ADVERTISEMENT

ಬೆಳಗಾವಿ: ಮನೆಗಳ ತೆರವಿಗೆ 2 ದಿನಗಳ ಗಡುವು

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 15:14 IST
Last Updated 24 ಜೂನ್ 2021, 15:14 IST

ಬೆಳಗಾವಿ: ಇಲ್ಲಿನ ಸರ್ವೋದಯ ಕಾಲೊನಿಯಲ್ಲಿ ಮಹಾನಗರಪಾಲಿಕೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ 11 ಮನೆಗಳ ತೆರವಿಗೆ ಅಧಿಕಾರಿಗಳು ಎರಡು ದಿನಗಳ ಗಡುವು ನೀಡಿದ್ದಾರೆ.

‘ಅಲ್ಲಿ ಉದ್ಯಾನ ಹಾಗೂ ಶಾಲೆ ನಿರ್ಮಿಸಲು ಮೀಸಲಿರಿಸಿದ್ದ ಜಾಗದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಅತಿಕ್ರಮಣ ತೆರವುಗೊಳಿಸುವಂತೆ ನೋಟಿಸ್ ನೀಡಿದರೂ ಸ್ಪಂದಿಸಿರಲಿಲ್ಲ. ನಮ್ಮ ಜಾಗದಲ್ಲಿ ಕೆಲವರು ಸಣ್ಣದೊಂದು ಗುಡಿ ಕಟ್ಟಿದ್ದರು. ಬಳಿಕ ದೊಡ್ಡದಾಗಿ ನಿರ್ಮಿಸಿದ್ದರು (ಶೀಟ್‌ಗಳನ್ನು ಬಳಸಿ). ನಂತರ ಕೆಲವರು 11 ಮನೆಗಳನ್ನು (ತಗಡಿನ ಶೀಟ್‌ಗಳಿಂದ) ನಿರ್ಮಿಸಿದ್ದಾರೆ. ಅದನ್ನು ಬಾಡಿಗೆಗೂ ಕೊಟ್ಟಿದ್ದಾರೆ. ಹೈಕೋರ್ಟ್‌ ಸೂಚನೆಯಂತೆ ಅತಿಕ್ರಮಣ ತೆರವುಗೊಳಿಸಲು ಕ್ರಮ ವಹಿಸಲಾಗಿದೆ’ ಎಂದು ನಗರಪಾಲಿಕೆ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ನಿಪ್ಪಾಣಿಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಥಳೀಯರ ಬೇಡಿಕೆಯಂತೆ ಗಣಪತಿ ಮಂದಿರಕ್ಕೆ ಧಕ್ಕೆ ಆಗದಂತೆ ಸುತ್ತಮುತ್ತಲಿನ ಒತ್ತುವರಿ ತೆರವುಗೊಳಿಸಲಾಗಿದೆ. ಮನೆಗಳಲ್ಲಿ ಬಾಡಿಗೆ ಇರುವವರಿಗೆ ಎರಡು ದಿನಗಳಲ್ಲಿ ಖಾಲಿ ಮಾಡುವಂತೆ ತಾಕೀತು ಮಾಡಲಾಗಿದೆ. ಹಲವು ದಿನಗಳಿಂದಲೂ ಅವರಿಗೆ ಸೂಚನೆ ನೀಡುತ್ತಾ ಬರಲಾಗಿದೆ. ಈ ಬಾರಿ ಕೊನೆಯ ಎಚ್ಚರಿಕೆ ನೀಡಲಾಗಿದೆ. ಅವರಿಗೆ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆ ಮಾಡಿಕೊಡುವುದಕ್ಕೂ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಅತಿಕ್ರಮಣ ತೆರವು ಕಾರ್ಯಾಚರಣೆಗೆ ಬಂದ ಅಧಿಕಾರಿಗಳೊಂದಿಗೆ ನಿವಾಸಿಗಳು ವಾಗ್ವಾದ ನಡೆಸಿದರು. ದಾಖಲೆಗಳನ್ನು ಪ್ರಸ್ತುತಪಡಿಸುವಲ್ಲಿ ವಿಫಲವಾದರು ಎನ್ನಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮನವಿ: ‘ಸರ್ವೊದಯ ಕಾಲೊನಿಯಲ್ಲಿ ಆರ್ಥಿಕವಾಗಿ ಹಿಂದುಳಿದವರು ಬಹಳ ವರ್ಷಗಳಿಂದ ವಾಸವಾಗಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅವರ ಮನೆಗಳನ್ನು ತೆರವುಗೊಳಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಆರ್. ಲಾತೂರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.