ರಾಮದುರ್ಗ: ‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಓದಿದ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟಸಾಧ್ಯ. ಇಂತದ್ದರಲ್ಲಿ ಖಾಸಗಿ ಸಂಸ್ಥೆಗಳು ಉದ್ಯೋಗ ಮೇಳ ನಡೆಸುತ್ತಿವೆ. ಅವುಗಳ ಲಾಭ ಪಡೆದುಕೊಳ್ಳಬೇಕು’ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ರಾಮದುರ್ಗದ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತಿಯಾಗುತ್ತಿದೆ. ಸರ್ಕಾರಿ ಕೆಲಸಕ್ಕೆ ಜೀವನವನ್ನು ಮುಡುಪಾಗಿಡದೇ ಸ್ವಯಂ ಉದ್ಯೋಗಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಹಲವು ದಿನಗಳಿಂದ ರಾಮದುರ್ಗ ಪಟ್ಟಣದಲ್ಲಿ ಗಾರ್ಮೆಂಟ್ಸ್ ಆರಂಭಿಸುವುದಾಗಿ ಹೇಳಿದ್ದೆ. ಆದರೆ, ಕೆಲ ಕಾರಣಗಳಿಂದಾಗಿ ಅದು ಕಾರ್ಯರೂಪಕ್ಕೆ ಬಂದಿಲ್ಲ. ಮುಂದಿನ ವರ್ಷದೊಳಗಾಗಿ ರಾಮದುರ್ಗದಲ್ಲಿ ಗಾರ್ಮೆಂಟ್ಸ್ ಆರಂಭಿಸಿ ಸುಮಾರು 2 ಸಾವಿರ ಉದ್ಯೋಗ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಎಸ್.ಜಿ. ಚಿಕ್ಕನರಗುಂದ, ಜಿ.ಬಿ.ರಂಗನಗೌಡರ, ಜಯರಾಮ್ ಕೋಣಿ, ಪ್ರಾಚಾರ್ಯ ಕಮತಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ, ಮಕ್ಕಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.