ADVERTISEMENT

ರಾಯಬಾಗ: ‘ಕೈ’ ಟಿಕೆಟ್‌ಗೆ ತೀವ್ರ ಪೈಪೋಟಿ

ಎಂ.ಮಹೇಶ
Published 9 ಫೆಬ್ರುವರಿ 2018, 9:15 IST
Last Updated 9 ಫೆಬ್ರುವರಿ 2018, 9:15 IST
ದುರ್ಯೋಧನ ಐಹೊಳೆ
ದುರ್ಯೋಧನ ಐಹೊಳೆ   

ಬೆಳಗಾವಿ: ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಒಂದಾಗಿರುವ ರಾಯಬಾಗದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಪೈಪೋಟಿ ಕಂಡುಬಂದಿದೆ. ಪ್ರಸ್ತುತ ಕ್ಷೇತ್ರವನ್ನು ಬಿಜೆಪಿಯ ದುರ್ಯೋಧನ ಐಹೊಳೆ ಪ್ರತಿನಿಧಿಸುತ್ತಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೂ ಕಮಲ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಕಂಡುಬಂದಿಲ್ಲ.

2008ರ ಚುನಾವಣೆಯಲ್ಲಿ, ಮಾಜಿ ಸಚಿವ ಕಾಂಗ್ರೆಸ್‌ನ ಓಂಪ್ರಕಾಶ ಕಣಗಲಿ ವಿರುದ್ಧ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರದೀಪ ಮಾಳಗಿ ವಿರುದ್ಧ ಕಡಿಮೆ ಅಂತರದಿಂದ (700) ಗೆಲುವು ಸಾಧಿಸಿದ್ದರು. 3ನೇ ಬಾರಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಗೆಲವಿನ ಅಂತರ ಹೆಚ್ಚಿಸಿಕೊಳ್ಳಬೇಕು ಎಂದು ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಪ್ರತಿ ಪಕ್ಷದಲ್ಲಿದ್ದರೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದ ಮೇಲೆ ಪ್ರಭಾವ ಹೊಂದಿರುವ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ವಿವೇಕರಾವ ಪಾಟೀಲ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಣಯ ಪಾಟೀಲ ತಮ್ಮವರಿಗೆ ಟಿಕೆಟ್‌ ಕೊಡಿಸುವ ಮೂಲಕ, ಹಾಲಿ ಶಾಸಕರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ತಂತ್ರ ರೂಪಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರೆಸಿ ಸಮಾವೇಶ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶಿಸುವ ಯತ್ನ ಮಾಡಿದ್ದಾರೆ. ಇವರಿಗೆ ಸಚಿವ ರಮೇಶ ಜಾರಕಿಹೊಳಿ ಬೆಂಬಲವಾಗಿ ನಿಂತಿದ್ದಾರೆ.

ಕಾರ್ಯಕ್ರಮಗಳ ಪ್ರಚಾರ: ಅಭ್ಯರ್ಥಿಗಳ ಪಟ್ಟಿ ಹೆಚ್ಚುತ್ತಿರುವುದು ಕಾಂಗ್ರೆಸ್‌ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಮೇಶ ಜಾರಕಿಹೊಳಿ ಹಾಗೂ ವಿವೇಕ
ರಾವ ಪಾಟೀಲ ಬೆಂಬಲಿತ ಪ್ರದೀಪ ಮಾಳಗಿ ಮಾತ್ರವಲ್ಲದೇ, ಮಹಾವೀರ ಮೋಹಿತೆ, ಶಿವಕುಮಾರ ಕಿರಣಗಿ ಕೂಡ ಆಕಾಂಕ್ಷಿಗಳಾಗಿದ್ದಾರೆ. ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿರುವ ಮಹಾವೀರ ಮೋಹಿತೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

‘ಹಿಂದಿನಿಂದಲೂ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುತ್ತಿದ್ದೇನೆ. ಇದನ್ನು ಪರಿಗಣಿಸಿ ನನಗೆ ಟಿಕೆಟ್‌ ಕೊಡುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಪ್ರಚಾರ ಮಾಡುವಂತೆಯೂ ಸೂಚಿಸಿದ್ದಾರೆ. ಒಂದು ಮತಗಟ್ಟೆಗೆ 10 ಮಂದಿಯನ್ನು ನೇಮಿಸಿ ಸಂಘಟನೆ ಮಾಡುತ್ತಿದ್ದೇವೆ. ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದೇವೆ’ ಎಂದು ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಬಲವಂತರಾವ್‌ ಸತ್ಯಪ್ಪ ಹಂಚಿನಾಳಕರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಸಿದ್ದು ನಾನು ಎಂದು ಶಾಸಕರು ಹೇಳಿಕೊಳ್ಳುತ್ತಿದ್ದಾರೆ. ಅನುದಾನ ಒದಗಿಸಿದ್ದು ನಾವು ಎಂದು ಕಾಂಗ್ರೆಸ್‌ನವರು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಸಮೀಪಿಸುತ್ತಿದ್ದಂತೆ ಪ್ರಚಾರ ಕಾರ್ಯ ಜೋರಾಗಿ ನಡೆದಿದೆ.

ಹೋದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಪ್ರಬಲ ಪೈಪೋಟಿ ನೀಡಿದ್ದ ಪ್ರದೀಪ ಮಾಳಗಿ ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಅಬಾಜಿ
ಪ್ರತಿಷ್ಠಾನದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರ ಸಂಪರ್ಕದಲ್ಲಿ ಇರಲು ಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕುರುಬ ಹಾಗೂ ಮಾದಿಗ ಸಮುದಾಯದ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.