ADVERTISEMENT

ಯಲ್ಲಮ್ಮನ ಗುಡ್ಡದಲ್ಲಿ ಮುತ್ತೈದೆ ಹುಣ್ಣಿಮೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:55 IST
Last Updated 20 ಜನವರಿ 2011, 9:55 IST

ಸವದತ್ತಿ: ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಹುಣ್ಣಿಮೆ ಪ್ರಯುಕ್ತ ಪುಣ್ಯಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಶ್ರೀದೇವಿ ಮಂಗಲೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಶ್ರೀದೇವಿಯು ಪರಶುರಾಮನ ವಿಶ್ವಪರ್ಯಟನದ ನಂತರ ಮುತ್ತೈದೆಯಾದಳು ಎಂಬ ಪೌರಾಣಿಕ ಹಿನ್ನೆಲೆಯಲ್ಲಿ ಭಕ್ತರು ಮುತ್ತೈದೆ ಹುಣ್ಣಿಮೆಯಾಗಿ ಆಚರಿಸುವರು. ಹೋಳಿಗೆ, ಕರಿಗಡಬು ತಯಾರಿಸಿ ದೇವಿಯ ಮಡಿಲಿಗೆ ಹಡ್ಡಲಿಗೆ ತುಂಬುವುದು ಹಬ್ಬದ ಸಂಪ್ರದಾಯ. ಹೀಗಾಗಿ ಭಕ್ತರು ಶ್ರೀಕ್ಷೇತ್ರದಲ್ಲಿ ಕರಿಗಡಬು ಮತ್ತು ಹೋಳಿಗೆ ತಯಾರಿಸಿ ದೇವಿಗೆ ಉಡಿ ತುಂಬಿ ಭಕ್ತಿ ಸಮರ್ಪಿಸಿದರು.

ದೇವಿಯ ದರ್ಶನಕ್ಕಾಗಿ ಕಳೆದ ಒಂದು ವಾರದಿಂದ ಚಕ್ಕಡಿ ಹಾಗೂ ಇನ್ನಿತರ ವಾಹನಗಳಲ್ಲಿ ಭಕ್ತರು ಆಗಮಿಸಿದ್ದರೆ, ಇನ್ನು ಕೆಲವರು ಪಾದಯಾತ್ರೆ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ದೇವಸ್ಥಾನದ ಸುತ್ತಲಿನ ಗುಡ್ಡದಲ್ಲಿ ತಾತ್ಕಾಲಿಕ ಶೆಡ್ಡುಗಳಲ್ಲಿ ಬಿಡಾರ ಹೂಡಿದ್ದಾರೆ. ದೇವಸ್ಥಾನದ ವತಿಯಿಂದ ಭಕ್ತರಿಗೆ ಕುಡಿಯುವ ನೀರು, ವಸತಿ ಸೌಲಭ್ಯ, ಅಡುಗೆ ತಯಾರಿಕೆಗೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಹಿತಕರ ಘಟನೆಗೆ ಅವಕಾಶ ನೀಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.