ADVERTISEMENT

2018ರಲ್ಲಿ ನಾವೇ ಕಿಂಗ್ ಮೇಕರ್‌

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ, ಶ್ರೀಮಂತ ಪಾಟೀಲ ಹರಕೆಯ ಕುರಿ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 11:03 IST
Last Updated 4 ಜನವರಿ 2018, 11:03 IST

ಮೋಳೆ: ‘ಹಿಂದಿನ ಸಾಧನೆ ಹಾಗೂ ಮುಂದಿನ ಯೋಜನೆಗಳ ಮೂಲಕ ಬರುವ 2018 ರ ಚುನಾವಣೆ ಎದುರಿಸುತ್ತೇವೆಯೇ ಹೊರತು ನಿತ್ಯದ ಟೀಕೆ ಟಿಪ್ಪಣಿಯ ರಾಜಕಾರಣ ಮಾಡುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್‌ಗೆ ಈಗ ಉತ್ತಮ ವಾತಾವರಣ ಇದೆ. ಕಳೆದ ಬಾರಿಗಿಂತ ಈ ಬಾರಿ ಜೆಡಿಎಸ್‌ ಶೇ 15ರಷ್ಟು ಮತ ಪ್ರಮಾಣವು ಹೆಚ್ಚಾಗಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಬೇಸತ್ತ ಜನತೆ ಜೆಡಿಎಸ್‌ದತ್ತ ಬರುತ್ತಿದ್ದಾರೆ ಎಂದರು.

‘ಸದ್ಯ ಯಾರಿಗೂ ಬಹುಮತ ಬಾರದ ಪರಿಸ್ಥಿತಿ ಇದೆ. ನಾವು ಕಿಂಗ್ ಆಗಲು ಹೊರಟಿದ್ದೇವೆ. ಅನಿವಾರ್ಯ ಎದುರಾದರೆ ಕಿಂಗ್ ಮೇಕರ್ ಕೂಡಾ ಆಗುತ್ತೇವೆ’ ಎಂದ ಅವರು, ‘ಜನತಾ ಪರಿವಾರ ಬಿಟ್ಟು ಹೋದವರಿಗೆ ಈಗ ಪಶ್ವಾತ್ತಾಪವಾಗಿದೆ. ಜನತಾ ಪರಿವಾರ ಬಿಟ್ಟು ಹೋದವರನ್ನೆಲ್ಲ ಇಂದು ಒಂದು ಗೂಡಿಸುತ್ತಿದ್ದೇವೆ, ಅದರ ಪ್ರತಿಫಲ ಈಗ ಸಿಗುತ್ತದೆ’ ಎಂದರು.

ADVERTISEMENT

‘ಚುನಾವಣೆಯಲ್ಲಿ ವ್ಯಕ್ತಿ, ಧ್ಯೇಯೋದ್ದೇಶ, ಜಾತಿ, ಹಣ, ಎಲ್ಲವೂ ಮುಖ್ಯ ಎಂಬುದು ಕೂಡ ಸತ್ಯ. ಆದರೆ ಜನರು ಬುದ್ಧಿವಂತರು ಸ್ಪಷ್ಟ ನಿರ್ಧಾರ ನೀಡುತ್ತಾರೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಅದು ಪ್ರಾದೇಶಿಕ ಪಕ್ಷದ ನೆಲೆಗೆ ಬಂದಿರುವುದನ್ನು ಸ್ವತಃ ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಿದ್ದಾರೆ’ ಎಂದರು.

‘ಮಹದಾಯಿ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಟಕವಾಡುತ್ತಿದ್ದಾರೆ. ಬಿಜೆಪಿ -ಕಾಂಗ್ರೆಸ್ ಕೆಸರೆರಚಾಟ ಮಾಡುತ್ತಿದ್ದಾರೆ. ರಾಜಕಾರಣಿಗಳಿಗೆ ಕನಿಷ್ಠ ಜ್ಞಾನವಾದರೂ ಇರಬೇಕು. ಶೇ 90ರಷ್ಟು ಮಾತಿಗೆ ಬದ್ಧರಾಗಿರಬೇಕು. ಹೋಲ್ ಸೇಲ್ ಆಗಿ ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳಬಾರದು’ ಎಂದು ವಾಗ್ದಾಳಿ ನಡೆಸಿದರು.

ಶ್ರೀಮಂತ ಪಾಟೀಲ ಹರಕೆಯ ಕುರಿ: ‘ಎಲ್ಲಿಯೋ ಇದ್ದ ಶ್ರೀಮಂತ ಪಾಟೀಲರಿಗೆ ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆಗೆ ಹಲವಾರು ರೀತಿಯ ಸಹಾಯ ಸಹಕಾರ ನೀಡಿ ಎರಡು ಬಾರಿ ವಿಧಾನ ಸಭೆಗೆ ಹಾಗೂ ಒಂದು ಬಾರಿ ಲೋಕಸಭೆಗೆ ಟಿಕೆಟ್‌ ಕೊಟ್ಟು ಸ್ಪರ್ಧೆಗೆ ಇಳಿಸಿದ್ದರು. ಆದರೆ ಇಂದು ಸಕ್ಕರೆ ಕಾರ್ಖಾನೆಗೆ ಸರ್ಕಾರದಿಂದ ಬರಬೇಕಾದಂತ ಸಬ್ಸಿಡಿ ಬಾರದಿರುವುದರಿಂದ ಕಾಂಗ್ರೆಸ್ ಪಕ್ಷ ಸೇರುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸನವರು ಶ್ರೀಮಂತ ಪಾಟೀಲರಿಗೆ ಟಿಕೇಟ ನೀಡುವುದಾಗಿ ಹೇಳಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತಿದ್ದಾರೆ. ಇವರು ಕಾಂಗ್ರೆಸನ ಹರಕೆಯ ಕುರಿಯಾಗಲಿದ್ದಾರೆ’ ಎಂದರು.

ಬರುವವರಿಗೆ ಸ್ವಾಗತ: ‘ಜಿಲ್ಲೆಯ ಇಬ್ಬರು ಪ್ರಭಾವಿ ಮಾಜಿ ಸಚಿವರಾದ ಉಮೇಶ ಕತ್ತಿ ಹಾಗೂ ಸತೀಶ ಜಾರಕಿಹೊಳಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆಂಬ ವದಂತಿಗಳ ಬಗ್ಗೆ ಮಾತನಾಡಿದ ಅವರು ಇಬ್ಬರು ಜನತಾ ಪರಿವಾರದವರೇ ತಮ್ಮ ಮನೆಗೆ ಬಂದರೆ ಸ್ವಾಗತಿಸಿಕೊಳ್ಳುತ್ತೇವೆ’ ಎಂದರು.

‘ಶ್ರೀಮಂತ ಪಾಟೀಲ ಪಕ್ಷ ತೊರದರೇನಾಯಿತು ಜೆಡಿಎಸ್ ಕಾರ್ಯಕರ್ತರು ಸ್ವಾಭಿಮಾನಿಗಳು ಬರುವ ಚುನಾವಣೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರುರೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.