ADVERTISEMENT

‘ಯೂರಿಯಾ ಕಾಳಸಂತೆಯಲ್ಲಿ ಮಾರಾಟ’

ಟಿಎಪಿಸಿಎಂಎಸ್‌ಗೆ ಮುತ್ತಿಗೆ ಹಾಕಿ, ರಸ್ತೆ ತಡೆದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:11 IST
Last Updated 5 ಆಗಸ್ಟ್ 2025, 6:11 IST
ಸವದತ್ತಿಯ ಟಿಎಪಿಸಿಎಂಎಸ್ ಎದುರು ರಸ್ತೆ ತಡೆದು ರೈತರು ಪ್ರತಿಭಟಿಸಿದರು
ಸವದತ್ತಿಯ ಟಿಎಪಿಸಿಎಂಎಸ್ ಎದುರು ರಸ್ತೆ ತಡೆದು ರೈತರು ಪ್ರತಿಭಟಿಸಿದರು   

ಪ್ರಜಾವಾಣಿ ವಾರ್ತೆ

ಸವದತ್ತಿ: ‘ರೈತರ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. ಇಲ್ಲಿನ ಕೃಷಿ ಅಧಿಕಾರಿಗಳು ಇದಕ್ಕೆ ನೇರ ಕಾರಣರಾಗಿದ್ದಾರೆ. ಲಿಂಕ್ ಗೊಬ್ಬರ ನೀಡಿ ರೈತರಿಗೆ ಹೊರೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ತಾಲ್ಲೂಕು ವ್ಯವಸಾಯೊತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ಕ್ಕೆ ಮುತ್ತಿಗೆ ಹಾಕಿದ ರೈತರು, ರಸ್ತೆ ತಡೆದು ಪ್ರತಿಭಟಿಸಿದರು.

ಭಾರತೀಯ ಕಿಸಾನ ಸಂಘದ ಪ್ರಾಂತ ಸದಸ್ಯ ಶಿವಾನಂದ ಸರದಾರ ಮಾತನಾಡಿ, ‘ರೈತರ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೂ ಕೃಷಿ ಅಧಿಕಾರಿ ಎಸ್.ವಿ. ಪಾಟೀಲ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಲಿಂಕ್ ಕಡ್ಡಾಯವಿಲ್ಲದ ಕೇಂದ್ರಗಳ ಮೇಲೆ ಪ್ರಕರಣ ದಾಖಲಿಸಿಲ್ಲ. ಅಧಿಕಾರಿಗಳು ಹಾಗೂ ಕಂಪನಿಗಳ ಹೊಂದಾಣಿಕೆಯಿಂದ ರೈತರ ಕತ್ತು ಹಿಸುಕಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಯೂರಿಯಾ, ಡಿಎಪಿ, ಪೊಟ್ಯಾಶ್ ಗೊಬ್ಬರ ಹಾಗೂ ಕೀಟನಾಶಕಗಳ ಅಭಾವವಿದೆ. ಸಂಗ್ರಹವೂ ಇಲ್ಲ. ಒತ್ತಾಯಪೂರ್ವಕ ಕೊಡುವ ನ್ಯಾನೊ ಹಾಗೂ ಲಿಂಕ್ ಗೊಬ್ಬರ ನಿಲ್ಲಬೇಕಿದೆ. ಅಭಾವ ತೋರಿಸಿ ಹೆಚ್ಚಿನ ದರಕ್ಕೆ ಮಾರಾಟ ನಡೆಸಿದ ಅಧಿಕಾರಿಗಳಿಗೆ ರೈತ ಕುಟುಂಬದಿಂದ ಧಿಕ್ಕಾರವಿರಲಿದೆ’ ಎಂದರು.

