ADVERTISEMENT

ಯುಪಿಎ ಸರ್ಕಾರದಿಂದ ದೇಶ ಲೂಟಿ: ಕೋರೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 7:00 IST
Last Updated 20 ಮಾರ್ಚ್ 2014, 7:00 IST

ನಿಪ್ಪಾಣಿ: ‘ಕಳೆದ ಹತ್ತು ವರ್ಷಗಳಿಂದ ದೇಶದ ಸಂಪತ್ತು ಲೂಟಿಯಾಗುತ್ತಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಎಲ್ಲ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ನಡೆಸಿದೆ’ ಎಂದು ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಆರೋಪಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ಮರಾಠಾ ಮಂಡಳದ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಆಡಳಿತಾವಧಿಯಲ್ಲಿ ನಗರಕ್ಕೆ ತಾಲ್ಲೂಕು ಸ್ಥಾನಮಾನ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಈ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ನಗರದ ಜನತೆಯ ಆಸೆಗೆ ತಣ್ಣಿರೆರೆಚಿದೆ’ ಎಂದು ಟೀಕಿಸಿದರು.
‘ಈ ಬಾರಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವರು ಖಚಿತ. ಅವರ ಜೊತೆಗೆ ಕಾರ್ಯ ನಿರ್ವಹಿಸಲು ಚಿಕ್ಕೋಡಿ ಕ್ಷೇತ್ರದಿಂದ ರಮೇಶ ಕತ್ತಿ ಅವರನ್ನು ಬಹುಮತದಿಂದ ಚುನಾಯಿಸಿ ತರಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ರಮೇಶ ಕತ್ತಿ ಮಾತನಾಡಿ ‘ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ ಬ್ಯಾಂಕ್‌ ನಂತೆ ನಡೆಸಿಕೊಳ್ಳುವ ಕಾಂಗ್ರೆಸ್‌ನ ನೀತಿಯಿಂದಾಗಿ ಮುಸ್ಲಿಂ ಬಾಂಧವರು ಆರ್ಥಿಕವಾಗಿ ಸೇರಿದಂತೆ ಎಲ್ಲ ವಿಷಯದಲ್ಲಿಯೂ ಹಿಂದುಳಿದಿದ್ದಾರೆ’ ಎಂದರು.

‘ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ 20–22 ಅಭ್ಯರ್ಥಿಗಳು ಚುನಾಯಿತರಾಗಲಿದ್ದಾರೆ. ಅದರ ನಂತರ ರಾಜ್ಯದಲ್ಲಿಯೂ ಚುನಾವಣೆ ನಡೆಯಲಿದ್ದು ಶಾಸಕಿ ಜೊಲ್ಲೆ ಸಚಿವರಾಗಲಿದ್ದಾರೆ’ ಎಂದೂ ಭವಿಷ್ಯ ನುಡಿದರು.

ಶಾಸಕ ಸಂಜಯ ಪಾಟೀಲ ಮಾತನಾಡಿ ‘ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ, ಅವರು ತಾವೇ ಮಾಡಿಸಿದ ಕಾಲುವೆಯಲ್ಲಿ ಈವರೆಗೆ ನೀರು ಹರಿಸಲು ವಿಫಲರಾಗಿದ್ದಾರೆ. ಮೀಸೆ ಮಾಮ ಈಗ ಏನು ಮಾಡುತ್ತಾರೆ ಕಾದು ನೋಡೋಣ’ ಎಂದು ಲೇವಡಿ ಮಾಡಿದರು.

ಶಾಸಕಿ ಶಶಿಕಲಾ ಜೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಉಮೇಶ ಕತ್ತಿ, ಶಾಸಕ ಲಕ್ಷ್ಮಣ ಸವದಿ, ರಾಜು ಕಾಗೆ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಬಾಬಾಸಾಹೇಬ ಸಾಸನೆ, ರಾಜು ಪಾಟೀಲ, ಬಿಜೆಪಿ ಪದಾಧಿಕಾರಿಗಳು, ತಾ.ಪಂ., ಸದಸ್ಯರು, ಸ್ಥಳೀಯ ನಗರಸಭೆ ಸದಸ್ಯರು ವೇದಿಕೆ ಮೇಲಿದ್ದರು. ಪ್ರಣವ ಮಾನವಿ ನಿರೂಪಿಸಿದರು. ಆಕಾಶ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.