ADVERTISEMENT

ಬೆಳಗಾವಿ: 24 ದಿನಗಳಲ್ಲಿ 24 ಬಾಲ್ಯ ವಿವಾಹಗಳಿಗೆ ಬ್ರೇಕ್‌

ಮದುವೆಯಾದ ನಾಲ್ವರು ಬಾಲೆಯರು, ವಧು–ವರನ ಪಾಲಕರ ವಿರುದ್ಧ ಎಫ್‌ಐಆರ್‌

ಇಮಾಮ್‌ಹುಸೇನ್‌ ಗೂಡುನವರ
Published 25 ಏಪ್ರಿಲ್ 2022, 19:30 IST
Last Updated 25 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ನಿರಂತರ ಜಾಗೃತಿ ಹೊರತಾಗಿಯೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಾಲ್ಯವಿವಾಹ ನಿಲ್ಲುತ್ತಿಲ್ಲ. ಅಕ್ಷರ ಕಲಿತು ಸುಂದರ ಬದುಕು ಕಟ್ಟಿಕೊಳ್ಳಬೇಕಿದ್ದ ನಾಲ್ವರು ಬಾಲೆಯರು ಇದೇ ತಿಂಗಳು ‘ಸಪ್ತಪದಿ’ ತುಳಿದಿದ್ದಾರೆ. ಇನ್ನೂ ಅಧಿಕಾರಿಗಳ ಕಣ್ತಪ್ಪಿಸಿ ಮಾಡಲು ಮುಂದಾಗಿದ್ದ 24 ಬಾಲ್ಯವಿವಾಹ ತಡೆಯಲಾಗಿದೆ.

ಕೋವಿಡ್‌ ಹಾವಳಿ ತಗ್ಗಿದ್ದರಿಂದ ಜಿಲ್ಲೆಯಾದ್ಯಂತ ಸಾಲು–ಸಾಲಾಗಿ ಮದುವೆ ಸಮಾರಂಭಗಳು ನಡೆಯುತ್ತಿವೆ. ವಿವಿಧ ಜಾತ್ರಾ–ಮಹೋತ್ಸವಗಳಲ್ಲೂ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಇದರ ಮಧ್ಯೆಯೇ, ಪಾಲಕರು 18 ವರ್ಷ ತುಂಬದಿದ್ದರೂ ತಮ್ಮ ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ನೆರವೇರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.

ಎಲ್ಲೆಲ್ಲಿ ಬಾಲ್ಯವಿವಾಹ?

ADVERTISEMENT

2021–22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 124 ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಡೆದಿದ್ದರು. 16 ಬಾಲ್ಯವಿವಾಹ ನಡೆದಿದ್ದರಿಂದ ವಧು–ವರನ ಪಾಲಕರ ವಿರುದ್ಧ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದರು.

