ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಮಾಡಬೇಕು ಎಂಬ ವಿಷಯ ಗುರುವಾರ ಪಾಲಿಕೆಯ ಪರಿಷತ್ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಹಾಗೂ ಕನ್ನಡ ಭಾಷಿಕ ಸದಸ್ಯರ ಮಧ್ಯೆ ವಾಗ್ವಾದ ಉಂಟಾಯಿತು. ಎಂಇಎಸ್‌ನ ಉದ್ಧಟತನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪರಿಷತ್ ಸಭಾಂಗಣಕ್ಕೂ ನುಗ್ಗಲು ಯತ್ನಿಸಿದರು.
ಸಭೆ ಆರಂಭದಲ್ಲಿಯೇ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ, ‘ಕನ್ನಡದ ಜೊತೆ ಮರಾಠಿಯಲ್ಲೂ ನಡಾವಳಿ ನೀಡಬೇಕು. ಭಾಷಾ ಅಲ್ಪಸಂಖ್ಯಾತ ಕಾಯ್ದೆ ಪಾಲಿಸಬೇಕು’ ಎಂದರು. ಇದಕ್ಕೆ ಶಿವಾಜಿ ಮಂಡೋಳಕರ, ವೈಶಾಲಿ ಭಾತಕಾಂಡೆ ಬೆಂಬಲ ವ್ಯಕ್ತಪಡಿಸಿದರು.
ಸಿಟ್ಟಿಗೆದ್ದ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ‘ಇದು ಕರ್ನಾಟಕ. ಇಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿಯಲ್ಲಿ ನಡಾವಳಿ ಬೇಕಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ. ಮರಾಠಿಯಲ್ಲಿ ನಡಾವಳಿ ಕೊಡಬಾರದು’ ಎಂದರು. ಬಿಜೆಪಿ ಸದಸ್ಯರೂ ದನಿಗೂಡಿಸಿದರು.
ವಾಗ್ವಾದ ಜೋರಾದಾಗ, ಎಂಇಎಸ್ ಬೆಂಬಲಿತ ಸದಸ್ಯರು ಸಭಾತ್ಯಾಗ ಮಾಡಿದರು. ಮೇಯರ್ ಮಂಗೇಶ ಪವಾರ ಈ ಹಂತದಲ್ಲಿ ಕೆಲಹೊತ್ತು ಸಭೆ ಮುಂದೂಡಿದರು.
‘ಕಾಂಗ್ರೆಸ್ ಬೆಂಬಲದಿಂದ ರವಿ ಸಾಳುಂಕೆ ಪ್ರತಿಬಾರಿ ಹೀಗೆ ವರ್ತಿಸುತ್ತಾರೆ. ಶಾಸಕ ಆಸಿಫ್ ಸೇಠ್ ಅವರನ್ನು ನಿಯಂತ್ರಿಸಬೇಕು’ ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದರು.
ಒಳಗಡೆ ಏರುಧ್ವನಿಯ ಚರ್ಚೆ ಆರಂಭದಂತೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಧಿಕ್ಕಾರ ಕೂಗಿದರು.
‘ಮರಾಠಿಯಲ್ಲಿ ನಡಾವಳಿ ಕೇಳಿದವರ ಸದಸ್ಯತ್ವ ರದ್ದುಮಾಡಿ, ಗಡಿಪಾರು ಮಾಡಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಆಗ್ರಹಿಸಿದರು. ಪೊಲೀಸರು ಸಂಘಟನೆಯ ಕಾರ್ಯ ಕರ್ತರನ್ನು ಹೊರಗೆ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.