ADVERTISEMENT

ಸಮಗ್ರ ವರದಿ ಸಲ್ಲಿಕೆಗೆ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 5:27 IST
Last Updated 8 ಜುಲೈ 2013, 5:27 IST

ಬೆಳಗಾವಿ: `ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಕೊಠಡಿ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಎಷ್ಟು ಬೇಕಾಗಿವೆ ಹಾಗೂ ಅದಕ್ಕೆ ಬೇಕಾಗುವ ಅನುದಾನ ಎಷ್ಟು ಎಂಬ ಕುರಿತು ಸಮಗ್ರ ವರದಿಯನ್ನು ನೀಡಬೇಕು' ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, `ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಸುಮಾರು 3500 ಕೋಟಿ ರೂಪಾಯಿ ಅಗತ್ಯವಿದೆ ಎಂಬ ಪ್ರಸ್ತಾವವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಪ್ರತಿ ಜಿಲ್ಲೆಗಳಿಗೂ ಖುದ್ದು ಭೇಟಿ ನೀಡಿ ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ' ಎಂದು ತಿಳಿಸಿದರು.

`ಪ್ರತಿಯೊಂದು ವಿಧಾನಸಭೆ ಕ್ಷೇತ್ರವಾರು ಸರ್ಕಾರಿ ಶಾಲೆಗಳಿಗೆ ಅಗತ್ಯ ಇರುವ ಮೂಲಸೌಲಭ್ಯ ಹಾಗೂ ಶಿಕ್ಷಕರ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಂಗ್ರಹಿಸಬೇಕು. ಅದೇ ರೀತಿ ಪ್ರತಿಯೊಂದು ಗ್ರಾಮ ಪಂಚಾಯಿತಿವಾರು ಶಾಲೆಗಳ ವಿವರಗಳನ್ನೂ ಕಲೆ ಹಾಕಬೇಕು. ಇವುಗಳಿಗೆ ಬೇಕಾಗುವ ಅನುದಾನವನ್ನು ನೀಡಲು ಕೆಲವು ಸಂಸ್ಥೆಗಳು ಮುಂದೆ ಬಂದಿವೆ. ಅದೇ ರೀತಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೂ ಇದಕ್ಕೆ ಬಳಸಿಕೊಳ್ಳಲು ಸಾಧ್ಯವಿದೆ' ಎಂದು ಸಚಿವರು ತಿಳಿಸಿದರು.

`ಪ್ರತಿಯೊಂದು ಶಾಲೆಗೂ ಸ್ವಂತ ಕುಡಿಯುವ ನೀರಿನ ಮೂಲ ಇರಬೇಕು. ಎಷ್ಟು ಶಾಲೆಗಳಲ್ಲಿ ಕುಡಿಯವ ನೀರಿನ ಸ್ವಂತ ಮೂಲ ಹಾಗೂ ಶೌಚಾಲಯವ ಸೌಲಭ್ಯ ಇದೆ ಎಂಬ ಬಗ್ಗೆ ವರದಿ ನೀಡಿ' ಎಂದು ಸಚಿವರು ಹೇಳಿದರು.

`ಈ ವರ್ಷ 1ನೇ ತರಗತಿಗೆ ಸೇರಿದ ಮಕ್ಕಳ ಸಂಖ್ಯೆಯು 7ನೇ ತರಗತಿಗೆ ಬರುವಾಗ ಎಷ್ಟು ಇದೆ ಹಾಗೂ 10ನೇ ತರಗತಿಗೆ ಬರುವಾಗ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಲೆಕ್ಕ ಹಾಕಿ, ಎಷ್ಟು ಪ್ರಮಾಣದಲ್ಲಿ ಮಕ್ಕಳು ಶಾಲೆಯನ್ನು ತೊರೆದಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿ' ಎಂದು ಸೂಚಿಸಿದರು.

ಶಾಸಕ ಫಿರೋಜ್ ಸೇಠ್, `1ರಿಂದ 10ನೇ ತರಗತಿವರೆಗೆ ನಿರಂತರವಾಗಿ ಶಿಕ್ಷಣ ನೀಡುವ ಸೌಲಭ್ಯವನ್ನು ಕಲ್ಪಿಸಬೇಕು. ಕೆಲವೆಡೆ 1ರಿಂದ ಕೇವಲ 8ನೇ ತರಗತಿವರೆಗೆ ಶಾಲೆ ಇರುವುದರಿಂದ ಮಕ್ಕಳು ಮಧ್ಯದಲ್ಲೇ ಶಾಲೆಯನ್ನು ಬಿಡುತ್ತಿದ್ದಾರೆ' ಎಂದು ಒತ್ತಾಯಿಸಿದರು. `ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ಹೊಸದಾಗಿ ಪ್ರೌಢಶಾಲೆ ನಿರ್ಮಿಸಲು ರಾಜ್ಯದ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು' ಎಂದು ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಾ ಚೋಳನ ಇಲಾಖೆಯ ಮಾಹಿತಿಯನ್ನು ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಉಪನಿರ್ದೇಶಕ ದಿವಾಕರ ಶೆಟ್ಟಿ ಹಾಗೂ ಚಿಕ್ಕೋಡಿ ಡಿಡಿಪಿಐ ಡಿ.ಎಂ. ದಾನೋಜಿ ಇಲಾಖೆಯ ಮಾಹಿತಿಯನ್ನು ಸಭೆಗೆ ನೀಡಿದರು.

ಸಭೆಯಲ್ಲಿ ಸಂಜಯ ಪಾಟೀಲ, ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಮಹಾಂತೇಶ ಕೌಜಲಗಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಶಿಂತ್ರಿ, ಶೈಕ್ಷಣಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ನಂದಾ ಸರನಾಯಿಕ ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.