ADVERTISEMENT

25 ಲಕ್ಷ ಮೌಲ್ಯದ ಸಪ್ತರಂಗಿ ಬಳ್ಳಿ ವಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 7:08 IST
Last Updated 14 ಜುಲೈ 2013, 7:08 IST

ನಿಪ್ಪಾಣಿ: ಚೆನ್ನೈಯಿಂದ ಮುಂಬಯಿಗೆ ಔಷಧಿಗಾಗಿ ಸಾಗಣೆ ಮಾಡುತ್ತಿರುವ ಸುಮಾರು 25 ಲಕ್ಷ ಬೆಲೆಬಾಳುವ 4076 ಕೆಜಿ ಸಪ್ತರಂಗಿ ಬಳ್ಳಿಯ 119 ಚೀಲಗಳನ್ನು ಅರಣ್ಯ ಇಲಾಖೆಯು ವಶಪಡಿಸಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ನಂ.4ರಲ್ಲಿರುವ ನಿಪ್ಪಾಣಿ ಸಮೀಪದ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿ ನಡೆದಿದೆ.

ಶುಕ್ರವಾರ ಅರಣ್ಯ ಇಲಾಖೆಯ ಸಿಬ್ಬಂದಿ ಚೆಕ್‌ಪೋಸ್ಟ್ ಹತ್ತಿರ ಲಾರಿಯೊಂದರ ದಾಖಲೆಗಳನ್ನು ತಪಾಸಣೆಗೆ ಒಳಪಡಿಸಿದಾಗ ಸಪ್ತರಂಗಿ ಬಳ್ಳಿಯ ಉಲ್ಲೇಖ ಕಂಡುಬಂದಿದ್ದರಿಂದ ಟ್ರಕ್‌ವನ್ನು ಪರೀಕ್ಷಿಸಲಾಗಿ ಅದರಲ್ಲಿ ಸಪ್ತರಂಗಿ ಬಳ್ಳಿಯ 119 ಚೀಲಗಳು ಕಂಡು ಬಂದಿರಿಂದ ಟ್ರಕ್ ಸಹಿತ ಹಾವೇರಿ ಜಿಲ್ಲೆಯ ಕ್ಯಾಲಕೊಂಡದ ಚಾಲಕ ಬಸವರಾಜ ನಿಂಗಪ್ಪ ತೆಲಿನ್ನಾವರ ಅವರನ್ನು ವಿಚಾರಣೆ ನಡೆಯಿಸಲಾಯಿತೆಂದು ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

ಕರ್ನಾಟಕದಲ್ಲಿ ಸಪ್ತರಂಗಿ ಬಳ್ಳಿಯು ಅಳಿವಿನ ಅಂಚಿನಲ್ಲಿದ್ದು ಅದರ ಬಳಕೆಯನ್ನು ನಿಷೇಧಿಸಲಾಗಿದೆ. ಆದಾಗ್ಯೂ ಬಳ್ಳಿಯ ಸಾಗಾಣಿಕೆ ಮಾಡಿದ್ದರಿಂದ ಚಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅರಣ್ಯ ಇಲಾಖೆಯ ಡಿಎಫ್‌ಓ ಹೀರಾಲಾಲ, ಆರ್‌ಎಫ್‌ಓ ಆರ್.ಎ. ಪಾಟೀಲ, ಎಸ್.ಆರ್ ಸಂಸುದ್ದಿ, ಬಿ.ಐ. ಬಿರಾದಾರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.ಸಿದಗೌಡ ಮೋದಗಿ ಒತ್ತಾಯಿಸಿದ್ದಾರೆ.

ಆರೋಪಿ ಬಂಧನ
ಸಂಕೇಶ್ವರ: ಯುವಕನೊಬ್ಬ ವಿವಾಹಿತ ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಶನಿವಾರ ಬೆಳಿಗ್ಗೆ 6-30ರ ಸುಮಾರಿಗೆ ಸಂಕೇಶ್ವರ ಸಮೀಪದ ಗೋಟುರಿನಲ್ಲಿ ನಡೆದಿದೆ.

ಗೋಟುರಿನ ಹಸೀನಾ ಇರ್ಫಾನ್ ಬೇಪಾರಿ ಎಂಬ ಮಹಿಳೆ ಬಹಿರ್ದೆಸೆಗೆ ಹೋಗಿ ಬಂದು ತನ್ನ ಮನೆಯ ಮುಂದೆ ಕೈಕಾಲು ತೊಳೆದುಕೊಳ್ಳುತ್ತಿರುವಾಗ ಹಿಂದಿನಿಂದ ಬಂದ ಹನುಮಂತ ಬಸ್ಸಪ್ಪ ನಾಯಿಕ (22) ಎಂಬ ಯುವಕ ಆಕೆಯ ಭುಜವನ್ನು ಬಾಯಿಯಿಂದ ಕಡಿದಿದ್ದಾನೆ.

ನೋವಿನಿಂದ ಆಕೆ ಚೀರಿದಾಗ ಆಕೆಯ ಪತಿ ರಕ್ಷಣೆಗೆ ಬಂದಿದ್ದಾನೆ.

ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹನುಮಂತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.