ಬೆಳಗಾವಿ: `ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ) ರಹಿತ ತಾಲ್ಲೂಕುಗಳ ಪಟ್ಟಿ ಯಿಂದ ಬೆಳಗಾವಿ, ಚಿಕ್ಕೋಡಿ ಹಾಗೂ ಖಾನಾಪುರವನ್ನು ತೆಗೆದು ಹಾಕಿ, ಇವುಗಳಿಗೂ ವಿಶೇಷ ಅನುದಾನವನ್ನು ನೀಡಬೇಕು~ ಎಂದು ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಯಲ್ಲಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ಬುಧವಾರ ಸಾಮಾನ್ಯ ಸಭೆ ಆರಂಭ ವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸೂಳೆಭಾವಿ ಕ್ಷೇತ್ರದ ಸದಸ್ಯ ಶಂಕರಗೌಡ ಪಾಟೀಲ, `ಬೆಳಗಾವಿ ತಾಲ್ಲೂಕನ್ನು ಬರ ಪೀಡಿತವೆಂದು ಘೋಷಿಸಿಲ್ಲ. ಬೆಳಗಾವಿ ಯನ್ನು ವಿಶೇಷ ಅಭಿವೃದ್ಧಿ ಯೋಜನೆ ರಹಿತ ತಾಲ್ಲೂಕುಗಳ (ನಾನ್ ಎಸ್‌ಡಿಪಿ) ಪಟ್ಟಿಗೆ ಸೇರಿಸಿರುವುದರಿಂದ ಅನು ದಾನವೇ ಬಿಡುಗಡೆಯಾಗುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಯಾವೊಂದು ಕೆಲಸ ವನ್ನೂ ಕೈಗೊಳ್ಳಲಾಗುತ್ತಿಲ್ಲ. ಸದಸ್ಯರಿಗೆ ಅನುದಾನ ಸಿಗುವುದಿಲ್ಲ ಎಂದಾದರೆ, ಸಭೆಗೆ ಸುಮ್ಮನೇ ಬಂದು ಚಹಾ ಕುಡಿದು ಹೋಗಬೇಕೆ? ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಮಹೇಶ ಭಾತೆ, ರಾಮಪ್ಪ ಉಟಗಿ, ಗಣೇಶ ಹುಕ್ಕೇರಿ, ಯಲ್ಲಪ್ಪ ಕಾಂಬಳೆ ಅವರು, ಮುಂದುವರಿದ ತಾಲ್ಲೂಕು ಗಳೆಂದು ವಿಶೇಷ ಅನುದಾನ ನೀಡದೇ ಇರುವುದರಿಂದ ನಾವು ಯಾವುದೇ ಕೆಲಸ ಕೈಗೊಳ್ಳಲಾಗುತ್ತಿಲ್ಲ. ಹೀಗಾಗಿ ಬೆಳ ಗಾವಿ, ಚಿಕ್ಕೋಡಿ ಹಾಗೂ ಖಾನಾಪುರ ತಾಲ್ಲೂಕುಗಳನ್ನು ಕೂಡಲೇ ಎಸ್‌ಡಿಪಿ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ, ಈ ತಾಲ್ಲೂಕುಗಳಿಗೆ ಸದಸ್ಯರು ಬೇಕಾಗಿಲ್ಲ ಎಂದು ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಪಟ್ಟು ಹಿಡಿದರು.