2022ರ ಏ.1ರಿಂದ 24ರವರೆಗೆ ಅಧಿಕಾರಿಗಳು 24 ಬಾಲ್ಯವಿವಾಹಗಳಿಗೆ ಕಡಿವಾಣ ಹಾಕಿದ್ದಾರೆ. ಬೈಲಹೊಂಗಲ ತಾಲ್ಲೂಕಿನಲ್ಲಿ 4, ಗೋಕಾಕ, ಮೂಡಲಗಿ, ಹುಕ್ಕೇರಿ, ಸವದತ್ತಿ ತಾಲ್ಲೂಕುಗಳಲ್ಲಿ ತಲಾ 3, ಚಿಕ್ಕೋಡಿ, ರಾಯಬಾಗದಲ್ಲಿ ತಲಾ 2, ಖಾನಾಪುರ, ಅಥಣಿ, ರಾಮದುರ್ಗ ಹಾಗೂ ಬೆಳಗಾವಿಯಲ್ಲಿ ತಲಾ 1 ಬಾಲ್ಯವಿವಾಹ ತಡೆಯಲಾಗಿದೆ. ಇದೇ 24 ದಿನಗಳ ಅವಧಿಯಲ್ಲೇ ಬೆಳಗಾವಿ ತಾಲ್ಲೂಕಿನಲ್ಲಿ 2, ರಾಮದುರ್ಗ ಮತ್ತು ಚಿಕ್ಕೋಡಿಯಲ್ಲಿ ತಲಾ 1 ಬಾಲ್ಯವಿವಾಹ ನಡೆದಿದ್ದು, ಆಯಾ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮರೆಮಾಚುವ ಪ್ರಯತ್ನ:‘ಈ ಹಿಂದೆ ವಧು–ವರನ ಗ್ರಾಮದಲ್ಲೇ ಬಾಲ್ಯವಿವಾಹ ನಡೆಯುತ್ತಿದ್ದವು. ಆಗ ತ್ವರಿತವಾಗಿ ಮಾಹಿತಿ ಸಿಗುತ್ತಿದ್ದರಿಂದ ದಾಳಿ ನಡೆಸಿ ಬಾಲ್ಯವಿವಾಹ ತಡೆಯುತ್ತಿದ್ದೆವು. ಹಾಗಾಗಿ ಪಾಲಕರೀಗ ಬೆಳಗಾವಿ ಪಕ್ಕದ ಜಿಲ್ಲೆಗಳು ಅಥವಾ ದೂರದ ತಾಲ್ಲೂಕುಗಳಲ್ಲಿ ಬಾಲ್ಯವಿವಾಹ ನೆರವೇರಿಸುತ್ತಿದ್ದಾರೆ. ಕೆಲವರು ನೆರೆಯ ಮಹಾರಾಷ್ಟ್ರದ ದೇವಸ್ಥಾನಗಳಲ್ಲಿ ನಡೆಸುತ್ತಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸದೆ ಸಾಕ್ಷ್ಯಗಳನ್ನು ಮರೆಮಾಚುವ ಪ್ರಯತ್ನ ನಡೆಸುವುದನ್ನು ಗುರುತಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಎಂ. ಬಸವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಏನು ಕಾರಣ?:‘ಬಡತನ, ಅನಾರೋಗ್ಯಕ್ಕೆ ಒಳಗಾಗಿರುವ ಹಿರಿಯರು ಮೊಮ್ಮಕ್ಕಳ ಮದುವೆ ಕಣ್ತುಂಬಿಕೊಳ್ಳಲೆಂಬ ಆಸೆ, ಸಹೋದರಿ ಮದುವೆಯಲ್ಲೇ ಕಿರಿಯ ಸಹೋದರಿಯನ್ನು ಧಾರೆ ಎರೆದುಕೊಡುವುದು ಮತ್ತಿತರ ಕಾರಣಗಳಿಂದ ಪಾಲಕರು ಬಾಲ್ಯವಿವಾಹ ಮಾಡಿಸುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಬಾಲಕರಿಗಿಂತ, ಬಾಲಕಿಯರ ವಿವಾಹವೇ ಹೆಚ್ಚು’ ಎನ್ನುತ್ತಾರೆ ಮಕ್ಕಳ ರಕ್ಷಣಾಧಿಕಾರಿ ಜೆ.ಟಿ. ಲೋಕೇಶ.

ಮಚ್ಚಳಿಕೆ ಬರೆಸಿಕೊಂಡು ಬಿಡುಗಡೆ: ‘ಈಗ ಜಾಗೃತಿ ಮೂಡಿದ್ದರಿಂದ ಸ್ವತಃ ಬಾಲಕಿಯರೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ತಮ್ಮನ್ನು ರಕ್ಷಿಸುವಂತೆ ಕೋರುತ್ತಿದ್ದಾರೆ. ಆಯಾ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಅದನ್ನು ಆಧರಿಸಿ ದಾಳಿ ನಡೆಸಿ, ಬಾಲ್ಯವಿವಾಹ ತಡೆಯುತ್ತಿದ್ದೇವೆ. ಹೀಗೆ ರಕ್ಷಿಸಿದ ಬಾಲಕಿಯರಿಗೆ ಸವದತ್ತಿಯ ಬಾಲಕಿಯರ ಬಾಲಮಂದಿರ ಮತ್ತು ಬೆಳಗಾವಿಯ ತೆರೆದ ತಂಗುದಾಣದಲ್ಲಿ ಆಶ್ರಯ ನೀಡಲಾಗುತ್ತಿದೆ. ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಿ ಆದೇಶಿಸಿದ ನಂತರ(ವಿವಾಹ ನಿಶ್ಚಯಿಸಿದ ದಿನಾಂಕ ಮುಗಿದ ನಂತರ), ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಮಾಹಿತಿ ನೀಡಬೇಕು

ಪಾಲಕರು ಬಾಲ್ಯವಿವಾಹ ಮಾಡಿ ತಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬಾರದು. ಅಧಿಕಾರಿಗಳು ಹಾಗೂ ಎನ್‌ಜಿಒಗಳಿ ಮಾಹಿತಿ ನೀಡಬೇಕು.

–ಎ.ಎಂ. ಬಸವರಾಜ್‌, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.