ADVERTISEMENT

ರಾಹುಲ್ ಗಾಂಧಿಯವರದು ಡ್ರಾಮಾ ಕಂಪನಿ: ಅನಂತಕುಮಾರ ಹೆಗಡೆ ಟೀಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 6:56 IST
Last Updated 13 ಮಾರ್ಚ್ 2018, 6:56 IST
ಖಾನಾಪುರ ತಾಲ್ಲೂಕು ಕರಂಬಳ ಹೊರವಲಯದಲ್ಲಿ ಸೋಮವಾರ ಬಿಜೆಪಿ ಏರ್ಪಡಿಸಿದ್ದ ನವಶಕ್ತಿ ಸಮಾವೇಶವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ, ಸುಭಾಸ ಗುಳಶೆಟ್ಟಿ, ಧನಶ್ರೀ ದೇಸಾಯಿ, ಮಂಜುಳಾ ಕಾಪಸೆ ಇದ್ದಾರೆ.
ಖಾನಾಪುರ ತಾಲ್ಲೂಕು ಕರಂಬಳ ಹೊರವಲಯದಲ್ಲಿ ಸೋಮವಾರ ಬಿಜೆಪಿ ಏರ್ಪಡಿಸಿದ್ದ ನವಶಕ್ತಿ ಸಮಾವೇಶವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ, ಸುಭಾಸ ಗುಳಶೆಟ್ಟಿ, ಧನಶ್ರೀ ದೇಸಾಯಿ, ಮಂಜುಳಾ ಕಾಪಸೆ ಇದ್ದಾರೆ.   

ಖಾನಾಪುರ: ‘ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಡ್ರಾಮಾ ಕಂಪನಿ ಮುನ್ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬೆಂಬಲಿಗರೊಂದಿಗೆ ಟೆಂಟ್ ಶೋ ನಡೆಸುತ್ತಿದ್ದಾರೆ. ಇದಕ್ಕೆ ತಾಳ ಹಾಕುತ್ತಿರುವ ಕಾಂಗ್ರೆಸ್ ಮುಖಂಡರು ಕಲಾವಿದರ ಸೋಗಿನಲ್ಲಿ ನಾಟಕ ಆಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದರು.

ತಾಲ್ಲೂಕಿನ ಕರಂಬಳ ಗ್ರಾಮದ ಹೊರವಲಯದ ಪಾಟೀಲ ಗಾರ್ಡನ್‌ನಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ಸೋಮವಾರ ಆಯೋಜಿಸಿದ್ದ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಹುಲ್‌ ಗಾಂಧಿ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೋ ಅಲ್ಲೆಲ್ಲಾ ಬಿಜೆಪಿ ಶಕ್ತಿ ವೃದ್ಧಿಸಿದೆ. ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಬದಲಾವಣೆ ಗಾಳಿಗಾಗಿ ಚುನಾವಣೆ ನಿರೀಕ್ಷಿಸುತ್ತಿದ್ದಾರೆ. ಅಭ್ಯರ್ಥಿ ಯಾರಾಗುತ್ತಾರೆ ಎಂಬ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ತಿಳಿಸಿದರು.

ADVERTISEMENT

ಜನರಲ್ಲಿ ಅಭದ್ರತೆ ನಿರ್ಮಾಣ: ‘ರಾಜ್ಯದಲ್ಲಿ ಹಿಂದೂ ಸಂಘನೆಗಳ 23ಕ್ಕೂ ಕಾರ್ಯಕರ್ತರು ಬಲಿಯಾಗಿದ್ದಾರೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚಕಾರ ಎತ್ತಿಲ್ಲ. ಒಬ್ಬ ಜಿಲ್ಲಾಧಿಕಾರಿ ಜನಪ್ರತಿನಿಧಿಗಳ ಕಿರುಕುಳದಿಂದ ಮೃತಪಟ್ಟರೆ, ಒಬ್ಬ ಪೊಲೀಸ್ ಅಧಿಕಾರಿ ನೇಣಿಗೆ ಶರಣಾದರು. ಲೋಕಾಯುಕ್ತರ ಮೇಲೂ ಹಲ್ಲೆ ನಡೆದಿದೆ. ಇದರಿಂದಾಗಿ, ಜನರಲ್ಲಿ ಅಭದ್ರತೆ ನಿರ್ಮಾಣವಾಗಿದೆ. ಇಂತಹ ಕೆಟ್ಟ ಆಡಳಿತ ನೀಡಿದ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುವ ಜವಾಬ್ದಾರಿಯನ್ನು ಜನರು ಹೊರಬೇಕು’ ಎಂದು ಪ್ರತಿಪಾದಿಸಿದರು.

ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಪಿ. ಭಾವೇಶ, ‘ಸಾಮಾಜಿಕ ಮಾಧ್ಯಮದ ಮೂಲಕ ಯುವ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಕಾರ್ಯಕರ್ತರು ಮಾಡಬೇಕು’ ಎಂದು ಸೂಚಿಸಿದರು.

ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ‘ಚುನಾವಣೆಯಲ್ಲಿ ಸಚಿವ ಅನಂತಕುಮಾರ ಹೆಗಡೆ ಕೈ ಬಲಪಡಿಸಬೇಕು’ ಎಂದರು.

ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಖಾನಾಪುರ ಕ್ಷೇತ್ರದ ಪ್ರಭಾರಿ ಸಂತೋಷ ಲಾಡ್‌, ಮುಖಂಡರಾದ ರಾಜೇಂದ್ರ ಪವಾರ, ಧನಂಜಯ ಜಾಧವ, ಧನಶ್ರೀ ದೇಸಾಯಿ, ಮಂಜುಳಾ ಕಾಪಸೆ ಇದ್ದರು.

ಬಾಬುರಾವ್ ದೇಸಾಯಿ ಸ್ವಾಗತಿಸಿದರು. ಸುಭಾಸ ಗುಳಶೆಟ್ಟಿ ನಿರೂಪಿಸಿದರು. ಸಂಜಯ ಕಂಚಿ ವಂದಿಸಿದರು.

*
ಪಕ್ಷ ನಿಷ್ಠರಿಗೆ ಟಿಕೆಟ್ ನೀಡಲಾಗುವುದು. ಈ ಬಗ್ಗೆ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು
–ಅನಂತಕುಮಾರ ಹೆಗಡೆ,
ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.