ಮಧ್ಯ ಪ್ರವೇಶಿಸಿದ ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ, ಈ ಮೂರು ತಾಲ್ಲೂಕುಗಳನ್ನು ಎಸ್‌ಡಿಪಿ ಪಟ್ಟಿಗೆ ಸೇರಿಸುವಂತೆ ಈ ಹಿಂದಿನ ಮುಖ್ಯಮಂತ್ರಿ ಗಳಾಗಿದ್ದ ಸದಾನಂದಗೌಡರಿಗೆ ಮನವಿ ನೀಡಲಾಗಿತ್ತು. ಆದರೂ ಸಹ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಇಲ್ಲಿ ಠರಾವು ಪಾಸು ಮಾಡಿ ಕಳುಹಿ ಸುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಹೀಗಾಗಿ ಶೀಘ್ರದಲ್ಲೇ ಈ ಮೂರು ತಾಲ್ಲೂಕುಗಳ ಜಿ.ಪಂ. ಸದಸ್ಯರನ್ನೊಳಗೊಂಡ ನಿಯೋಗವು ನೂತನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡೋಣ ಎಂದು ಸದಸ್ಯರನ್ನು ಸಮಾಧಾನ ಪಡಿಸಿದರು.
ಸದಸ್ಯರ ಅಸಮಾಧಾನ: `ಜಿಲ್ಲೆ ಯಲ್ಲಿನ ಶಾಲೆಗಳಲ್ಲಿ ಕುಡಿಯುವ ನೀರು ಕಲ್ಪಿಸಲು ಕೊಳವೆ ಬಾವಿಯನ್ನು ನಿರ್ಮಿ ಸಲು ಕಳೆದ ಸಭೆಯಲ್ಲೇ ಮಂಜೂರಾತಿ ನೀಡಿದ್ದರೂ ಒಂದು ಕಡೆಯೂ ಕೊರೆಸಿಲ್ಲ~ ಎಂದು ಯಾದವಾಡ ಕ್ಷೇತ್ರದ ಸದಸ್ಯ ರಮೇಶ ಉಟಗಿ ಆಕ್ಷೇಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಹಲವು ಸದಸ್ಯರು, `ನಾಲ್ಕೈದು ತಿಂಗಳ ಹಿಂದೆಯೇ ಕೊಳವೆ ಬಾವಿ ಕೊರೆಸಬೇಕಾ ಗಿರುವ ಶಾಲೆಗಳ ಪಟ್ಟಿಯನ್ನು ಪಂಚಾ ಯತ್‌ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸದಸ್ಯರು ನೀಡಿದ್ದರೂ, ಇದುವರೆಗೂ ಕ್ರಮ ಕೈಗೊಂಡಿಲ್ಲ. ಕೂಡಲೇ ಶಾಲೆಗಳಿಗೆ ಕುಡಿಯುವ ನೀರು ಕಲ್ಪಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಸವದತ್ತಿ ತಾಲ್ಲೂಕಿನ ಶಿರಸಂಗಿ ಶಾಲೆಯಲ್ಲಿ ಕೊಳವೆ ಬಾವಿ ಕೊರೆದು ಹಲವು ದಿನಗಳಾದರೂ ಪಂಪ್ ಕೂರಿ ಸಿಲ್ಲ. ಕೊಳವೆ ಬಾವಿ ಕೊರೆಸುತ್ತಿರು ವುದನ್ನು ಅಧಿಕಾರಿಗಳು ಸದಸ್ಯರ ಗಮನಕ್ಕೆ ತರುತ್ತಿಲ್ಲ~ ಎಂದು ರತ್ನಾ ಯಾದವಾಡ ಆಕ್ಷೇಪಿಸಿದರು.
ಸದಸ್ಯ ಗಣೇಶ ಹುಕ್ಕೇರಿ ಮಾತನಾಡಿ, 13ನೇ ಹಣಕಾಸು ಯೋಜನೆಯಡಿಯ 36 ಕಾಮಗಾರಿಗಳು ರದ್ದಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಮಗಾರಿ ರದ್ದಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಮಕ್ಕೆ ಸೂಚನೆ: ಹಲವು ಅಧಿಕಾರಿ ಗಳು ಸಭೆಗೆ ಗೈರಾಗಿದ್ದಾರೆ ಎಂದು ಸದಸ್ಯರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಎಷ್ಟು ಅಧಿಕಾರಿಗಳು ಸಭೆಗೆ ಬಂದಿಲ್ಲ ಎಂಬುದನ್ನು ಪರಿಶೀಲಿಸುವಂತೆ ಅಧ್ಯಕ್ಷ ಈರಣ್ಣ ಕಡಾಡಿ ಸೂಚಿಸಿದರು.
