ADVERTISEMENT

‘ಶಿಕ್ಷೆ ಇಲ್ಲದೆ ದೌರ್ಜನ್ಯ ನಿಲ್ಲದು’

ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 7:44 IST
Last Updated 30 ಜನವರಿ 2016, 7:44 IST
ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ,  ಅತ್ಯಾಚಾರ ಪ್ರಕರಣ  ನಿಯಂತ್ರಿಸುವ, ಸರ್ಕಾರಕ್ಕೆ ವರದಿ ನೀಡುವ ತಜ್ಞರ ಸಮಿತಿ ಬೆಳಗಾವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಮಾತನಾಡಿದರು
ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣ ನಿಯಂತ್ರಿಸುವ, ಸರ್ಕಾರಕ್ಕೆ ವರದಿ ನೀಡುವ ತಜ್ಞರ ಸಮಿತಿ ಬೆಳಗಾವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಮಾತನಾಡಿದರು   

ಬೆಳಗಾವಿ: ನಗರದ ಗಣಪತ್‌ ಗಲ್ಲಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರ ಮೇಲೆ ಪೊಲೀಸರು ನಡೆಸಿದ್ದ ದೌರ್ಜನ್ಯ ಪ್ರಕರಣವೂ ಸೇರಿದಂತೆ ಇತರೆಡೆ ನಡೆಸಿರುವ ಅತ್ಯಾಚಾರ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ ಎಂದು  ಆಕ್ರೋಶ ವ್ಯಕ್ತಪಡಿಸಲಾಯಿತು.

  ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ಪ್ರಕರಣ  ನಿಯಂತ್ರಿಸುವ, ಸರ್ಕಾರಕ್ಕೆ ವರದಿ ನೀಡುವ ತಜ್ಞರ ಸಮಿತಿ ಶುಕ್ರವಾರ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ– ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಈ ಕುರಿತು ತೀವ್ರ ಕಿಡಿ ಕಾರಿದರು.

ಜಿಲ್ಲೆಯಲ್ಲಿ ದಾಖಲಾಗಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರ ಪ್ರಕರಣಗಳ ಬಗ್ಗೆ ಸಮಿತಿ ಮುಖಂಡರು ಸಮಗ್ರ ಮಾಹಿತಿ ಪಡೆದರಲ್ಲದೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಶೋಷಣೆ ಕುರಿತು ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಕೊಳ್ಳದಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದರು.

ಕಳೆದ ವರ್ಷ ನಗರದ ಗಣಪತ್‌ ಗಲ್ಲಿಯಲ್ಲಿ ಅಮಾಯಕ ಹಾಗೂ ನೊಂದ ಮಹಿಳೆಯರ ಮೇಲೆ ಖಡೇಬಜಾರ್‌ ಠಾಣೆಯ ಪೊಲೀಸರು ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸರನ್ನು ರಕ್ಷಿಸುವ ನಿಟ್ಟಿನಲ್ಲಿ ಮಹಿಳೆಯರ ಮೇಲಿನ ಶೋಷಣೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಅಧಿಕಾರದಲ್ಲಿ ಇದ್ದವರಿಗೊಂದು, ಸಾಮಾನ್ಯ ಜನರಿಗೊಂದು ಕಾನೂನು ಎಂಬಂತೆ ವರ್ತಿಸಿರುವುದರಿಂದ ಸಾರ್ವಜನಿಕರಿಗೆ ಕಾನೂನು ಹಾಗೂ ಪೊಲೀಸ್‌ ಇಲಾಖೆಯ ಮೇಲಿನ ನಂಬಿಕೆ ಇಲ್ಲದಂತಾಗಿದೆ ಎಂದು ವಿ.ಎಸ್‌. ಉಗ್ರಪ್ಪ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನಿರ್ಲಕ್ಷ್ಯ, ಅಸಮಾದಾನ: ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅತ್ಯಾಚಾರಕ್ಕೆ ಒಳಗಾದವರಿಗೆ ಪರಿಹಾರ ವಿತರಣೆಯಲ್ಲೂ ಅನ್ಯಾಯ ಎಸಗಲಾಗಿದೆ.

ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ 514 ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇದುವರೆಗೆ ಕೇವಲ ₹ 10 ಲಕ್ಷ ಪರಿಹಾರ ನೀಡಲಾಗಿದೆ. ಇದರಿಂದ ಕಾಯ್ದೆ ಬಗ್ಗೆ ಜಿಲ್ಲಾಡಳಿತಕ್ಕೆ, ಇಲ್ಲಿಯ ಸರ್ಕಾರಿ ವಕೀಲರಿಗೆ, ಪೊಲೀಸ್‌ ಅಧಿಕಾರಿಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜ್ಞಾನ ಇಲ್ಲದಿರುವುದು ಎದ್ದುಕಾಣುತ್ತದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

  ಅತ್ಯಾಚಾರ ಪ್ರಕರಣ ದಾಖಲಾದ ತಕ್ಷಣ ಸಂತ್ರಸ್ತರಿಗೆ ಚಿಕಿತ್ಸಾ ವೆಚ್ಚದ ರೂಪದಲ್ಲಿ ₹ 25,000 ಪರಿಹಾರ ನೀಡಬೇಕು. ಸಂತ್ರಸ್ತೆಯು ಅಪ್ರಾಪ್ತಳಾಗಿದ್ದಲ್ಲಿ ₹ 4.50 ಲಕ್ಷ, 18ರಿಂದ 45 ವರ್ಷದವರಿಗೆ ₹ 3 ಲಕ್ಷ, 60 ವರ್ಷದೊಳಗಿನವರಿಗೆ ₹ 2 ಲಕ್ಷ, 60 ವರ್ಷ ಮೇಲ್ಪಟ್ಟವರಿಗೆ ₹ 1 ಲಕ್ಷ ಪರಿಹಾರ ಕೊಡಬೇಕು ಎಂಬ ನಿಮಯವನ್ನು 2011ರಲ್ಲೇ ಜಾರಿಗೊಳಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಈವರೆಗೆ ಆ ನಿಯಮ ಯಾಕೆ ಅನುಷ್ಠಾನವಾಗಿಲ್ಲ ಎಂದು ಅವರು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗಳು ಹೆಚ್ಚಾಗಿವೆ. ವೈದ್ಯರ ನಿರ್ಲಕ್ಷ್ಯದಿಂದ ಲಿಂಗಾನುಪಾತ ಅಧಿಕವಾಗಿದೆ. ಮಹಿಳೆಯರ ಮತ್ತು ಮಕ್ಕಳ ನಾಪತ್ತೆ ಪ್ರಕರಣಗಳ ಕುರಿತು ಸಮರ್ಪಕ ತನಿಖೆ ನಡೆಯುತ್ತಿಲ್ಲ. ಹೀಗಾದರೆ ಸಾರ್ವಜನಿಕರು ಪೊಲೀಸರನ್ನು ನಂಬುವುದಾದರೂ ಹೇಗೆ ಎಂದು ಸಮಿತಿ ಸದಸ್ಯರಾದ ಕೆ.ಬಿ. ಶಾಣಪ್ಪ ಹಾಗೂ  ಶರಣಪ್ಪ ಮಟ್ಟೂರ ಅವರು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿ ಪ್ರಕರಣಗಳ ತನಿಖೆ ನಡೆಸಿ, ನಿಜವಾದ ಅಪರಾಧಿಯನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಮಿತಿ ಸೂಚಿಸಿತು. ಸಮಿತಿ ಸದಸ್ಯರಾದ ಜ್ಯೋತಿ, ಎಚ್‌.ಆರ್‌.ರೇಣುಕಾ, ಎಲ್‌.ಪ್ರಭಾ, ಉತ್ತರ ವಲಯ ಐಜಿಪಿ ಉಮೇಶಕುಮಾರ, ಜಿಲ್ಲಾಧಿಕಾರಿ ಎನ್‌. ಜಯರಾಮ ಉಪಸ್ಥಿತರಿದ್ದರು. ನಗರ ಪೊಲೀಸ ಆಯುಕ್ತ ಸೌಮೇಂದು ಮುಖರ್ಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಬಿ.ಆರ್‌. ರವಿಕಾಂತೇಗೌಡ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.