ಹುಕ್ಕೇರಿ: ‘ತಾಲ್ಲೂಕಿನ 57 ಗ್ರಾಮಗಳ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಮತ್ತು ಮನೆ ಕಟ್ಟಿಕೊಂಡಿರುವ ಜನರಿಗೆ ನ್ಯಾಯ ಒದಗಿಸಲು ಶ್ರಮಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಇಲ್ಲಿನ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆವರಣದಲ್ಲಿ ಬುಧವಾರ ನಡೆದ ಬಗರ್‌ಹುಕುಂ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರ ಅಹವಾಲು ಸಭೆಯಲ್ಲಿ ಅವರು ಮಾತನಾಡಿದರು.
‘ಸಮಿತಿಯಿಂದ ಈವರೆಗೆ ಒಬ್ಬರಿಗೂ ಹಕ್ಕುಪತ್ರ ವಿತರಿಸಿಲ್ಲ. 1,500ಕ್ಕೂ ಅಧಿಕ ಅರ್ಜಿ ಬಂದಿದ್ದು, ತಾಂತ್ರಿಕ ಕಾರಣಗಳಿಂದ ಸರ್ಕಾರದ ಮಟ್ಟದಲ್ಲಿ ತಿರಸ್ಕೃತಗೊಂಡಿವೆ. ಸಭೆ ಮೂಲಕ ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಅವರಿಗೆ ನ್ಯಾಯ ಒದಗಿಸಲಾಗುವುದು’ ಎಂದರು.
‘ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಬಡವರ ಪರವಾಗಿದೆ. ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಬಗರ್‌ಹುಕುಂ ಸಮಿತಿ ಸದಸ್ಯರಾದ ಕೆಂಪಣ್ಣ ಶಿರಹಟ್ಟಿ, ದ್ರಾಕ್ಷಾಯಿಣಿ ಏಶಿ, ಸದಾನಂದ ಗುಡಿಕಡೆ, ಸಿಕಂದರ್ ಸನದಿ, ಭಾರತಿ ಬೆಣ್ಣಿ, ಶರದ ಪಾಟೀಲ, ತಹಶೀಲ್ದಾರ್ ಮಂಜುಳಾ ನಾಯಕ, ಗ್ರೇಡ್-2 ತಹಶೀಲ್ದಾರ್ ಪ್ರಕಾಶ ಕಲ್ಲೋಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ, ತನ್ವೀನ್ ಡಾಂಗೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.