ADVERTISEMENT

ಜೊತೆಯಲ್ಲಿ ಸುತ್ತಾಡುತ್ತಿದ್ದ ಮುಸ್ಲಿಂ ಮಹಿಳೆ, ಹಿಂದೂ ಯುವಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 14:19 IST
Last Updated 17 ಅಕ್ಟೋಬರ್ 2021, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ನಗರದಲ್ಲಿ ಹಿಂದೂ ಯುವಕ–ಮುಸ್ಲಿಂ ಮಹಿಳೆ ಜೊತೆಯಾಗಿ ಸುತ್ತಾಡುತ್ತಿದ್ದುದ್ದಕ್ಕೆ ಕೆಲ ಕಿಡಿಗೇಡಿಗಳು ಆಕ್ಷೇಪ ವ್ಯಕ್ತಪಡಿಸಿ, ಹಲ್ಲೆ ನಡೆಸಿರುವ ಬಗ್ಗೆ ಇಲ್ಲಿನ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ 29 ವರ್ಷದ ಮಹಿಳೆ (ಗೃಹಿಣಿ) ದೂರು ನೀಡಿದ್ದು, 20–25 ಮಂದಿ ಅಪರಿಚಿತರ ವಿರುದ್ಧ ಅ.14ರಂದು ಪ್ರಕರಣ ದಾಖಲಾಗಿದೆ. ಅವರೊಂದಿಗೆ ರಾಯಬಾಗ ತಾಲ್ಲೂಕಿನ ಚಿಂಚಲಿಯ ಯುವಕ (ಎಫ್‌ಐಆರ್‌ನಲ್ಲಿ ವಯಸ್ಸು ನಮೂದಿಸಿಲ್ಲ) ಇದ್ದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣ ಇದಾಗಿದೆ.

‘ಮಹಿಳೆ ಹಾಗೂ ಯುವಕ ಪರಿಚಯಸ್ಥರಾಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಂದ ಸಾಲ ಪಡೆದುಕೊಳ್ಳುವುದಕ್ಕಾಗಿ ಮಹಿಳೆ ನಗರಕ್ಕೆ ಬಂದಿದ್ದರು. ಇಬ್ಬರೂ ಯಾವುದಾದರೂ ಉದ್ಯಾನದಲ್ಲಿ ಕುಳಿತು ಮಾತನಾಡೋಣ ಎಂದು ಆಟೊರಿಕ್ಷಾವೊಂದನ್ನು ಹತ್ತಿದ್ದಾರೆ. ಇಬ್ಬರೂ ಅನ್ಯ ಧರ್ಮಕ್ಕೆ ಸೇರಿದ್ದನ್ನು ಗಮನಿಸಿದ ರಿಕ್ಷಾ ಚಾಲಕ ಉದ್ಯಾನದ ಬಳಿಗೆ ಕರೆದೊಯ್ಯುವುದಾಗಿ ತಿಳಿಸಿ, ಅಮನ್‌ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ನಾಲ್ವರನ್ನು ಹತ್ತಿಸಿಕೊಂಡಿದ್ದಾನೆ. ಅವರು ಮುಸ್ಲಿಂ ಆಗಿ ಹಿಂದೂ ಯುವಕನೊಂದಿಗೆ ಸುತ್ತಾಡುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಯುವಕನ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿ, ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

‘ಬಳಿಕ ಅವರನ್ನು ಅಮನ್‌ನಗರದ ಹೊಲವೊಂದಕ್ಕೆ ಕರೆದೊಯ್ದಿದ್ದಾರೆ. ಆ ವೇಳೆಗಾಗಲೇ ದ್ವಿಚಕ್ರವಾಹನದಲ್ಲಿ ಬಂದಿದ್ದ 10ರಿಂದ 15 ಮಂದಿಯೂ ಸೇರಿಕೊಂಡು ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ರಕ್ತಹೆಪ್ಪುಗಟ್ಟುವಂತೆ ಗಾಯಗಳಾಗಿವೆ. ಅವರು ನಮ್ಮನ್ನು ಕೊಲ್ಲಲು ಯತ್ನಿಸಿದ್ದಲ್ಲದೇ, ಯುವಕನ ಬಳಿ ಇದ್ದ ಅಂದಾಜು ₹ 20ಸಾವಿರ ಮೌಲ್ಯದ ಮೊಬೈಲ್‌ ಫೋನ್, ₹ 50ಸಾವಿರ, ಆಧಾರ್‌ ಕಾರ್ಡ್‌ ಮತ್ತು ಎಟಿಎಂ ಕಾರ್ಡ್‌ ಕಸಿದುಕೊಂಡಿದ್ದಾರೆ’ ಎಂದು ದೂರು ನೀಡಲಾಗಿದೆ.

ಹಲ್ಲೆ ನಡೆಸಿದವರಲ್ಲಿ ಬಹುತೇಕರು ಆಟೊರಿಕ್ಷಾ ಚಾಲಕರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪ್ರಕರಣದ ತನಿಖೆ ನಡೆಯುತ್ತಿದೆ. ಆಟೊರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಡಿಸಿಪಿ ವಿಕ್ರಂ ಅಮಟೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.