ಬೆಳಗಾವಿಯ ಬಸವನ ಕುಡಚಿಯ ದೇವರಾಜ ಅರಸು ಕಾಲೊನಿಯಲ್ಲಿ ಬುಧವಾರ, ಸ್ಥಳೀಯರು ಬಸ್‌ಗಾಗಿ ರಸ್ತೆ ಬದಿ ಕಾಯುತ್ತ ನಿಂತಿದ್ದರು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ಈ ಬಡಾವಣೆಗಳಿಗೆ ನಿತ್ಯ ಸಂಚರಿಸುವುದು ಸಾರಿಗೆ ಸಂಸ್ಥೆಯ ಒಂದೇ ಬಸ್. ಒಂದೆಡೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಮತ್ತೊಂದೆಡೆ ಬಸ್‌ಗಾಗಿ ಕಾಯುತ್ತ ನಿಲ್ಲಲು ಒಂದೂ ತಂಗುದಾಣ ಇಲ್ಲ.
ನಗರದ ಹೊರವಲಯದ ಬಸವನ ಕುಡಚಿಯ ದೇವರಾಜ ಅರಸು ಕಾಲೊನಿ ಮತ್ತು ಕರ್ನಾಟಕ ಹೌಸಿಂಗ್ ಬೋರ್ಡ್(ಕೆಎಚ್‌ಬಿ) ಕಾಲೊನಿ ನಿವಾಸಿಗಳಿಗೆ ಎದುರಾಗಿರುವ ಸಂಕಷ್ಟವಿದು.
ಬೆಳಗಾವಿಯಿಂದ ಐದಾರು ಕಿ.ಮೀ ದೂರದಲ್ಲಿರುವ ಈ ಬಡಾವಣೆಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದು, ಮಧ್ಯಮ ವರ್ಗದ ಜನರೇ ಹೆಚ್ಚಿದ್ದಾರೆ. ಕಲಿಕೆ ಮತ್ತು ದುಡಿಮೆಗಾಗಿ ಹಲವರು ಬೆಳಗಾವಿ ನಗರವನ್ನೇ ಅವಲಂಬಿಸಿದ್ದಾರೆ.
‘ನಗರ ಬಸ್ ನಿಲ್ದಾಣ(ಸಿಬಿಟಿ)ದಿಂದ ದೇವರಾಜ ಅರಸ್ ಕಾಲೊನಿ, ಕೆಎಚ್‌ಬಿ ಕಾಲೊನಿಗೆ ಒಂದೇ ಬಸ್ ಸಂಚರಿಸುತ್ತದೆ. ಬೆಳಗಾವಿ–ಬಾಗಲಕೋಟೆ ಹೆದ್ದಾರಿಯಿಂದ 2 ಕಿ.ಮೀ. ಒಳಗಿರುವ ನಮ್ಮ ಬಡಾವಣೆಗಳಿಗೆ ಇದೊಂದೇ ಬಸ್ ಆಸರೆ. ಸಂಚಾರ ಸಮಸ್ಯೆ ಕಾರಣದಿಂದ ಬಸ್ ಸಕಾಲಕ್ಕೆ ಬಾರದ್ದರಿಂದ ಸಮಸ್ಯೆಯಾಗುತ್ತಿದೆ’ ಎಂದು ಸ್ಥಳೀಯ ಸುಭಾಷಚಂದ್ರ ಮುಷ್ಟಗಿ ಹೇಳಿದರು.
‘ಸಿಬಿಟಿಯಿಂದ ನಮ್ಮ ಬಡಾವಣೆಗಳಿಗೆ ರಾತ್ರಿ 8.45ಕ್ಕೆ ಕೊನೇ ಬಸ್ ಹೊರಡುತ್ತದೆ. ಆ ನಂತರ ಬೇರೆ ಬಸ್‌ನಲ್ಲಿ ಬೆಳಗಾವಿ–ಬಾಗಲಕೋಟೆ ಹೆದ್ದಾರಿಯವರೆಗೆ ಬಂದು, ಅಲ್ಲಿಂದ ನಡೆದು ಬರುವುದು ಅನಿವಾರ್ಯವಾಗಿದೆ. ಹಾಗಾಗಿ, ಸಿಬಿಟಿಯಿಂದ ರಾತ್ರಿ 9.30ಕ್ಕೆ ಕೊನೇ ಬಸ್ ಸಂಚರಿಸಲು ವ್ಯವಸ್ಥೆ ಮಾಡಬೇಕು’ ಎಂದು ಮಹೇಶ ಹಿರೇಮಠ ಒತ್ತಾಯಿಸಿದರು.
