ADVERTISEMENT

ಬೆಳಗಾವಿ: ಕ್ಯಾಮೆರಾದಲ್ಲಿ ಚಿರತೆ ಸೆರೆಸಿಕ್ಕಿಲ್ಲ- ಅರಣ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 15:35 IST
Last Updated 8 ಆಗಸ್ಟ್ 2022, 15:35 IST
ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಭಾನುವಾರ ಬೋನು ಇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಭಾನುವಾರ ಬೋನು ಇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ   

ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ನಗರದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ ಚಿರತೆ ಇನ್ನೂ ಸೆರೆ ಸಿಕ್ಕಿಲ್ಲ. ಸೋಮವಾರ ಇಡೀ ದಿನ ಧಾರಾಕಾರ ಮಳೆ ಸುರಿದ ಕಾರಣ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು.

ಏತನ್ಮಧ್ಯೆ, ಅರಣ್ಯ ಇಲಾಖೆಯಿಂದ ಅಳವಡಿಸಲಾದ ಕ್ಯಾಮೆರಾದಲ್ಲಿ ಭಾನುವಾರ ರಾತ್ರಿ ಚಿರತೆ ಚಿತ್ರ ಸೆರೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತು. ಇಲ್ಲಿನ ಗಾಲ್ಫ್‌ ಮೈದಾನದಲ್ಲಿ ಅಡಗಿಕೊಂಡ ಚಿರತೆ ತಡರಾತ್ರಿ ಟ್ರ್ಯಾಕ್‌ ಕ್ಯಾಮೆರಾ ಮುಂದೆ ದಾಟಿ ಹೋಗಿದ್ದು ದಾಖಲಾಗಿದೆ ಎಂದೂ ಮೂಲಗಳು ತಿಳಿಸಿದವು. ಆದರೆ, ಇದು ಬೆಳಗಾವಿಯಲ್ಲಿನ ಚಿರತೆಯ ಚಿತ್ರವಲ್ಲ ಎಂದು ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ಚಿರತೆಗೆ ಸಂಬಂಧಿಸಿದಂತೆ ನಕಲಿ ಚಿತ್ರ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳನ್ನು ನಂಬಿ ಜನ ಭಯಪಡುವ ಅಗತ್ಯವಿಲ್ಲ. ಚಿರತೆ ಸೆರೆಗೆ ಇಲಾಖೆಯಿಂದ ಎಲ್ಲ ರೀತಿಯ ಯತ್ನ ನಡೆದಿದೆ’ ಎಂದೂ ಅವರು ತಿಳಿಸಿದರು.

ADVERTISEMENT

ನಾಲ್ಕನೇ ದಿನವೂ ಕಸರತ್ತು: ಆಗಸ್ಟ್‌ 5ರಂದು ಇಲ್ಲಿನ ಜಾಧವ ನಗರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಪೊದೆಯಲ್ಲಿ ಕಣ್ಮರೆಯಾಗಿದೆ. ಆಗಸ್ಟ್‌ 7ರಂದು ಮತ್ತೆ ಗಾಲ್ಫ್‌ ಮೈದಾನದ ಸುತ್ತ ಸುಳಿದಾಡಿದ ಬಗ್ಗೆ ಜನ ಮಾಹಿತಿ ನೀಡಿದರು. ಇದರಿಂದ ಕಳೆದೆರಡು ದಿನಗಳಿಂದ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿ ಗಾಲ್ಫ್‌ ಮೈದಾನದ ಸುತ್ತ ಇನ್ನಿಲ್ಲದಂತೆ ತಡಕಾಡುತ್ತಿದ್ದಾರೆ.

ಈಗಾಗಲೇ 7 ಬೋನುಗಳನ್ನು ಪೊದೆಗಳಲ್ಲಿ ಇರಿಲಾಗಿದೆ. ಸುತ್ತಲಿನ ಮರ ಹಾಗೂ ಕಟ್ಟಡಗಳಿಗೆ 16 ಟ್ರ್ಯಾಪ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾದ ಮುಂದೆ ಯಾವುದೇ ಪ್ರಾಣಿ ಹಾದು ಹೋದರೂ ಅದು ಫೋಟೊ ಕ್ಲಿಕ್ಕಿಸುತ್ತದೆ. ಸುಮಾರು 250 ಎಕರೆ ಪ್ರದೇಶದಲ್ಲಿ ಚಿರತೆ ಓಡಾಡಿರುವ ಸಾಧ್ಯತೆ ಇದೆ ಎಂಬುದು ಅರಣ್ಯಾಧಿಕಾರಿಗಳ ಮಾಹಿತಿ.

ಚಿರತೆ ಚಲನ– ವಲನ ಇದೆ ಎಂದು ಅಂದಾಜಿಸಿದ ಪ್ರದೇಶಗಳ 22 ಶಾಲೆಗಳಿಗೂ ರಜೆ ನೀಡಲಾಗಿದೆ. ಅರಿವಳಿಕೆ ತಜ್ಞರು ಕೂಡ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.