ADVERTISEMENT

ಶ್ರೀಗಳ ನಡಿಗೆ ಕೃಷಿ ಕಡೆಗೆ ಚಿಂತನಾ ಸಭೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 9:45 IST
Last Updated 14 ಫೆಬ್ರುವರಿ 2012, 9:45 IST

ಬೆಳಗಾವಿ: “ಈ ಹಿಂದೆ ಕೃಷಿಯಲ್ಲಿ ಸ್ವಾವಲಂಬಿಗಳಾಗಿದ್ದ ಮಠಗಳು ಇದೀಗ ಪರಾವಲಂಬಿಗಳಾಗುತ್ತಿವೆ. ದಾಸೋಹ ನಡೆಸಲು ಶ್ರೀಗಳು ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಎಲ್ಲ ಮಠಗಳೂ ಕೃಷಿ ಕೈಗೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು” ಎಂದು ಕಣೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ನಾಗನೂರ ರುದ್ರಾಕ್ಷಿಮಠ ಹಾಗೂ ಮಹಾತ್ಮ ಗಾಂಧಿ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಶ್ರೀಗಳ ನಡಿಗೆ ಕೃಷಿಯ ಕಡೆಗೆ~ ಕೃಷಿ ಅಭಿವೃದ್ಧಿ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

“ಹಳ್ಳಿಗಳಿಂದ ಜನರು ವಲಸೆ ಹೋಗುತ್ತಿರುವುದರಿಂದ ನಗರವು ನರಕಮಯವಾಗುತ್ತಿದೆ. ಹಳ್ಳಿಗಳೆಲ್ಲ ಹಾಳು ಬೀಳುತ್ತಿವೆ. ಹೀಗಾಗಿ ಹಳ್ಳಿಗಳಿಗೆ ಮೂಲ ಸೌಲಭ್ಯ, ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಾವಕಾಶವನ್ನು ಕಲ್ಪಿಸಬೇಕು. ಐಟಿ, ಬಿಟಿ ಕ್ಷೇತ್ರವು ಮಹತ್ವ ಕಳೆದುಕೊಳ್ಳುತ್ತಿದೆ.
 
ಹೊಟ್ಟೆ ಇರುವವರೆಗೂ ಕೃಷಿ ನಡೆಸಲೇ ಬೇಕಾಗುತ್ತದೆ. ಹೀಗಾಗಿ ಕೃಷಿಗೆ ಮರಣವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಮಠಗಳು ನೋಡಿಕೊಳ್ಳಬೇಕು” ಎಂದು ಹೇಳಿದರು.

“ರಾಜ್ಯ ಸರ್ಕಾರ ಮಂಡಿಸಿದ `ಕೃಷಿ ಬಜೆಟ್~ನಲ್ಲಿ ಶೇ. 10ರಷ್ಟು ಹಣವೂ ರೈತರಿಗೆ ನೇರವಾಗಿ ತಲುಪುವುದಿಲ್ಲ. ಈ ಅನುದಾನವು ರೈತರನ್ನು ತಲುಪುವಂತೆ ಎಚ್ಚರಿಕೆ ವಹಿಸಬೇಕು. ಕೃಷಿಯಲ್ಲಿನ ಸಂಶೋಧನೆಗಳು ರೈತರನ್ನು ತಲುಪಿಸುವಂತೆ ಮಠಗಳು ನೋಡಿಕೊಳ್ಳಬೇಕು” ಎಂದು ಕಣೇರಿ ಮಠದ ಸ್ವಾಮೀಜಿ ಹೇಳಿದರು.

“ಮಠಗಳು `ಕಾಳಿನ ಬ್ಯಾಂಕ್~ ಸ್ಥಾಪಿಸಬೇಕು. ಶೀಥಲ ಘಟಕ ನಿರ್ಮಿಸುವ ಮೂಲಕ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಬೇಕು. ರೈತರ ಜೀವನದ ಯಶೋಗಾಥೆಗಳನ್ನು ಪ್ರಕಟಿಸುವುದರ ಜೊತೆಗೆ ಶ್ರೀಗಳು ರೈತರ ನಡುವೆ ಹೋಗಬೇಕು” ಎಂದು ಅಭಿಪ್ರಾಯಪಟ್ಟರು.

ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, “ಜನರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಠಾಧೀಶರು ಕೃಷಿಗೆ ಪೂರಕವಾದ ಕೆಲಸ ಮಾಡಬೇಕು. ಸರ್ಕಾರದ ಕಣ್ಣು ತೆರೆಸಿ ಕೃಷಿಗೆ ಪೂರಕ ಉದ್ಯಮ ಸ್ಥಾಪಿಸುವಂತೆ ಮಾಡಬೇಕು” ಎಂದರು.

ಕೃಷಿ ಸಚಿವ ಉಮೇಶ ಕತ್ತಿ ಮಾತನಾಡಿ, “ಕೃಷಿಯಲ್ಲಿ ತೊಡಗಿಕೊಂಡವರು ಕೀಳರಿಮೆಯಿಂದ ಬದುಕುತ್ತಿದ್ದು, ಅದರಿಂದ ಅವರನ್ನು ಹೊರ ಬರುವಂತೆ ಮಠಾಧೀಶರು ಮಾಡಬೇಕು. ರಾಜ್ಯದ ಎಲ್ಲ ಮಠಾಧೀಶರು ಸೇರಿಕೊಂಡು ಚಿಂತನೆ ನಡೆಸಿ ರೈತರ ಬದುಕನ್ನು ಹಸನುಗೊಳಿಸಬೇಕು” ಎಂದು ಸಲಹೆ ನೀಡಿದರು.

“ಉತ್ತರ ಕರ್ನಾಟಕದಲ್ಲಿ ಮಠಾಧೀಶರು ಈಗಾಗಲೇ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ. ಇದೇ ರೀತಿ ಈಗ ಮಠಾಧೀಶರೆಲ್ಲ ಸೇರಿಕೊಂಡು ಕೃಷಿ ಕ್ಷೇತ್ರದಲ್ಲೂ ಕ್ರಾಂತಿ ಮಾಡಬೇಕು” ಎಂದು ಸಚಿವರು ಹೇಳಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ, “ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರನ್ನು ರೈತರ ಹೊಲಗಳಲ್ಲಿ ಬಳಸಿಕೊಳ್ಳಲು ನೀಡಬೇಕು. ಇದರಿಂದ ರೈತರು ಎದುರಿಸುತ್ತಿರುವ ಕೂಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಅಧಿಕಾರಿಗಳಿಗೆ ಪುಸ್ತಕ ಜ್ಞಾನ ಇದೆಯೇ ಹೊರತು, ಪ್ರಾಯೋಗಿಕ ಜ್ಞಾನವಿಲ್ಲ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಮಠಗಳಿಗೆ ನೀಡಬೇಕು” ಎಂದರು.

ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಬಿ.ಪಾಟೀಲ ಸ್ವಾಗತಿಸಿದರು.ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ, ಎಂ.ಎಲ್.ಸಿ. ಮಹಂತೇಶ್ ಕೌಜಲಗಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಗುಳೇದಗುಡ್ಡದ ಗುರುಸಿದ್ಧ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.