ADVERTISEMENT

ಕಾರ್ ಡಿಕ್ಕಿ: ಇಬ್ಬರು ಮಹಿಳೆಯರು ಸಾವು

​ಪ್ರಜಾವಾಣಿ ವಾರ್ತೆ
Published 25 ಮೇ 2020, 11:58 IST
Last Updated 25 ಮೇ 2020, 11:58 IST
   

ಬೆಳಗಾವಿ: ತಾಲ್ಲೂಕಿನ ಮುತಗಾ-ನಿಲಜಿ ಗ್ರಾಮಗಳ ನಡುವಿನ ಬಾಚಿ-ರಾಯಚೂರು ರಾಜ್ಯ ಹೆದ್ದಾರಿ ಬದಿಯಲ್ಲಿ ಅಂಚೆ ಕಚೇರಿ ಎದುರು ಭಾನುವಾರ ತಡರಾತ್ರಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯರಿಬ್ಬರು ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಮೃತಪಟ್ಟರು. ಇನ್ನೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ‌.

ಮುತಗಾ ಗ್ರಾಮದ ಪ್ರಭಾವತಿ ಕಾಲೊನಿಯ ಸವಿತಾ ಬಾಲಕೃಷ್ಣ ಪಾಟೀಲ (47) ಹಾಗೂ ವಿದ್ಯಾ ಬಾವು ಪಾಟೀಲ (45) ಮೃತರು. ಗಾಯಗೊಂಡಿರುವ ಶಾಂತಾ ಕೃಷ್ಣ ಚೌಗುಲೆ (55) ಎನ್ನುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಚಾಲಕ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಅಪಘಾತ ಮಾಡಿದವರನ್ನು ಬೆಳಗಾವಿಯಿಂದ ಸಾಂಬ್ರಾ ಕಡೆಗೆ ಹೋಗುತ್ತಿದ್ದ ಬಿಜೆಪಿ ಯುವ ಮೋರ್ಚಾದ ಮುಖಂಡ, ಕೆ.ಎಚ್‌. ಬಾಳೇಕುಂದ್ರಿ ಯುವರಾಜ‌ ಅನಂತರಾವ್ ಜಾಧವ ಎಂದು ಗುರುತಿಸಲಾಗಿದೆ. ಕಾರು ವಾಕ್ ಮಾಡುತ್ತಿದ್ದವರಿಗೆ ಡಿಕ್ಕಿಯಾಗಿ ಮುಂದೆ ಹೋಗಿ ಮನೆಗೆ ಗುದ್ದಿ ನಿಂತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ವಿದ್ಯಾ ಪಾಟೀಲ ಅವರ ಪತಿ ಕೇರಳದ ಕೊಚ್ಚಿಯಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೃತ ಸವಿತಾ ಪತಿ ಹಾಗೂ ಗಾಯಗೊಂಡಿರುವ ಶಾಂತಾ ಪತಿ ನಿವೃತ್ತ ಸೈನಿಕರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಡಿಸಿಪಿ ಯಶೋದಾ ವಂಟಗೋಡಿ, ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಇನ್ ಸ್ಪೆಕ್ಟರ್ ವಿಜಯಕುಮಾರ ಶಿನ್ನೂರ ಭೇಟಿ ನೀಡಿ ಪರಿಶೀಲಿಸಿದರು.ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.