ADVERTISEMENT

ಮುಗಳಿಹಾಳದಲ್ಲಿ ಮುಗಿಲು ಮುಟ್ಟಿದ ರೋದನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:30 IST
Last Updated 22 ಫೆಬ್ರುವರಿ 2012, 8:30 IST

ಮುಗಳಿಹಾಳ (ತಾ. ಸವದತ್ತಿ): ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದ ಬಳಿಯ ಘಟಪ್ರಭಾ ಬಲದಂಡೆ ಕಾಲುವೆಗೆ ಸೋಮವಾರ ಸಂಜೆ ಚಕ್ಕಡಿ ಉರುಳಿ ಬಿದ್ದ ಘಟನೆಯಲ್ಲಿ ಬಾಲಕಿಯರು ಸೇರಿದಂತೆ ಒಟ್ಟು ಎಂಟು ಮಹಿಳೆಯರು ಜಲಸಮಾಧಿಯಾಗಿದ್ದಾರೆ.

ಹೊಲದಲ್ಲಿ ಕೊರೆಸಿದ್ದ ಬಾವಿಗೆ ಗಂಗಾ ಪೂಜೆ ಸಲ್ಲಿಸಿ ಮನೆಗೆ ಹಿಂತಿರುಗುವಾಗ ಸಂಭವಿಸಿದ  ದುರ್ಘಟನೆಯಲ್ಲಿ ಮುಗಳಿಹಾಳ ಗ್ರಾಮದ ಮುತ್ತ್ಯೆಪ್ಪ ಗಾಣಿಗೇರ ಹಾಗೂ ಫಕೀರಪ್ಪ ಗಾಣಿಗೇರ ಕುಟುಂಬದ ತಲಾ ಮೂವರು ಹಾಗೂ ಮತ್ತೆರಡು ಕುಟುಂಬದಿಂದ ತಲಾ ಒಬ್ಬರು ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಗಾಣಿಗೇರ ಕುಟುಂಬದ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಗ್ರಾಮದ ಓಣಿಗಳಲ್ಲಿ ಸ್ಮಶಾನ ಮೌನ ಕವಿದಿದೆ.

ಗ್ರಾಮದ ಮುತ್ತ್ಯೆಪ್ಪ ಗಾಣಿಗೇರರ ಪುತ್ರಿಯರಾದ ಸರೋಜಿನಿ ಶಿವಪ್ಪ ಗಾಣಿಗೇರ (20), ಸಂಗೀತ ಮುತ್ತ್ಯೆಪ್ಪ ಗಾಣಿಗೇರ(14), ಭಾರತಿ ಗಾಣಿಗೇರ (12) ಮತ್ತು ಫಕೀರಪ್ಪ ಗಾಣಿಗೇರ ಕುಟುಂಬದ ಗಂಗಮ್ಮ ಅಡಿವೆಪ್ಪ ಗಾಣಿಗೇರ (60), ಲಕ್ಷ್ಮಿ ಫಕೀರಪ್ಪ ಗಾಣಿಗೇರ(20), ವೀಣಾ (ವಿನೋದಾ) ಮಹಾದೇವ ಗಾಣಿಗೇರ (9) ಮೃತಪಟ್ಟಿದ್ದಾರೆ. ಗ್ರಾಮದ ಅನಸೂಯಾ ಫಕೀರಪ್ಪ ಗಾಣಿಗೇರ (60) ಹಾಗೂ ಸಿದ್ಧವ್ವ ಬಸಪ್ಪ ಅರಬಾವಿ (48) ಅವರೂ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಚಕ್ಕಡಿ ಓಡಿಸುತ್ತಿದ್ದ ಫಕೀರಪ್ಪ ಬಸಪ್ಪ ಗಾಣಿಗೇರ (21) ಹಾಗೂ ಚಕ್ಕಡಿಯಲ್ಲಿದ್ದ ಶಾಂತವ್ವ ಮುತ್ತ್ಯೆಪ್ಪ ಗಾಣಿಗೇರ(40), ದೀಪಾ ನಾಗಪ್ಪ ಮೇಟಿ (2) ಮತ್ತು ಪಾರವ್ವ ಮಲ್ಲಪ್ಪ ಬಂಡಿವಾಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತವ್ವ ಹಾಗೂ ದೀಪಾ ಅವರನ್ನು ಚಿಕಿತ್ಸೆಗಾಗಿ ಗೋಕಾಕದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಮುತ್ತ್ಯೆಪ್ಪ ಗಾಣಿಗೇರರ ಹೊಲದಲ್ಲಿ ಇತ್ತೀಚೆಗೆ ಕೊರೆಸಲಾಗಿದ್ದ ಬಾವಿ ಹಾಗೂ ಪಂಪ್‌ಸೆಟ್ ಪೂಜೆಗೆ ಸೋಮವಾರ ಮಧ್ಯಾಹ್ನ ಹೋಗಿದ್ದರು. ಹೊಲದಲ್ಲಿ ಊಟ ಮಾಡಿದ ಬಳಿಕ ಗಂಡಸರೆಲ್ಲ ಒಂದು ಚಕ್ಕಡಿಯಲ್ಲಿ ಮೊದಲೇ ಮನೆಗೆ ತೆರಳಿದ್ದರು. ಸಂಜೆ 7 ಗಂಟೆಯ ಹೊತ್ತಿಗೆ ಘಟಪ್ರಭಾ ಕಾಲುವೆ ಪಕ್ಕದ ಇಕ್ಕಟ್ಟಾದ ಕಚ್ಚಾ ರಸ್ತೆಯಲ್ಲಿ ಫಕೀರಪ್ಪ ಗಾಣಿಗೇರ ಅವರು ಇನ್ನೊಂದು ಚಕ್ಕಡಿ ಗಾಡಿಯಲ್ಲಿ 11 ಮಹಿಳೆಯರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಹಾರನಹಳ್ಳದ ಸಮೀಪ ಎರಡು ನಾಯಿಗಳು ಕಚ್ಚಾಡುತ್ತ ಎತ್ತಿನ ಕಾಲಿನ ಬಳಿ ಬಂದಿದೆ. ಇದರಿಂದ ಬೆದರಿದ ಎತ್ತು ಪಕ್ಕಕ್ಕೆ ಸರಿದಾಗ ಆಯ ತಪ್ಪಿ ಚಕ್ಕಡಿ ಗಾಳಿ ಕಾಲುವೆಗೆ ಉರುಳಿ ಬಿದ್ದಿದೆ.