‘ನಮ್ಮ ಬಡಾವಣೆಗಳಿಗೆ ಎರಡು ಬಸ್ ಸಂಚರಿಸಬೇಕು. ಕನಿಷ್ಠ ಅರ್ಧ ತಾಸಿಗೊಂದು ಬಸ್ ಕಾರ್ಯಾಚರಣೆಗೆ ಕ್ರಮ ವಹಿಸುವಂತೆ ಹಲವು ಬಾರಿ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಸ್ಪಂದನೆ ಸಿಕ್ಕಿಲ್ಲ’ ಎಂದು ಶೇಖರಯ್ಯ ಕೊರಗಲ್ಲಮಠ ಬೇಸರ ವ್ಯಕ್ತಪಡಿಸಿದರು.
‘ನಮ್ಮ ಬಡಾವಣೆಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿವೆ. ಹಾಗಾಗಿ, ಪಾಲಿಕೆಯೊಂದಿಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಸಹ ಇಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಬಹುದು’ ಎಂದು ದುಂಡಯ್ಯ ರೋಗಿಮಠ ತಿಳಿಸಿದರು.
ಸಮರ್ಪಕವಾಗಿ ಬಸ್ ಸೌಕರ್ಯ ತಂಗುದಾಣಗಳನ್ನೂ ನಿರ್ಮಿಸಸಿದಿದ್ದರೆ ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಬೇಕಾಗುತ್ತದೆ ಮಹಾಂತೇಶ ರಣಗಟ್ಟಿಮಠ ಸ್ಥಳೀಯ ಕೆಎಚ್‌ಬಿ ಕಾಲೊನಿ
ದೇವರಾಜ ಅರಸ್ ಕಾಲೊನಿ ಕೆಎಚ್‌ಬಿ ಕಾಲೊನಿಯಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸುವ ಕುರಿತಾಗಿ ಪರಿಶೀಲಿಸಿ ಕ್ರಮ ವಹಿಸುತ್ತೇವೆ ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ
‘ಮಳೆ ಬಿಸಿಲಲ್ಲೇ ಕಾಯಬೇಕು’
‘ದೇವರಾಜ ಅರಸ್ ಕಾಲೊನಿ ಮತ್ತು ಕೆಎಚ್‌ಬಿ ಕಾಲೊನಿಯಲ್ಲಿ ಬಸ್‌ಗಾಗಿ ಆರು ನಿಲುಗಡೆ ಸ್ಥಳಗಳಿವೆ. ಆದರೆ ಒಂದು ಕಡೆಯೂ ತಂಗುದಾಣವಿಲ್ಲ. ಹಾಗಾಗಿ ಮಳೆ ಬಿಸಿಲಲ್ಲೇ ಬಸ್‌ಗಾಗಿ ಕಾಯುತ್ತ ನಿಲ್ಲುವಂತಾಗಿದೆ’ ಎಂದು ಸಿದ್ಧಾರ್ಥ ಕೆರೂರಕರ ಅಸಹಾಯಕತೆ ವ್ಯಕ್ತಪಡಿಸಿದರು. ಪರ್ಯಾಯ ರಸ್ತೆ: ‘ಸಿಬಿಟಿಯಿಂದ ಬರುವ ಬಸ್ ಬಸವನ ಕುಡಚಿಯ ಕಲ್ಮೇಶ್ವರ ಹಾಗೂ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ನಮ್ಮ ಬಡಾವಣೆಗಳಿಗೆ ಬರುತ್ತದೆ. ಪ್ರತಿವರ್ಷ ಈ ದೇವಸ್ಥಾನದಲ್ಲಿ ಒಂದು ವಾರ ಜಾತ್ರೆ ನಡೆದಾಗ ನಮ್ಮ ಬಡಾವಣೆಗಳಿಗೆ ಬಸ್ಸೇ ಬರುವುದಿಲ್ಲ. ಹಾಗಾಗಿ ಬೆಳಗಾವಿ ನಗರಕ್ಕೆ ತೆರಳಲು ಪರ್ಯಾಯ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆಯೂ ಇದೆ’ ಎಂದು ಆನಂದ ಶಿವಯೋಗಿಮಠ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.