ಸಭೆಗೆ ಹಾಜರಾಗುವಂತೆ 100 ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿ ಕೊಡಲಾಗಿತ್ತು. ಇವರ ಪೈಕಿ 10 ಅಧಿ ಕಾರಿಗಳು ಸಭೆಗೆ ಗೈರಾಗಿದ್ದರು. ಇಬ್ಬರು ಅಧಿಕಾರಿಗಳು ಮೊದಲೇ ಪರವಾನಿಗೆ ತೆಗೆದುಕೊಂಡಿದ್ದರಿಂದ ಉಳಿದ 8 ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳ ಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಶಂಕರ ಸಭೆಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುನಿತಾ ಶಿರಗಾವಿ ಹಾಜರಿದ್ದರು. ಜಿ.ಪಂ. ಉಪಕಾರ್ಯದರ್ಶಿ ಆರ್.ಜಿ. ನಾಯಕ ಸ್ವಾಗತಿಸಿದರು.
ಅಮಟೂರು ಯೋಜನೆ ವೈಫಲ್ಯಕ್ಕೆ ಆಕ್ರೋಶ
ಬೆಳಗಾವಿ: `ಬೈಲಹೊಂಗಲ ತಾಲ್ಲೂಕಿನ ಅಮಟೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ಒಂದೂವರೆ ವರ್ಷ ಕಳೆದರೂ ಹಲವು ಹಳ್ಳಿಗಳಿಗೆ ಇನ್ನೂ ಕುಡಿಯುವ ನೀರು ಪೂರೈಸಲಾಗುತ್ತಿಲ್ಲ~ ಎಂದು ನಾಗನೂರು ಕ್ಷೇತ್ರದ ಜಿ.ಪಂ. ಸದಸ್ಯ ರಮೇಶ ಪರವಿನಾಯ್ಕರ ಆಕ್ಷೇಪಿಸಿದರು.
`ಯೋಜನೆಯ ಕಾಮಗಾರಿಯನ್ನು ನಿರ್ವಹಿಸಿದ ಲ್ಯಾಂಡ್ ಆರ್ಮಿಯವರು ಇನ್ನೂ ಪಂಚಾಯತ್‌ರಾಜ್ ಎಂಜಿನಿಯ ರಿಂಗ್ ವಿಭಾಗಕ್ಕೆ ಹಸ್ತಾಂತರಿಸಿಲ್ಲ. ಹಳ್ಳಿಗಳಲ್ಲಿ ಕೊಳವೆ ಬಾವಿಯನ್ನೂ ಕೊರೆಸದೇ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ~ ಎಂದು ರಮೇಶ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಬಿ. ಧಾಮಣ್ಣವರ, ಅಮಟೂರು ಯೋಜನೆಯನ್ನು ನಿರ್ವಹಣೆ ಮಾಡಲು ಐದು ಬಾರಿ ಟೆಂಡರ್ ಕರೆದರೂ ಯಾವೊಬ್ಬರೂ ಮುಂದೆ ಬಂದಿಲ್ಲ. ಹೀಗಾಗಿ ಸಮಸ್ಯೆ ಉದ್ಭವಿಸುತ್ತಿದೆ. ಈ ಬಗ್ಗೆ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದು, ಇದರ ನಿರ್ವಹಣೆ ಯನ್ನು ಲ್ಯಾಂಡ್ ಆರ್ಮಿಗೇ ವಹಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.