‘ಸಮಸ್ಯೆಗೆ ಸ್ಪಂದಿಸುವಲ್ಲಿ ಕೃಷಿ ಅಧಿಕಾರಿಗಳು ಹಾಗೂ ಎರಡೂ ಸರ್ಕಾರಗಳೂ ವಿಫಲವಾಗಿವೆ. ಪರಸ್ಪರ ಆರೋಪಗಳಿಂದ ರೈತರ ಜೀವನ ಹಾಳಾಗಿದೆ. ಗೊಬ್ಬರ ಅಭಾವದಿಂದ ಆದ ಬೆಳೆಹಾನಿ, ಬೆಳೆಕುಂಠಿತಕ್ಕೆ ಪರಿಹಾರ ನೀಡಬೇಕು. ಸಕಾಲಕ್ಕೆ ಮಳೆ ಬಾರದೇ ಹದಕ್ಕೆ ಬಂದಾಗ ಗೊಬ್ಬರವಿಲ್ಲದೇ ಬೆಳೆ ನಾಶವಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಸಂಪಗಾಂವಿ ಮಾತನಾಡಿ, ‘ತಾಲ್ಲೂಕಿನಾದ್ಯಾಂತ 11 ಸಾವಿರ, ಯರಗಟ್ಟಿಯಲ್ಲಿ 10 ಸಾವಿರ ಹೆಕ್ಟೇರ ಗೋವಿನಜೋಳ ಬಿತ್ತನೆ ಆಗಿದೆ. ಈ ಕುರಿತು ಗೊಬ್ಬರ ಸಂಗ್ರಹ ಎಷ್ಟಿರಬೇಕೆನ್ನುವ ಮಾಹಿತಿ ಕೃಷಿ ಅಧಿಕಾರಿಗಳಲ್ಲಿಲ್ಲ. ಟಿಎಪಿಸಿಎಂಎಸ್, ಪಿಕೆಪಿಎಸ್ ಹಾಗೂ ಖಾಸಗಿ ಮಾರಾಟ ಕೇಂದ್ರಗಳಲ್ಲಿ ಗೊಬ್ಬರ ಸಿಗುತ್ತಿಲ್ಲ. ಲಿಂಕ್ ನೀಡದೇ ಅವಶ್ಯಕ ಗೊಬ್ಬರ ಪೂರೈಸಿ. ತಾಲ್ಲೂಕಿನಾದ್ಯಂತ ಅಭಾವ ಸೃಷ್ಠಿಸಿ ಲಾಭ ಪಡೆಯಲೆತ್ನಿಸಿದ್ದಾರೆ’ ಎಂದು ಆರೋಪಿಸಿದರು.

ಶ್ರೀಕಾಂತ ಹಟ್ಟಿಹೊಳಿ, ಬಸವರಾಜ ಬಿಜ್ಜೂರ, ಸುರೇಶ ಅಂಗಡಿ, ಮಲ್ಲಪ್ಪ ಹುಂಡನವರ, ಕಲ್ಲನಗೌಡ ಪಾಟೀಲ, ಶಿವಾನಂದ ಧೂಪದಾಳ, ಅಪ್ಪಾಸಾಬ ಹಲೀಮನವರ, ಶೋಭಾ ಪಾಟೀಲ, ಮಾಲಾ ಗುರವನ್ನವರ, ಅಖಿಲಾ ತಿವಾರಿ ಹಾಗೂ ರೈತ ಪ್ರಮುಖರು ಇದ್ದರು.

4ಸವದತ್ತಿ2ಬಿ: ಗೊಬ್ಬರ ಕೊರತೆ ಕಾರಣ ಕೃಷಿ ಎಡಿ ಪಾಟೀಲರನ್ನು ರೈತರು ತರಾಟೆಗೆ ತೆಗೆದುಕೊಂಡರು.

Cut-off box - ‘ಮಲಪ್ರಭೆ ನೀರು ಕೈಗಾರಿಕೆಗೆ: ಖಂಡನೀಯ’ ‘ಮಲಪ್ರಭಾ ನೀರನ್ನು ಕೈಗಾರಿಕಾ ಪ್ರದೇಶಗಳಿಗೆ ಪೂರೈಸುವುದು ಖಂಡನೀಯ. ಅಚ್ಚುಕಟ್ಟು ಪ್ರದೇಶದ ಜನತೆಗೆ ಮೊದಲ ಆದ್ಯತೆಯಿರಲಿ. ಇಲ್ಲಿಂದ ಶಿಗ್ಗಾಂವಿವರೆಗೂ ನೀರು ಹರಿಸುವ ತಂತ್ರ ನಡೆದಿದೆ. ಗ್ರೀನ್ ಕೋ ಕಂಪನಿ 1.75 ಟಿಎಂಸಿ ನೀರನ್ನು ಮಲಪ್ರಭೆಯಿಂದ ಬಳಸಲು ಅನುಮತಿ ನೀಡಿದ್ದು ಏತಕ್ಕೆ? 400 ಎಕರೆ ಅರಣ್ಯ ಇಲಾಖೆಯಲ್ಲಿ ಯೋಜನೆ ಮಾಡಿರುವ ಉದ್ದೇಶವೇನು? ಸುಪ್ರಿಂ ಕೋರ್ಟ್‌ವರೆಗೂ ಹೋರಾಟ ನಡೆಸಿದರೂ ನಮಗೆ ನೀರು ಸಿಗುತ್ತಿಲ್ಲ. ಸೋಮಾಪುರ ಅರಣ್ಯ ಪ್ರದೇಶದಲ್ಲಿ ಗುಡ್ಡ ಒಡೆಯಲು ಸ್ಫೋಟಕ ಬಳಸಿದ ಕಾರಣ ಅಣೆಕಟ್ಟು ಹಾಗೂ ಸೋಮೇಶ್ವರ ದೇವಸ್ಥಾನಗಳು ಹಾನಿಗೊಳಪಡಲಿವೆ’ ಎಂದು ಶಿವಾನಂದ ಸರದಾರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.