ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ
ಬೆಳಗಾವಿ: ‘ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಸೋರುತ್ತಿದೆ. ಸರಿಯಾಗಿ ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣ. ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಸ್ಪತ್ರೆ ವ್ಯವಸ್ಥೆ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಹಳೆಯದಾಗಿದೆ. ಎಲ್ಲೆಂದರಲ್ಲಿ ಸೋರುತ್ತಿದೆ. ಕಟ್ಟಡದ ತುಂಬ ವಿದ್ಯುತ್ ಪರಿಕರಗಳಿವೆ. ನೀರು ಸೋರಿ ಯಾವಾಗ ಬೇಕಾದರೂ ಅವಘಡ ಸಂಭವಿಸಬಹುದು. ಇದೆಲ್ಲವನ್ನೂ ಅಧಿಕಾರಿಗಳು ಗಮನಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ, ನಿರ್ದೇಶಕ, ಆಸ್ಪತ್ರೆ ನಿರ್ದೇಶಕರನ್ನು ಭಾಗಿದಾರರನ್ನಾಗಿ ಮಾಡಿ ನೋಟಿಸ್ ನೀಡಲಾಗುವುದು’ ಎಂದರು.
‘ಔಷಧ ವಿತರಣೆಯಲ್ಲೂ ಪಾರದರ್ಶಕತೆ ಕಂಡುಬಂದಿಲ್ಲ. ರೋಗಿ ಹೆಸರು, ಯಾರಿಗೆ, ಎಷ್ಟು, ಯಾವ ಔಷಧ ಕೊಟ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳಿಲ್ಲ. ಈ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡುವಂತೆ ಸೂಚಿಸಿದ್ದೇನೆ. ಔಷಧ ಸೋರಿಕೆ ಬಗ್ಗೆ ಸಂಬಂಧಿಸಿದವರಿಗೆ ನೋಟಿಸ್ ನೀಡಿ, ಸುಧಾರಿಸಲು ಒಂದು ತಿಂಕಳ ಕಾಲಾವಕಾಶ ನೀಡಲಾಗುವುದು’ ಎಂದರು.
‘ಜಿಲ್ಲೆಯ 250 ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇನೆ. ಅಧಿಕಾರಿಗಳು ಮತ್ತು ಇಲಾಖೆಗಳ ಮೇಲೆ ದಾಖಲಾದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಂಟು ತಂಡಗಳಾಗಿ ಸಾರಿಗೆ ಇಲಾಖೆ, ಅಬಕಾರಿ, ಮಹಾನಗರ ಪಾಲಿಕೆ, ಉಪನೋಂದಣಾಧಿಕಾರಿ ಕಚೇರಿ, ಎಡಿಎಲ್ಆರ್ ಮುಂತಾದ ಕಚೇರಿಗಳಿಗೂ ಭೇಟಿ ನೀಡಿದ್ದೇವೆ’ ಎಂದೂ ತಿಳಿಸಿದರು.
‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಳಂಬ: ತನಿಖೆ’
‘ಬೆಳಗಾವಿಯಲ್ಲಿ ಸಿದ್ಧಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ವಿಳಂಬ ಮಾಡಲಾಗಿದೆ. ಕೆಲವು ಕಾಮಗಾರಿಗಳೂ ಕಳಪೆಯಾಗಿವೆ. ಇದರ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತೇವೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಪ್ರತಿಕ್ರಿಯಿಸಿದರು.
‘ಸರ್ಕಾರದ ಹಣ ಪೋಲಾಗಲು ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ’ ಎಂದೂ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.