“ಚಕ್ಕಡಿ ಕಾಲುವೆಗೆ ಬಿದ್ದ ತಕ್ಷಣ ನಾವು ಕೂಗಿಕೊಂಡೆವು. ಪಕ್ಕದಲ್ಲೇ ಗುಡಿಸಲು ಹಾಕಿಕೊಂಡಿದ್ದ ಕಬ್ಬು ಕಡಿಯಲು ಮಹಾರಾಷ್ಟ್ರದಿಂದ ಬಂದಿದ್ದ ಸುಮಾರು 10 ಜನರು   ತಕ್ಷಣ ಸಹಾಯಕ್ಕೆ ಬಂದರು. ನನ್ನನ್ನು ಹಾಗೂ ಎರಡು ವರ್ಷದ ಮಗು ದೀಪಾಳನ್ನು ಮೊದಲಿಗೆ ರಕ್ಷಿಸಿದರು. ತಕ್ಷಣವೇ ಶಾಂತವ್ವ ಹಾಗೂ ಪಾರವ್ವನನ್ನು ನೀರಿನಿಂದ ಹೊರಕ್ಕೆ ತೆಗೆದರು. ಅದಾಗಲೇ ಕತ್ತಲಾಗಿದ್ದರಿಂದ ಉಳಿದವರು ಎಲ್ಲಿ ಹೋದರು ಎಂದು ತಿಳಿಯಲಿಲ್ಲ” ಎಂದು ಚಕ್ಕಡಿ ಓಡಿಸುತ್ತಿದ್ದ ಫಕೀರಪ್ಪ ಗಾಣಿಗೇರ `ಪ್ರಜಾವಾಣಿ~ಗೆ ತಿಳಿಸಿದರು.

ರಾತ್ರಿಯೇ ಕೆಲವು ಗ್ರಾಮಸ್ಥರು ಕಾಲುವೆಯಲ್ಲಿ ಈಜಿ ಶೋಧ ಕಾರ್ಯ ನಡೆಸಿದಾಗ ಭಾರತಿ ಗಾಣಿಗೇರ, ಅನಸೂಯಾ ಗಾಣಿಗೇರ ಹಾಗೂ ಸಿದ್ಧವ್ವ ಅರಬಾವಿ ಅವರ ಶವ ಸಿಕ್ಕಿತು. ಮಂಗಳವಾರ ಬೆಳಗಿನ ಜಾವ ಇವರ ಶವಸಂಸ್ಕಾರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ನಡೆಸಲಾಯಿತು.

ಮಂಗಳವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಉಳಿದ ಐವರ ಶವಗಳಿಗಾಗಿ ಮತ್ತೆ ಕಾಲುವೆಯಲ್ಲಿ ಹುಡುಕಾಡಿದಾಗ ಉಳಿದ ಐವರ ಶವಗಳು ಸಿಕ್ಕವು. ಬಳಿಕ ಮುಗಳಿಹಾಳದ ಸ್ಮಶಾನದಲ್ಲಿ ಸಾವಿರಾರು ಗ್ರಾಮಸ್ಥರ ಸಮ್ಮುಖದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗಾಣಿಗೇರ ಕುಟುಂಬದ ಸಂಬಂಧಿಕರ ರೋದನ ಮನ ಕಲಕುತ್ತಿತ್ತು.

“ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಒಂದು ಲಕ್ಷ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಹದಿನೈದು ದಿನಗಳೊಳಗೆ ಮೃತರ ಕುಟುಂಬಗಳಿವೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು” ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ `ಪ್ರಜಾವಾಣಿ~ಗೆ ತಿಳಿಸಿದರು. 
ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.