ಪಂಚಾಯತ್ ಎಂಜಿನಿಯರಿಂಗ್ ವಿಭಾಗದವರು ಇದರ ವಾರ್ಷಿಕ ನಿರ್ವ ಹಣೆಗೆ ಕೇವಲ 22 ಲಕ್ಷ ರೂಪಾಯಿ ನೀಡಲು ಮುಂದೆ ಬಂದಿದ್ದಾರೆ. ಆದರೆ, ಒಂದು ವರ್ಷಕ್ಕೆ ಸುಮಾರು 36 ಲಕ್ಷ ರೂಪಾಯಿ ಅಗತ್ಯವಿದೆ. ಪಂಚಾಯತ್ ಎಂಜಿನಿಯರಿಂಗ್ ವಿಭಾಗವು ಮೊದಲು ಯೋಜನೆಯನ್ನು ತಮ್ಮ ಸುಪರ್ಧಿಗೆ ತೆಗೆದುಕೊಳ್ಳಲಿ. ನಿರ್ವಹಣೆಗೆ ಅಗತ್ಯ ಇರುವ ಹಣ ನೀಡಿದರೆ, ಆ ಬಗ್ಗೆ ಯೋಚಿಸಲಾಗುವುದು ಎಂದು ಲ್ಯಾಂಡ್ ಆರ್ಮಿಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಬೈಲಹೊಂಗಲ ತಾಲ್ಲೂ ಕಿನ ಜಿ.ಪಂ. ಸದಸ್ಯರು, ಲ್ಯಾಂಡ್ ಆರ್ಮಿ ಹಾಗೂ ಪಂಚಾಯತ್‌ರಾಜ್ ಎಂಜಿನಿ ಯರಿಂಗ್ ವಿಭಾಗದ ಅಧಿಕಾರಿಗಳು ಸಭೆ ನಡೆಸಿ ಯೋಜನೆಯ ನಿರ್ವಹಣೆ ಕುರಿತು ಸೂಕ್ತ ನಿರ್ಧಾರವನ್ನು ಕೈಗೊಂಡು, ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ ಕೊಡೋಣ ಎಂದು ತಿಳಿಸಿದರು.
ಖರ್ಚಾಗದೇ ಉಳಿದ ರೂ 60ಲಕ್ಷ
ಬೆಳಗಾವಿ: ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಕಲ್ಪಿಸಲು ಸರ್ಕಾರ ದಿಂದ ಜಿಲ್ಲಾ ಪಂಚಾಯಿತಿಗೆ 4 ತಿಂಗಳ ಹಿಂದೆಯೇ ಬಿಡುಗಡೆಯಾಗಿರುವ ರೂ. 60 ಲಕ್ಷದಲ್ಲಿ ಯಾವುದೇ ಕೆಲಸವನ್ನು ಕೈಗೊಳ್ಳದೇ ಇರುವುದಕ್ಕೆ ಸದಸ್ಯ ಗಣೇಶ ಹುಕ್ಕೇರಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬರಗಾಲವಿದ್ದರೂ, 60 ಲಕ್ಷ ರೂಪಾಯಿ ಖರ್ಚಾಗದೇ ಹಾಗೆಯೇ ಉಳಿದಿದೆ. ಜನರ ಕುಡಿ ಯುವ ನೀರಿನ ಸಮಸ್ಯೆ ಎದುರಿ ಸುತ್ತಿದ್ದಾರೆ. ಈ ಹಣಕ್ಕೆ ಇನ್ನೂ ಏಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿ ಯನ್ನು ಕೈಗೊಂಡಿಲ್ಲ ಎಂದು ಪ್ರಶ್ನಿಸಿ ದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಓ ವಿ. ಶಂಕರ, 60 ಲಕ್ಷ ರೂಪಾಯಿ ಮೂರು ಹಂತದಲ್ಲಿ ಬಿಡುಗಡೆಯಾಗಿದೆ. ಇಷ್ಟು ಕಡಿಮೆ ಹಣದಲ್ಲಿ ಎಲ್ಲ ಸದಸ್ಯರ ಕ್ಷೇತ್ರಗಳಲ್ಲೂ ಕೊಳವೆಬಾವಿ ಕೊರೆಸಲು ಸಾಧ್ಯವಿಲ್ಲ. ಹೀಗಾಗಿ ಆದ್ಯತೆ ಮೇಲೆ ಕೆಲಸವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.