ADVERTISEMENT

ಸರ್ದಾರ್‌ ಕಾಲೇಜು: ಮೂಲಸೌಲಭ್ಯ ಕಲ್ಪಿಸಿ

ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 15:40 IST
Last Updated 12 ಡಿಸೆಂಬರ್ 2018, 15:40 IST
ಬೆಳಗಾವಿಯ ಸರ್ದಾರ್‌ ಕಾಲೇಜಿಗೆ ಮೂಲಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಬುಧವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬೆಳಗಾವಿಯ ಸರ್ದಾರ್‌ ಕಾಲೇಜಿಗೆ ಮೂಲಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಬುಧವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಬೆಳಗಾವಿ:ಸರ್ದಾರ್‌ ಪಿಯು ಹಾಗೂ ಪ್ರಥಮದರ್ಜೆ ಕಾಲೇಜಿನಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಬುಧವಾರ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

‘ಇಲ್ಲಿ 3ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕೊಠಡಿಗಳ ಕೊರತೆ ಇರುವುದರಿಂದಾಗಿ, ಬೆಳಿಗ್ಗೆ ಪಿಯು ತರಗತಿಗಳು ಹಾಗೂ ಮಧ್ಯಾಹ್ನದ ನಂತರ ಪದವಿ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ ಪಠ್ಯಕ್ರಮ ಪೂರ್ಣಗೊಳಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಸರ್ಕಾರ ಕೊಠಡಿಗಳನ್ನು ನಿರ್ಮಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

‘ಸರಸ್ವತಿ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿಯರಿಗೆ ಬೆಳಿಗ್ಗೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ನಂತರ ತರಗತಿಗಳನ್ನು ನಡೆಸಲಾಗುತ್ತಿದೆ. ಕಾಲೇಜಿನ ಕಟ್ಟಡ ನೂರು ವರ್ಷಕ್ಕಿಂತಲೂ ಹಳೆಯದು. ಯಾವ ಸಮಯದಲ್ಲಾದರೂ ಕುಸಿದು ಬೀಳುವ ಭಯದಲ್ಲಿಯೇ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತುಕೊಳ್ಳುವಂತಾಗಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲ. ಉಢಾಪೆ ಉತ್ತರ ಹೇಳಿ ಜಾರಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರಿ ಬಿ.ಇಡಿ ಕಾಲೇಜಿನ ಹಾಸ್ಟೆಲ್‌ ಕೊಠಡಿಗಳು ಶಿಥಿಲಗೊಂಡಿವೆ. ಕಿಟಕಿ, ಬಾಗಿಲು ಮುರಿದಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಲ್ಲಿರುವವರು ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ. ಸಂಬಂಧಿಸಿದ ಸಚಿವರು, ಶಾಸಕರು ಇತ್ತ ಗಮನಹರಿಸಬೇಕು. ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಪೃಥ್ವಿಕುಮಾರ, ಭರತ, ಶಂಕರ, ರೋಹಿತ, ಸಚಿನ್, ಅನುದೀಪ ಕುಲಕರ್ಣಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.