ADVERTISEMENT

ಯುವಕನ ಅನಗತ್ಯ ಬಂಧನ: ಗೋಕಾಕ ಬಂದ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 8:40 IST
Last Updated 8 ಫೆಬ್ರುವರಿ 2011, 8:40 IST

ಗೋಕಾಕ: ನೆರೆಯ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ 2008ರಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ನಗರದ ಅಮಾಯಕ ಯುವಕ ಪ್ರವೀಣ ವೆಂಕಟೇಶ ಟಕ್ಕಳಕಿ ಎಂಬಾತನನ್ನು ಅನಗತ್ಯವಾಗಿ ಬಂಧಿಸಿ ಕಿರುಕಳ ನೀಡಲಾಗುತ್ತಿದೆ ಎಂದು ಆಪಾದಿಸಿ ಗೋಕಾಕ ಹಿತ ರಕ್ಷಣಾ ಸಮಿತಿ ಸೋಮವಾರ ಕರೆ ನೀಡಿದ್ದ ‘ಗೋಕಾಕ ಬಂದ್’ ಸಂಪೂರ್ಣ ಮತ್ತು ಶಾಂತಿಯುತವಾಗಿತ್ತು.

ಸೋಮವಾರ ಮುಂಜಾನೆ ಇಲ್ಲಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಶೂನ್ಯಸಂಪಾದನಾ ಮಠದ  ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನೆರೆದಿದ್ದ ವೇದಿಕೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಅಮಾಯಕ ಹಿಂದೂ ಯುವಕರ ವಿರುದ್ಧ ಪೊಲೀಸರು ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ ಎಂದು ಘೋಷಣೆಗಳನ್ನು ಕೂಗಿದರು.

ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.  ಪ್ರತಿಭಟನಾ ಮೆರವಣಿಗೆ ತಹಸೀಲ್ದಾರ ಕಾರ್ಯಾಲಯ ಆವರಣ ತಲುಪುತ್ತಿದ್ದಂತೆ ಸಭೆಯಾಗಿ ಮಾರ್ಪಾಡುಗೊಂಡಿತು. ಸಭೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ, ಗೋಕಾಕ ವಕೀಲರ ಸಂಘದ ಅಧ್ಯಕ್ಷ  ಎಸ್.ವಿ. ದೇಮಶೆಟ್ಟಿ, ಬಿಜೆಪಿ ಮುಖಂಡ ಅಶೋಕ ಓಸ್ವಾಲ್, ಶಿಕ್ಷಕ ರಾಮಚಂದ್ರ ಕಾಕಡೆ, ಬಸವ ಸೇನೆ ಮುಖ್ಯಸ್ಥ ಆನಂದ ಗೋಟಡಕಿ, ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಅಧ್ಯಕ್ಷ ಕಿರಣ ಡಮಾಮಗರ ಮಾತನಾಡಿದರು.
 
ಪ್ರಕರಣದಲ್ಲಿರುವ ಮೂಲ ಹೆಸರಿನ ವ್ಯಕ್ತಿಯನ್ನು ಬಂಧಿಸದೇ ಗೋಕಾಕ ನಿವಾಸಿ ಟಕ್ಕಳಕಿ ತಲೆಮರೆಸಿಕೊಂಡಿದ್ದಾರೆ ಎಂಬ ಆರೋಪ ಹೊರಿಸಿರುವ ಮಹಾರಾಷ್ಟ್ರ ಪೊಲೀಸರ ಕ್ರಮ ಖಂಡನೀಯ. ಹಿಂದೂ ಜನರಲ್ಲಿ ಅಶಾಂತಿಯನ್ನು ಉಂಟು ಮಾಡುವ ವ್ಯವಸ್ಥಿತ ಸಂಚು  ಇದಾಗಿದೆ ಎಂದು ಹರಿಹಾಯ್ದರು.ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಗೋಕಾವಿ ನಾಡಿಗೆ ಕಳಂಕ ತರುವ ಯತ್ನ ಇದಾಗಿದೆ. ದೇಶದ್ರೋಹ ಚಟುವಟಿಕೆಯಲ್ಲಿ ಯಾರೇ ಭಾಗಿಯಾ ಗಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಅಮಾಯಕರನ್ನು ತಪ್ಪಿತಸ್ಥರೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.

ರಾಜ್ಯ ಸರ್ಕಾರ ಮಹಾರಾಷ್ಟ್ರ ದೊಂದಿಗೆ ಮಾತುಕತೆ ನಡೆಸಿ ಟಕ್ಕಳಕಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ ಪ್ರೀತಮ್ ನಸಲಾಪೂರೆ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಬಂದ್ ಪರಿಣಾಮ ನಗರದಲ್ಲಿ ಅಂಗಡಿ- ಮುಗ್ಗಟುಗಳು, ಶಾಲಾ- ಕಾಲೇಜುಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ಮುಚ್ಚಿದ್ದವು.
ಬೆಳಗಿನಿಂದಲೇ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಸಂಜೆ 4ರ ವೇಳೆಗೆ ಮತ್ತೆ ಸೇವೆ ಪುನರಾರಂಭಗೊಂಡಿತು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಜ್ಯೋತಿಬಾ ಸುಭಂಜಿ, ಶಂಕರ ಧರೆನ್ನವರ ಹಾಗೂ ಲಕ್ಷ್ಮಣ ಖಡಕಬಾಂವಿ, ಮಹಾಂತೇಶ ಮಠಪತಿ, ಚನ್ನಬಸು ರುದ್ರಾಪೂರ, ಹಿಂದೂಪರ ಸಂಘಟನೆಗಳ ಮುಖಂಡ ರಾದ ಸದಾಶಿವ ಗುದಗ್ಗೋಳ, ಶಿವಶಂಕರ ಖಾನಾಪೂರ ಮೊದಲಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.