಯಾಣ ಬೆಳೆಸಿತು ಎಂದು ರೈಲ್ವೆ ಪೊಲೀಸ್ ಠಾಣೆಯ ಎಎಸ್‌ಐ ಎ.ಜಿ. ಕೋಲಕಾರ ತಿಳಿಸಿದರು.

ಮಂಗಳವಾರ ಬೆಳಿಗ್ಗೆ ಮಿರಜ್‌ನಲ್ಲಿ ಚಾಲನೆ ನೀಡಿದ `ಮಿರಜ್-ಯಶವಂತಪುರ ವಿಶೇಷ ರೈಲು~ ಸಂಜೆ 4 ಗಂಟೆಯ ಹೊತ್ತಿಗೆ ಕರಿಕಟ್ಟಿ ಕ್ರಾಸ್ ಬಳಿಯ ಅಪಘಾತ ಸ್ಥಳವನ್ನು ಹಾಯ್ದುಕೊಂಡು ಬೆಳಗಾವಿಯತ್ತ ಪ್ರಯಾಣ ಬೆಳೆಸಿತು. ಸುಮಾರು 18 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಬೆಳಗಾವಿ- ಮಿರಜ್ ನಡುವಿನ ರೈಲು ಸಂಚಾರವು ರೈಲ್ವೆ ಅಧಿಕಾರಿಗಳ ಹಾಗೂ ಕಾರ್ಮಿಕರ ಅವಿರತ ಪರಿಶ್ರಮದಿಂದ ಪುನರ್ ಆರಂಭಗೊಂಡಿತು.

ಹರಿಪ್ರಿಯಾ ಎಕ್ಸ್‌ಪ್ರೆಸ್, ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಸಂಚರಿಸಿದವು. ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ಸೋಮವಾರ ಪರದಾಡುವಂತಾಗಿತ್ತು. ಇದೀಗ ಸಂಚಾರ ಮುಕ್ತಗೊಂಡಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.