ADVERTISEMENT

ರಾಜ್ಯದಲ್ಲಿ ಕ್ಷೀರಕ್ರಾಂತಿ ಮಾಡಿದ್ದು ನಾನೇ; ಸಿ.ಎಂ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:27 IST
Last Updated 24 ನವೆಂಬರ್ 2017, 6:27 IST
ಬೆಳಗಾವಿಯ ಕೆಎಂಎಫ್‌ ಆವರಣದಲ್ಲಿ ಸ್ಥಾಪಿಸಲಾಗಿರುವ ಫ್ಲೆಕ್ಸಿ ಪ್ಯಾಕಿಂಗ್‌ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. ಸಚಿವ ರಮೇಶ ಜಾರಕಿಹೊಳಿ, ಎ.ಮಂಜು, ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ವಸಂತರಾವ ಪಾಟೀಲ ಉಪಸ್ಥಿತರಿದ್ದರು
ಬೆಳಗಾವಿಯ ಕೆಎಂಎಫ್‌ ಆವರಣದಲ್ಲಿ ಸ್ಥಾಪಿಸಲಾಗಿರುವ ಫ್ಲೆಕ್ಸಿ ಪ್ಯಾಕಿಂಗ್‌ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು. ಸಚಿವ ರಮೇಶ ಜಾರಕಿಹೊಳಿ, ಎ.ಮಂಜು, ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ವಸಂತರಾವ ಪಾಟೀಲ ಉಪಸ್ಥಿತರಿದ್ದರು   

ಬೆಳಗಾವಿ: ‘ರಾಜ್ಯದಲ್ಲಿ ಕ್ಷೀರಕ್ರಾಂತಿ ಮಾಡಿದ್ದು ನಾನೇ. 1985ರಲ್ಲಿ ಪಶು ಸಂಗೋಪನಾ ಖಾತೆ ಸಚಿವನಾಗಿದ್ದಾಗ ಹಾಲಿನ ಡೇರಿಗಳನ್ನು ಹಾಲು ಉತ್ಪಾದಕರ ಒಕ್ಕೂಟಕ್ಕೆ ವಹಿಸಿದೆ. ಅದರ ಫಲವಾಗಿ ಇಂದು ರಾಜ್ಯದಲ್ಲಿ ಪ್ರತಿದಿನ 77 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ’ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಕೆಎಂಎಫ್‌ ಡೇರಿಯಲ್ಲಿ ಫ್ಲೆಕ್ಸಿ ಪ್ಯಾಕಿಂಗ್‌ ಘಟಕವನ್ನು ಗುರುವಾರ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ‘ನನ್ನ ನಿರ್ಧಾರಕ್ಕೆ ಡೇರಿಗಳು ಬಹಳ ವಿರೋಧ ವ್ಯಕ್ತಪಡಿಸಿದವು. ವಿಶೇಷವಾಗಿ ಬೆಂಗಳೂರು ಡೇರಿಯವರು ಬಹಳ ವಿರೋಧ ಮಾಡಿದ್ದರು. ಇದ್ಯಾವುದನ್ನೂ ಲೆಕ್ಕಿಸದೇ ನಿರ್ಧಾರ ಕೈಗೊಂಡೆ. ಅದರ ಫಲವಾಗಿ ಇಂದು ಹಾಲಿನ ಹೊಳೆ ಹರಿದಿದೆ. ದೇಶದಲ್ಲಿ ಗುಜರಾತ್‌ ಬಿಟ್ಟರೆ ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿರುವುದು ಕರ್ನಾಟಕ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

’ಒಕ್ಕೂಟಗಳಿಗೆ ಹಾಲು ಹಾಕುವ ರೈತರಿಗೆ ಹಿಂದಿನ ಸರ್ಕಾರ ಪ್ರತಿ ಲೀಟರ್‌ ಗೆ ₹ 2 ಪ್ರೋತ್ಸಾಹ ಧನ ನೀಡುತ್ತಿತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ₹ 5 ನೀಡಲು ಆರಂಭಿಸಿದ್ದೇವೆ. ಇದರಿಂದ ಪ್ರೇರಣೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ’ ಎಂದರು.

ADVERTISEMENT

20 ಪೈಸೆ ನೀಡಲು ಚಿಂತನೆ: ಸೊಸೈಟಿಗಳ ಕಾರ್ಯದರ್ಶಿ ಹಾಗೂ ಹಾಲು ಅಳೆಯುವವರಿಗೆ 20 ಪೈಸೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ವಿಸ್ತರಣೆ: ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಸುವಾಸನೆ ಭರಿತ ಹಾಗೂ ವಿವಿಧ ಸ್ವಾದಗಳಲ್ಲಿ ಹಾಲು ಪೂರೈಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು ಹಾಗೂ ರಾಯಚೂರು ಜಿಲ್ಲೆಯಲ್ಲಿ ಜಾರಿಗೊಳಿಸ ಲಾಗಿದೆ. ಮುಂಬರುವ ದಿನಗಳಲ್ಲಿ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.

ಪಶುಸಂಗೋಪನಾ ಸಚಿವ ಎ. ಮಂಜು ಮಾತನಾಡಿ, ಮುಂದಿನ ದಿನಗಳಲ್ಲಿ ಕೆಎಂಎಫ್‌ ರೀತಿಯ ಒಕ್ಕೂಟ ವ್ಯವಸ್ಥೆಯಲ್ಲಿ ಕೋಳಿ, ಕುರಿ ಮಾಂಸ ಮಾರಾಟ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಶಾಸಕ ಫಿರೋಜ್‌ ಸೇಠ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ, ಜಿಲ್ಲಾ ಪಂಚಾಯ್ತಿ ಸಿಇಒ ಆರ್‌.ರಾಮಚಂದ್ರನ್‌ ಇದ್ದರು. ಅಧ್ಯಕ್ಷತೆಯನ್ನು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ ಪಾಟೀಲ ವಹಿಸಿದ್ದರು. ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಸಂಜಯಗೌಡ ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.