ಹೀರೆಬಾಗೇವಾಡಿ: ಸಮೀಪದ ಬಡೆಕೊಳ್ಳ ಕ್ರಾಸ್ ಬಳಿ, ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸರಣಿ ಅಪಘಾತ ಸಂಭವಿಸಿದೆ. ಎರಡು ಲಾರಿ, ಒಂದು ಕಂಟೇನರ್ ವಾಹನ, ಮೂರು ಸರ್ಕಾರಿ ಬಸ್ ಹಾಗೂ ಬೈಕ್ ಜಖಂಗೊಂಡಿವೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ ಅಡಿಗೆ ಸಿಲುಕಿದ ಬೈಕ್ ಸವಾರ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆ.
ಈ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಡಿದಾದ ಇಳಿಜಾರು ಹೊಂದಿದೆ. ಇಳಿಜಾರಿನಲ್ಲೇ ತಿರುವುಗಳೂ ಇವೆ. ತಿರುವಿನಲ್ಲಿ ವೇಗವಾಗಿ ಸಾಗಿದ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿತು. ಇದರಿಂದ ಹಿಂದಿದ್ದ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಅದರ ಹಿಂದಿದ್ದ ಲಾರಿ ಡಿಕ್ಕಿಹೊಡೆಯಿತು. ಅದರ ಹಿಂದೆ ಬರುತ್ತಿದ್ದ ಎರಡು ಬಸ್‌ಗಳೂ ವೇಗವಾಗಿ ಸಾಗುತ್ತಿದ್ದ ಕಾರಣ, ಒಂದಕ್ಕೊಂದು ಹಿಂಬದಿಯಲ್ಲಿ ಡಿಕ್ಕಿ ಹೊಡೆದವು.
ಇದೇ ಸಮಯಕ್ಕೆ ವೇಗವಾಗಿ ಹೊರಟಿದ್ದ ರಾಜಹಂಸ ಬಸ್ಸನ್ನು ಅಪಘಾತದಿಂದ ತಪ್ಪಿಸಲು ಚಾಲಕ ಎಡಕ್ಕೆ ತಿರುಗಿಸಿದ. ಮುಂದೆ ಸಾಗುತ್ತಿದ್ದ ಬೈಕಿಗೆ ಬಸ್ ಗುದ್ದಿತು. ಬೈಕ್ ಸವಾರ ಕೆಳಕ್ಕೆ ಬಿದ್ದರು. ಹೆಲ್ಮೆಟ್ ಧರಿಸಿದ್ದರಿಂದ ಅವರ ಪ್ರಾಣ ಉಳಿಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದ ಕಾರಣ ಒಂದು ತಾಸು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ವಾಹನಗಳು ಸರ್ವಿಸ್ ರಸ್ತೆಯ ಮೂಲಕ ಸಂಚರಿಸಿದವು. ಸ್ಥಳಕ್ಕೆ ಧಾವಿಸಿದ ಹಿರೇಬಾಗೇವಾಡಿ ಪೊಲೀಸರು ಕ್ರೇನ್‌ಗಳ ಸಹಾಯದಿಂದ ಎಲ್ಲ ವಾಹನಗಳನ್ನು ತೆರವು ಮಾಡಿದರು. ನಂತರ ಸಂಚಾರ ಸುಗಮಗೊಂಡಿತು.
‘ಕಂಟೇನರ್ ಹೆದ್ದಾರಿಯಲ್ಲಿ ಬಿದ್ದಿರುವುದು ನೋಡಿ ನನ್ನ ಬೈಕ್ ವೇಗ ಕಡಿಮೆ ಮಾಡಿದೆ. ಅಷ್ಟರಲ್ಲಿಯೇ ಹಿಂಬಂದಿಯಿಂದ ಬರುತ್ತಿದ್ದ ರಾಜಹಂಸ ಬಸ್ ನಿಯಂತ್ರಣವಾಗದೇ ನನಗೆ ಹಾಯ್ದಿದ್ದರಂದ ಬಸ್ ಕೆಳಗಡೆ ನೂಕಲ್ಪಟ್ಟೆ. ಏನೂ ಆಗದೇ ಹೆಲ್ಮೆಟ್‌ನಿಂದ ಬಚಾವಾದೆ’ ಎಂದು ಬೈಕ್ ಸವಾರ, ಕಲಾರಕೊಪ್ಪದ ಸಂತೋಷ ಬಾಬು ಕರೋಶಿ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.