ADVERTISEMENT

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 10:35 IST
Last Updated 3 ಜನವರಿ 2011, 10:35 IST

ಬೆಳಗಾವಿ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಯ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಆದರೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಮಾತ್ರ ಭರ್ಜರಿಯಾಗಿಯೇ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಆಗಿರುವ ಮತದ ಪ್ರಮಾಣ, ಅದರಲ್ಲೂ ಯಾವ ಗ್ರಾಮದಲ್ಲಿ ಎಷ್ಟು ಮತದಾನವಾಗಿದೆ. ತಮಗೆ ಲಭಿಸಬಹುದಾದ ಮತಗಳ ಬಗೆಗೆ ಬೆಂಬಲಿಗರನ್ನು ಕಟ್ಟಿಕೊಂಡು ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಅಭ್ಯರ್ಥಿಗಳು.

ಅಭ್ಯರ್ಥಿಗಳ ಗೆಲುವಿಗಾಗಿ ಕಳೆದೊಂದು ವಾರದಿಂದ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸಚಿವರು, ಶಾಸಕರು, ಸಂಸದರು ರೆಸ್ಟ್ ಪಡೆಯುತ್ತಿದ್ದಾರೆ. ಕುಟುಂಬದವರ ಜತೆಗೆ ಜಾಲಿಯಾಗಿದ್ದಾರೆ. ಮತದಾನ ಮುಗಿಯುತ್ತಿದ್ದಂತೆ ಡಿ.31ರ ರಾತ್ರಿ ಹೊಸ ವರ್ಷಾಚರಣೆಗೆ ತೆರಳಿದ್ದ ಬೆಂಬಲಿಗರು, ಜ.2ರಂದು ಮತ್ತೆ ನಾಯಕರ ಮನೆಗೆ ಆಗಮಿಸಿದ್ದಾರೆ. ನಾಯಕರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂತಹದೇ ಅಭ್ಯರ್ಥಿ ಗೆಲ್ಲಬಹುದು ಎಂದು ಕೆಲವರು ‘ಬೆಟ್’ ಕಟ್ಟಲು ಮುಂದಾಗಿದ್ದಾರೆ. ಇನ್ನು ಕೆಲವರು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಯಲ್ಲಿ ಇಂತಹದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಬೆಟ್ ಕಟ್ಟುತ್ತಿದ್ದಾರೆ. ಕಳೆದ ಬಾರಿ ಆಯ್ಕೆಯಾಗಿದ್ದ ಕೆಲವು ಅಭ್ಯರ್ಥಿಗಳು ಮತ್ತೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಹೊಸಬರೂ ಸಹ ಅದೇ ಉತ್ಸಾಹದಲ್ಲಿದ್ದಾರೆ. ಮಹಿಳೆಯರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜಿ.ಪಂ. ಹಾಗೂ ತಾ.ಪಂ.ಗಳಿಗೆ ಲಗ್ಗೆ ಇಡಲಿದ್ದಾರೆ.

ಬೆಳಗಾವಿ ಸೇರಿದಂತೆ ಜಿಲ್ಲೆಯಲ್ಲಿ 10 ತಾಲ್ಲೂಕುಗಳಿವೆ. ಆಯಾ ತಾಲ್ಲೂಕುಗಳಲ್ಲಿಯೇ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಮಂಗಳವಾರ ಪ್ರಕಟವಾಗಲಿರುವ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.